ಶಿವಮೊಗ್ಗ ನಗರದಲ್ಲಿ ಬಂಧಿತ ವ್ಯಕ್ತಿಗಳಿಗೆ ನಿಷೇಧಿತ ಉಗ್ರ ಸಂಘಟನೆ ಇಸ್ಲಾಂಮಿಕ್ ಸ್ಟೇಟ್(ಐ.ಎಸ್.ಐ.ಎಸ್) ಜೊತೆ ನಂಟು ಹೊಂದಿದ ಆರೋಪವಿದ್ದು, ಇಬ್ಬರು ಶಂಕಿತರಿಂದ ಬಾಂಬ್ ತಯಾರಿಗೆ ಬೇಕಿರುವ ಕಚ್ಚಾ ಸಾಮಗ್ರಿಗಳೂ ಸೇರಿದಂತೆ ಹಲವು ಮಹತ್ವದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ ಲಕ್ಷ್ಮೀ ಪ್ರಸಾದ್ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಅಮೃತಮಹೋತ್ಸವದಂದು ಪ್ರೇಮ್‌ಸಿಂಗ್ ಮೇಲಿನ ಚಾಕು ಇರಿತ ಪ್ರಕರಣದಲ್ಲಿ ಜಬೀ ಎಂಬಾತನ ಬಂಧನವಾಗಿತ್ತು. ಜಬೀ ವಿಚಾರಣೆ ಮಾಡಿದಾಗ ಶಾರಿಕ್ ವಿಚಾರ ಬೆಳಕಿಗೆ ಬಂತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಈವರೆಗೆ ೧೧ ಸ್ಥಳಗಳಲ್ಲಿ ದಾಳಿ ಮಾಡಿ ಬಂಧಿತರಿಂದ ೧೪ ಮೊಬೈಲ್ ಮತ್ತು ೧ ಡಾಂಗಲ್, ಎರಡು ಲ್ಯಾಪ್‌ಟಾಪ್, ಒಂದು ಪೆನ್‌ಡ್ರೈವ್ ಹಾಗೂ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಸ್ಫೋಟದ ಸ್ಥಳದಲ್ಲಿ ಬಾಂಬ್‌ನ ಅವಶೇಷಗಳು ಪತ್ತೆಯಾಗಿವೆ. ಆಗಸ್ಟ್ ತಿಂಗಳಲ್ಲಿ ರಾಷ್ಟ್ರಧ್ವಜ ಸುಟ್ಟಿರುವ ಮಾಹಿತಿಯೂ ಲಭ್ಯವಾಗಿದೆ. ಬಂಧಿತರಿಂದ ಬಾಂಬ್ ತಯಾರಿಸಲು ಬೇಕಾದ ಸಾಮಗ್ರಿಗಳನ್ನೂ ವಶಪಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಆರೋಪಿಗಳು ಶಿವಮೊಗ್ಗದ ತುಂಗಾನದಿಯ ದಡದಲ್ಲಿರುವ ಸ್ಥಳೀಯವಾಗಿ ಕೆಮ್ಮನಗುಂಡಿ ಎಂದು ಕರೆಯುವ ಜಾಗದಲ್ಲಿ ತಾವು ತಯಾರಿಸಿದ ಬಾಂಬ್ ಅನ್ನು ಪ್ರಾಯೋಗಿಕವಾಗಿ ಸ್ಫೋಟ ಮಾಡಿರುತ್ತಾರೆ. ಪ್ರಾಯೋಗಿಕವಾಗಿ ಮಾಡಿರುವ ಸ್ಫೋಟವು ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಸ್ಫೋಟಿಸಲು ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿ ಇಟ್ಟಿದ್ದರು.ಸ್ವಾತಂತ್ರ್ಯ ದಿನಾಚರಣೆಯ ನಂತರದ ದಿನಗಳಲ್ಲಿ ಭಾರತ ದೇಶದ ರಾಷ್ಟ್ರ ಧ್ವಜವನ್ನು ಬಾಂಬ್ ಸಿಡಿಸಿದ ಜಾಗದ ಹತ್ತಿರ ಸುಟ್ಟು ಹಾಕಿ ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದರು. ಅಲ್ಲದೆ ಬಾಂಬ್ ತಯಾರಿಸಲು ಬೇಕಾದ ಹಣವನ್ನು ಶಾರೀಕ್ ಕ್ರಿಪ್ಟೊ ಕರೆನ್ಸಿ ಮೂಲಕ ವಹಿವಾಟು ನಡೆಸಿದ್ದ ಎಂದು ತಿಳಿಸಿದರು.
ಬಂಧಿತ ಆರೋಪಿಗಳು ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತಕ್ಕೆ ಬದ್ಧರಾಗಿದ್ದರು. ನಮಗೆ ಬ್ರಿಟೀಷರಿಂದ ಮಾತ್ರ ಸ್ವಾತಂತ್ರ್ಯ ಸಿಕ್ಕಿದೆ. ನೈಜ ಸ್ವಾತಂತ್ರ್ಯ ಇಲ್ಲ. ಇಸ್ಲಾಮಿಕ್ ಸ್ಟೇಟ್ ನಿರ್ಮಾಣ, ಷರಿಯಾ ಕಾನೂನುಗಳಿಂದ ಮಾತ್ರ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಪ್ರಾಯೋಗಿಕವಾಗಿ ಬಾಂಬ್ ಸ್ಫೋಟಿಸಿದ್ದ ಆರೋಪಿಗಳು ನೈಜ ಬಾಂಬ್ ಸ್ಫೋಟಕ್ಕೆ ಸಿದ್ಧತೆ ಮಾಡಿಕೊಂಡಿದ್ದರು ಎಂದು ತನಿಖೆ ವೇಳೆ ಬಯಲಾಗಿದೆ ಎಂದು ತಿಳಿಸಿದರು.
ಆರೋಪಿತರು ತಮ್ಮ ಮೊಬೈಲ್ ಗಳಲ್ಲಿ ಟೆಲಿಗ್ರಾಂ ಆಪ್ ಹೊಂದಿದ್ದರು. ಇಸ್ಲಾಂಮಿಕ್ ಸ್ಟೇಟ್ (ಐ.ಎಸ್.ಐ.ಎಸ್) ಇದರ ಅಧಿಕೃತ ಮಾದ್ಯಮವಾದ ಆಲ್-ಹಯತ್ ನ ಟೆಲಿಗ್ರಾಂ ಚಾನಲ್ ನ ಸದಸ್ಯರಾಗಿದ್ದರು. ಆಲ್-ಹಯತ್ ನಿಂದ ಐಸಿಎಸ್ ರವರ ಬಹಳಷ್ಟು ಪ್ರಚಾರಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಆರೋಪಿತರು ಸ್ವೀಕರಿಸುತ್ತಿದ್ದರು. ಶಾರೀಕ್ ಎಂಬಾತ ಹಂಚಿಕೊಂಡ ಪಿ.ಡಿ.ಎಫ್, ಫೈಲ್ಗ್‌ಳ ಮತ್ತು ವಿಡಿಯೊಗಳಲ್ಲಿ ಬಾಂಬ್ ತಯಾರು ಮಾಡುವ ವಿಧಾನ ತಿಳಿದುಕೊಂಡು ಅದಕ್ಕೆ ಬೇಕಾಗಿರುವ ಟೈಮರ್, ರೀಲೆ ಸರ್ಕ್ಯೂಟ್‌ಗಳನ್ನು ಅಮೇಜಾನ್ ಮುಖಾಂತರ ಖರೀದಿಸಿದ್ದು, ಶಿವಮೊಗ್ಗದಲ್ಲಿ ೯ ವೋಲ್ಟ್ ನ ಎರಡು ಬ್ಯಾಟರಿ, ಸ್ವಿಚ್, ವೈರ್, ಮ್ಯಾಚ್ ಬಾಕ್ಸ್ ಹಾಗು ಇತರೆ ಸ್ಫೋಟಕ ವಸ್ತುಗಳನ್ನು ಖರೀದಿಸಿ ಬಾಂಬ್‌ನ್ನು ತಯಾರು ಮಾಡಿದ್ದರು ಎಂದರು.ಜಬೀ ಬಂಧನದ ನಂತರ ಶಾರೀಕ್ ತಲೆಮರೆಸಿಕೊಂಡಿದ್ದು,ಶೀಘ್ರದಲ್ಲೇ ಬಂಧಿಸಲಾಗುವುದು ಎಂದರು.
ಶಂಕಿತರ ಕರಾಳ ಚಟುವಟಿಕೆ
* ಪಿಯುಸಿ ಓದುತ್ತಿರುವಾಗಲೇ ಸೈಯದ್ ಯಾಸಿನ್‌ಗೆ ಮಾಜ್ ಮುನೀರ್ ಅಹ್ಮದ್ ಎಂಬಾತನ ಪರಿಚಯವಾಗಿತ್ತು. ಅವನ ಮುಖಾಂತರ ಶಾರೀಖ್ ಪರಿಚಯವಾಯಿತು. ಶಾರೀಕ್ ಮುಸ್ಲಿಂ ಮೂಲಭೂತವಾದದ ಬಗ್ಗೆ ಸದಾ ಮಾತನಾಡುತ್ತಿದ್ದ. ಅಂಥದ್ದೇ ಫೈಲ್‌ಗಳನ್ನು ಹಂಚಿಕೊಳ್ಳುತ್ತಿದ್ದ.
* ಐಸಿಸ್ (ಇಸ್ಲಾಮಿಕ್ ಸ್ಟೇಟ್) ಮಾದರಿಯಲ್ಲಿ ಭಯೋತ್ಪಾದಕ ಕೃತ್ಯ ಮುಂದುವರಿಸಲು ಆರೋಪಿಗಳು ಯೋಚಿಸಿದ್ದರು. ಕಾಫೀರರ (ಇಸ್ಲಾಂ ಧರ್ಮಕ್ಕೆ ಸೇರದವರು) ವಿರುದ್ಧ ಜಿಹಾದ್ ನಡೆಸಲು ಇವರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
* ಐಸಿಸ್‌ನ ಅಧಿಕೃತ ಅಲ್-ಹಯಾತ್ ಟೆಲಿಗ್ರಾಮ್ ಚಾನೆಲ್‌ಗೆ ಸದಸ್ಯರಾಗಿದ್ದರು.
* ಶಾರೀಖ್ ಹಂಚಿಕೊಂಡಿದ್ದ ಫೈಲ್‌ಗಳಲ್ಲಿದ್ದ ಬಾಂಬ್ ತಯಾರಿಸುವ ವಿವರ ಅಭ್ಯಾಸ ಮಾಡಿದ್ದ ಇತರರು ಅದಕ್ಕೆ ಬೇಕಿರುವ ಟೈಮರ್, ರಿಲೆ, ಸರ್ಕೀಟ್‌ಗಳನ್ನು ಅಮೆಜಾನ್ ಮೂಲಕ ಖರೀದಿಸಿದ್ದರು. ಇತರ ಅಗತ್ಯ ವಸ್ತುಗಳನ್ನು ಶಿವಮೊಗ್ಗದ ಸ್ಥಳೀಯ ವರ್ತಕರಿಂದ ಖರೀದಿಸಿದ್ದರು.
* ರಾಷ್ಟ್ರಧ್ವಜವನ್ನು ಸುಟ್ಟು, ಅದನ್ನು ವಿಡಿಯೊ ಮಾಡಿಕೊಂಡಿದ್ದಾರೆ. ಕೆಮ್ಮನ ಗುಂಡಿಯಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟ ನಡೆಸಿದ್ದರು.
ಬಂಧಿತ ಆರೋಪಿಗಳು ಪ್ರಾಯೋಗಿಕ ಸ್ಫೋಟಗಳನ್ನು ನಡೆಸುತ್ತಿದ್ದು, ಮುಂದೆ ದೊಡ್ಡ ಮಟ್ಟದ ಸ್ಫೋಟಕ ತಯಾರಿ ಮತ್ತು ಪ್ರಯೋಗಕ್ಕೆ ಸಿದ್ದತೆ ಮಾಡಿದ್ದರು. ಯಾಸೀನ್‌ಗೆ ಪಿಯುಸಿಯಲ್ಲಿರುವಾಗಲೇ ಮಾಜ್ ಮುನೀರ್ ಪರಿಚಯವಾಗಿತ್ತು.
ಲಕ್ಷ್ಮೀಪ್ರಸಾದ್ ,ಎಸ್.ಪಿ.