ಭಾರತ್ ಸಂಚಾರ ನಿಗಮವು ಹೈಸ್ಪೀಡ್ ಇಂಟರ್‌ನೆಟ್ ಸೌಲಭ್ಯವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಒದಗಿಸುವ ಸಂಬಂಧ ರೂಪಿಸಲಾಗಿರುವ ಹೊಸ ಯೋಜನೆಯನ್ನು ಪ್ರಾಯೋಗಿಕವಾಗಿ ದೇಶದ ನಾಲ್ಕು ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, ಆ ನಾಲ್ಕು ಪ್ರದೇಶಗಳ ಪೈಕಿ ಜಿಲ್ಲೆಯ ಸಾಗರ ತಾಲೂಕು ಒಂದಾಗಿರುವುದು ಹೆಮ್ಮೆಯ ಸಂಗತಿ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಅವರು ತೀರ್ಥಹಳ್ಳಿ ಸಮೀಪದ ಗುಡ್ಡೇಕೇರಿ ಹೊಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ಕುರಿತು ಮಾಹಿತಿ ನೀಡಿದರು. ಜಿಲ್ಲೆಯ ಮಲೆನಾಡು ಭಾಗದಲ್ಲಿ ವಿದ್ಯುನ್ಮಾನ ತಂತ್ರಜ್ಞಾನವನ್ನು ಬಳಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ರಾಜ್ಯದಲ್ಲಿನ ಇತರೆ ಕಂಪನಿಗಳಿಗೆ ಅತ್ಯಗತ್ಯವಾಗಿರುವ ವ್ಯವಸ್ಥಿತವಾಗಿ ಇಂಟರ್‌ನೆಟ್ ಸೌಲಭ್ಯವನ್ನು ಒದಗಿಸುವಂತೆ ಈ ಹಿಂದೆಯೆ ಕೇಂದ್ರ ಟೆಲಿಕಾಂ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿತ್ತು.
ಈ ಮನವಿಗೆ ಸ್ಪಂದಿಸಿರುವ ಹಾಗೂ ಪ್ರಾಯೋಗಿಕವಾಗಿ ಮಲೆನಾಡಿನ ಸಾಗರ ತಾಲೂಕನ್ನು ಆಯ್ಕೆಗೊಳಿಸಿರುವ ಕೇಂದ್ರ ಸಚಿವರಿಗೆ ಅಭಿನಂದಿಸುತ್ತೇನೆ. ನಮ್ಮ ಲೋಕಸಭಾ ವ್ಯಾಪ್ತಿಯಲ್ಲಿ ೨೫೦ಕ್ಕೂ ಹೆಚ್ಚಿನ ಟವರ್‌ಗಳನ್ನು ಅಳವಡಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‌ನೆಟ್ ಸೌಲಭ್ಯವನ್ನು ವಿಸ್ತರಿಸಲು ಕೇಂದ್ರ ಸರ್ಕಾರವು ಅಗತ್ಯ ಕ್ರಮವಹಿಸಿದೆ. ಈ ಯೋಜನೆಯಡಿ ಸಾಗರ ತಾಲೂಕಿನಲ್ಲಿ ಮೊಬೈಲ್ ಸಿಗ್ನಲ್ ದೊರೆಯದಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೩೬ ಪ್ರದೇಶಗಳನ್ನು ಗುರುತಿಸಿ, ೪ಜಿ ಸೇವೆ ಒದಗಿಸಲು ಅನುಮೋದನೆ ನೀಡಿದೆ ಎಂದರು.
ಡಿಸೆಂಬರ್ ಮಾಸಾಂತ್ಯದೊಳಗಾಗಿ ೪ಜಿ ಸೇವೆಯನ್ನು ಒದಗಿಸುವ ತಂತ್ರಾಂಶವನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡು ಸೇವೆಗೆ ಸನ್ನದ್ಧವಾಗಲಿದೆ ಎಂದ ಅವರು, ಈ ಯೋಜನೆಯು ೨೦೨೨ರ ನವೆಂಬರ್ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಈ ಯೋಜನೆಯ ಅನುಷ್ಠಾನದಿಂದ ಗ್ರಾಹಕರು ಸಂಪರ್ಕ ಸೌಲಭ್ಯ ಪಡೆಯಲು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. ಉಚಿತ ಮೋಡೆಮ್ ಬಿ.ಎಸ್.ಎನ್.ಎಲ್. ವತಿಯಿಂದ ವಿತರಿಸಲಾಗುವುದು. ೨೦೦ಎಂ.ಬಿ.ಪಿ.ಎಸ್ ವರೆಗಿನ ಸ್ಪೀಡ್ ಇರಲಿದೆ. ಮೊದಲ ೭೫ ದಿನಗಳವರೆಗೆ ಶುಲ್ಕ ರೂ.೨೭೫/-ನ್ನು ನಿಗಧಿಪಡಿಸಲಾಗಿದೆ ಎಂದರು. ಒಟ್ಟಾರೆಯಾಗಿ ಈ ಯೋಜನೆಯು ೨೦೨೩ರ ಡಿಸೆಂಬರ್ ಮಾಹೆಯೊಳಗಾಗಿ ಅನುಷ್ಠಾನಗೊಳ್ಳಲಿದೆ ಎಂದರು.