Malenadu Mitra
ರಾಜ್ಯ ಶಿವಮೊಗ್ಗ

ಅರಸು ಎಂಬ ಪುಣ್ಯಾತ್ಮನಿಂದ ಪರಿಶಿಷ್ಟರು, ಹಿಂದುಳಿದವರು ಭೂ ಒಡೆಯರಾದರು, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕಾರ್ಯಕ್ರಮದಲ್ಲಿ ಭೂ ಹೋರಾಟ ಮೆಲುಕು ಹಾಕಿದ ಕಾಗೋಡು ತಿಮ್ಮಪ್ಪ

ಅರಸು ಅಂತಹ ಪುಣ್ಯಾತ್ಮ ಮುಖ್ಯಮಂತ್ರಿ ಆಗದಿದ್ದರೆ ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ವರ್ಗದವರು ಭೂಮಿಯ ಒಡೆತನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ ಅರಸು ಸ್ಮರಣೆ ಕಾರ್ಯಕ್ರಮದಲ್ಲಿ ಅವರು ದಿ.ದೇವರಾಜ ಅರಸು ಅವರ ಸಾಮಾಜಿಕ ನ್ಯಾಯ ಅವರ ಆಡಳಿತ ಮತ್ತು ತಮಗೆ ಅರಸು ಅವರೊಂದಿಗೆ ಇದ್ದ ಒಡನಾಟಗಳನ್ನು ಮೆಲುಕು ಹಾಕಿದರು. ಬಡವರು, ಕೆಳವರ್ಗದವರು ಹಾಗೂ ಅವಿದ್ಯಾವಂತರು ತಮ್ಮ ಹಕ್ಕು ಪಡೆಯುವುದು ಕನಸು ಎಂಬಂತಿದ್ದ ಕಾಲದಲ್ಲಿ ಅರಸು ಆಡಳಿತ ಕರ್ನಾಟಕದ ಮಟ್ಟಿಗೆ ಒಂದು ಸುವರ್ಣಕಾಲ. ಮೇಲ್ವರ್ಗದ ದೊಡ್ಡ ರಾಜಕೀಯ ಶಕ್ತಿಯನ್ನು ಎದುರು ಹಾಕಿಕೊಂಡು ದೇವರಾಜ ಅರಸು ಅವರು ಭೂ ಸುಧಾರಣೆಯಂತಹ ಕ್ರಾಂತಿಕಾರಿ ಕಾನೂನು ಜಾರಿಗೆ ತಂದರು. ಆದರೆ ಇಂದು ಆ ಕಾನೂನಿನ ಫಲಾನುಭವಿಗಳಿಗೆ ಎಲ್ಲಾ ಮರೆತು ಹೋಗಿದೆ ಹಾಗೂ ನವ ಪೀಳಿಗೆಗೆ ಆ ಸತ್ಯ ಗೊತ್ತಿಲ್ಲ ಎಂದು ಕಾಗೋಡು ತಿಮ್ಮಪ್ಪ ವಿಷಾದ ವ್ಯಕ್ತ ಪಡಿಸಿದರು.

ಐತಿಹಾಸಿಕ ಕಾಗೋಡು ಚಳವಳಿ ನಡೆದಾಗ ನಾನಿನ್ನೂ ಹೈಸ್ಕೂಲ್ ವಿದ್ಯಾರ್ಥಿ ೧೯೫೧ ರಲ್ಲಿ ನಡೆದ ಹೋರಾಟ ಆರಂಭವಾಗಿದ್ದು, ಅದಕ್ಕೆ ಸಮಾಜವಾದಿ ಮೇರು ನಾಯಕರಾದ ಜಯಪ್ರಕಾಶ್ ನಾರಾಯಣ್, ರಾಮಮನೋಹರ ಲೋಹಿಯಾ, ಶಾಂತವೇರಿ ಗೋಪಾಲಗೌಡರು ಬಂದಿದ್ದರು. ಈ ಚಳವಳಿಯ ಪರಿಣಾಮದಿಂದ ೧೯೬೨ರಲ್ಲಿಯೇ ಭೂ ಕಂದಾಯ ತಿದ್ದುಪಡಿ ಕಾಯಿದೆ ರೂಪಿಸಲಾಗಿತ್ತು. ಆದರೆ ದೇವರಾಜು ಅರಸು ಅವರು ಮುಖ್ಯಮಂತ್ರಿಯಾಗುವತನಕ ಅದು ಜಾರಿಯಾಗಿರಲಿಲ್ಲ. ೧೯೭೨ ರಲ್ಲಿ ನಾನು ಶಾಸನ ಸಭೆಗೆ ಹೋದ ಮೇಲೆ ಗೇಣಿದಾರನ ಮಗನಾಗಿ ಹಕ್ಕು ಪ್ರತಿಪಾದಿಸಿದೆ. ಮೂರು ತಾಸು ನಮ್ಮ ಮಾತು ಆಲಿಸಿದ ಮುಖ್ಯ ಮಂತ್ರಿ ಅರಸು ಅವರು ಕೊನೆಗೆ ೧೫ ಜನರ ಸಮಿತಿ ರಚನೆ ಮಾಡಿದರು. ಆ ಸಮಿತಿಯ ಭಾಗವಾಗಿದ್ದ ನಾನು ಉಳಿದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವರದಿ ಸಲ್ಲಿಸಿದೆವು. ಮುಖ್ಯಮಂತ್ರಿ ಅರಸು ಅವರು ನಮ್ಮ ಸಮಿತಿ ವರದಿಯನ್ನು ಅಂಗೀಕರಿಸಿ ಭೂ ಸುಧಾರಣಾ ಕಾಯಿದೆ ಜಾರಿಗೆ ತಂದರು ಎಂದು ತಮ್ಮ ಅಂದಿನ ದಿನಗಳನ್ನು ಕಾಗೋಡು ಸ್ಮರಿಸಿದರು.


ಹೋರಾಟ ನಿರಂತರ:

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವುದೇ ಜನಪರ ಕಾನೂನು ಜಾರಿಗೆ ತರುವುದು ಸುಲಭ ಸಾಧ್ಯವಲ್ಲ. ಹಲವು ಧರ್ಮ, ಸಾವಿರಾರು ಜಾರಿ, ಸಾವಿರಾರು ಭಾಷೆಯ ಜನರ ನಡುವೆ ಸಮನ್ವಯತೆ ತರುವುದು  ಕಷ್ಟ ಸಾಧ್ಯವಾದ ಕೆಲಸ ಇದಕ್ಕೆ ನಮ್ಮ ಸಂವಿಧಾನವೇ ದಾರಿದೀಪ. ಶ್ರೇಷ್ಠ ಸಂವಿಧಾನ ರೂಪಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಈ ದೇಶದಲ್ಲಿ ಸರ್ವಜನರಿಗೂ ನ್ಯಾಯ ಸಿಗುವಂತೆ ಮಾಡಿದರಲ್ಲದೆ, ಧ್ವನಿ ಇಲ್ಲದವರಿಗೆ ಸ್ವಾಭಿಮಾನ ನೀಡಿದರು. ಈ ಸಮಾಜದಲ್ಲಿ ಹೋರಾಟ ಎಂಬುದು ನಿರಂತರ ಪ್ರಕ್ರಿಯೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ತಮ್ಮ ಹಕ್ಕು ಪಡೆಯಲು ಹೋರಾಟ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದರ ಅವಕಾಶವನ್ನು ಇಂದಿನ ಯುವಜನತೆ ಬಳಸಿಕೊಳ್ಳಬೇಕು ಎಂದು ಕಾಗೋಡು ಸಲಹೆ ನೀಡಿದರು.

ಭಾವನೆಗಳ ಕೆದುಕುವುದು ಸುಲಭ

ಹೋರಾಟ& ಜೈಲು ಅನ್ಯಾಯ ಬಯಲು ಎಂದು ನಾವೆಲ್ಲ ಹೋರಾಟ ಮಾಡಿಕೊಂಡು ಬಂದವರು. ಆದರೆ ಇಂದು ಭಾವನೆಗಳನ್ನು ಕೆದಕಿ ರಾಜಕೀಯ ಲಾಭ ಮಾಡಿಕೊಳ್ಳಲಾಗುತ್ತಿದೆ. ರಾಜ್ಯಾಂಗದ ಮೊದಲ ಪುಟದಲ್ಲಿಯೇ ಒಬ್ಬ ರಾಜಕೀಯ ನಾಯಕನಿಗೆ ಬೇಕಾದ ನೀತಿ ಸಂಹಿತೆಗಳಿವೆ ಆದರೆ ಇಂದು ಫೋಟೋ, ಫ್ಲೆಕ್ಸ್‌ಗಳನ್ನು ಹಾಕುವುದೇ ದೊಡ್ಡದು ಮಾಡಿಕೊಂಡ ನಾಯಕರು ರೂಪುಗೊಳ್ಳುತ್ತಿದ್ದಾರೆ. ಶಾಸಕ, ಸಂಸದರಾದರೆ ಸಾಲದು ಶಾಸನ ಸಭೆಯಲ್ಲಿ ಸಕ್ರಿಯರಾಗಿ ಭಾಗವಹಿಸಬೇಕು ಮತ್ತು ಕಾಯಿದೆ ತಿಳಿದುಕೊಂಡು ಅಲ್ಲಿ ಹೋರಾಟ ಮಾಡಬೇಕು ಎಂದು ಹೇಳಿದ ಕಾಗೋಡು ತಿಮ್ಮಪ್ಪ, ವಿವಿಧತೆಯಲ್ಲಿ ಏಕತೆ ಕಾಣುತ್ತಿರುವ ದೇಶ ನಮ್ಮದು ಎಲ್ಲ ಧರ್ಮ, ಜಾತಿಗಳ ಬಗ್ಗೆ ಸಮಾನ ಕಾಳಜಿ ಜನಪ್ರತಿನಿಧಿಗಳಿಗೆ ಇರಬೇಕು ಎಂದು ಹೇಳಿದರು.

ಭೂಮಿಯ ಸಮಸ್ಯೆ ಜೀವಂತ:

ಕೇಂದ್ರ ಮಟ್ಟದಲ್ಲಿ ಪರಿಹರಿಯಬೇಕಾದ ಹಲವು ಭೂಮಿಯ ಸಮಸ್ಯೆ ಇರುವ ಕಾರಣ ಅವುಗಳಿಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯವಿದೆ. ಈ ದಿಸೆಯಲ್ಲಿ ಹೋರಾಟ ಮಾಡಲು ನಾನೂ ಈಗಲೂ ಸಿದ್ದ. ಹೋರಾಟದಿಂದ ಮಾತ್ರ ನ್ಯಾಯ ಸಾಧ್ಯ. ನಾವಿರುವಾಗ ಮಲೆನಾಡಿನಲ್ಲಿ ಒಂದಷ್ಟು ಭೂಮಿಯ ಸಮಸ್ಯೆಯ ಬಗ್ಗೆ ಕೆಲಸ ಮಾಡಿದೆವು. ಭೂ ಸುಧಾರಣೆ ಕಾಯಿದೆಯಿಂದ ಈಗಿನ ಬಗರ್‌ಹುಕುಂ ಹೋರಾಟದ ತನಕ ಸಿಕ್ಕ ಅವಕಾಶ ಬಳಸಿಕೊಂಡು ಜನರ ಕೆಲಸ ಮಾಡಿದ್ದೇನೆ. ನನಗೆ ವಯಸ್ಸಾಯ್ತು ಮುಂದಿನ ಪೀಳೆಗೆ ಹೋರಾಟದ ಅನಿವಾರ್ಯತೆಯನ್ನು ಅರಿಯಬೇಕು. ಮತ್ತು ಕಾನೂನು ತಿಳಿವಳಿಕೆಯಿಂದ ನ್ಯಾಯಾಂಗದಲ್ಲಿಯೂ ಹೋರಾಟ ಮಾಡಬೇಕೆಂದು ಹೇಳಿದರು.

ಚುನಾವಣೆ ರಾಜಕೀಯದಿಂದ ದೂರ:


ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದೆ, ಯಾರಿಗೂ ಅನ್ಯಾಯ ಮಾಡಿಲ್ಲ. ಜನರ ಕೆಲಸ ಮಾಡಿದೆ ಆದರೂ ನನ್ನನ್ನು ಕಳೆದ ಚುನಾವಣೆಯಲ್ಲಿ ಸೋಲಿಸಲಾಯಿತು. ಈಗ ಜನರ ಭಾವನೆ ಕೆರಳಿಸುವ ಮೂಲಕ ಮತ ಪಡೆಯುವ ತಂತ್ರವನ್ನು ಅನುಸರಿಸಲಾಗುತ್ತಿದೆ. ನಮ್ಮ ಹೋರಾಟದ ಫಲ ಉಣ್ಣುವವರೂ ಇಂದು ಅದನ್ನು ಮರೆತಿದ್ದಾರೆ ಎಂದು  ಕಾಗೋಡು ತಿಮ್ಮಪ್ಪ ಹೇಳಿದರು.

ಪರಿಶಿಷ್ಠರು, ಹಿಂದುಳಿದ ವರ್ಗದವರ ಭೂಮಿಯ ಹಕ್ಕು, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ್ದ ನನ್ನ ಮೇಲೆ ಹಿಂದಿನಿಂದಲೂ ಕೆಲ ವರ್ಗಕ್ಕೆ  ಸಿಟ್ಟಿದೆ. ನನ್ನ  ಉದ್ದೇಶ ಪ್ರಾಮಾಣಿಕವಾಗಿದ್ದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡಿದ್ದೆ. ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಬೇರೆ ಯಾವ ಕಾರಣವೂ ಇಲ್ಲ. ಆದರೆ ಈಗ ನಾನು ಚುನಾವಣೆ ರಾಜಕೀಯದಿಂದ ಮುಕ್ತಿ ಪಡದಿದ್ದೇನೆ. ಜನಪರ ಕೆಲಸ ಮಾಡಿದ ತೃಪ್ತಿ ನನಗಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಕಾಗೋಡು ತಿಮ್ಮಪ್ಪ ಅವರನ್ನು ಈ ಸಂದರ್ಭ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.


ಪತ್ರಕರ್ತರು ಈ ಸಮಾಜದಲ್ಲಿ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಸಮಾಜದ ಎಲ್ಲಾ ಆಗುಹೋಗುಗಳನ್ನು ಮುಕ್ತ ಮನಸ್ಸಿನಿಂದ ನೋಡಬೇಕು. ಸತ್ಯದ ಮತ್ತು ಜನರ ಪರ ಇರಬೇಕು. ಯಾವುದೇ ಹೋರಾಟ ಮತ್ತು ಉತ್ತಮ ಕೆಲಸಗಳನ್ನು ಪ್ರಾಮಾಣಿಕವಾಗಿ ದಾಖಲಿಸಬೇಕು. ನಾವು ಮಾಡಿದ್ದನ್ನು ಮುಂದಿನ ಪರಿವಾರಕ್ಕೆ ತಲುಪಿಸುವ ಪುಣ್ಯದ ಕೆಲಸವನ್ನು ಪತ್ರಕರ್ತರು ಮಾಡಬೇಕು. ನನ್ನ ರಾಜಕೀಯ ಹೋರಾಟದಲ್ಲಿ ಮಾಧ್ಯಮದವರ ಬೆಂಬಲ ಸಿಕ್ಕಿದೆ ಅದಕ್ಕೆ ನಾನು ಋಣಿ

ಕಾಗೋಡು ತಿಮ್ಮಪ್ಪ, ಮಾಜಿ ಸಚಿವ

Ad Widget

Related posts

ಶಿಕಾರಿಪುರದಲ್ಲಿ ಕುರುಬ ಸಮಾಜದ ಸಮಾವೇಶ

Malenadu Mirror Desk

ಕಾಗೋಡು ತಿಮ್ಮಪ್ಪ ಯೋಗಕ್ಷೇಮ ವಿಚಾರಿಸಿದ ಹೋಮ್ ಮಿನಿಸ್ಟರ್

Malenadu Mirror Desk

ಅಪಘಾತ : ಕಟ್ಟೆಹಕ್ಲು ಹೆಡ್ ಮಾಸ್ಟರ್ ವೆಂಕಟೇಶ್ ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.