Malenadu Mitra
ರಾಜ್ಯ ಶಿವಮೊಗ್ಗ

ಶರಾವತಿ ಸಂತ್ರಸ್ತರ ಪರ ಕಾಂಗ್ರೆಸ್‌ನಿಂದ ಹೋರಾಟ : ಮಧುಬಂಗಾರಪ್ಪ

ಶಿವಮೊಗ್ಗ: ಶರಾವತಿ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ಸಿಗುವ ತನಕ ಕಾಂಗ್ರೆಸ್ ಬಹುದೊಡ್ಡ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶರಾವತಿ ಸಂತ್ರಸ್ಥರ ಸಮಸ್ಯೆಯನ್ನು ಬಿಜೆಪಿ ಸರ್ಕಾರ ದ್ವಿಗುಣಗೊಳಿಸುತ್ತಿದೆ. ಅರಣ್ಯ ಅಧಿಕಾರಿಗಳು ಸಂತ್ರಸ್ತರಿಗೆ ನೋಟಿಸ್ ನೀಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಸುಮಾರು ೧೮ ಸಾವಿರಕ್ಕೂ ಅಧಿಕ ಕುಟುಂಬಗಳು ಅತಂತ್ರವಾಗಿವೆ. ಇನ್ನು ನಾವು ಸುಮ್ಮನಿರುವುದಿಲ್ಲ. ಹಿರಿಯರಾದ ಕಾಗೋಡು ತಿಮ್ಮಪ್ಪ ಅವರ ಮಾರ್ಗದರ್ಶನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನೂ ಒಳಗೊಂಡಂತೆ ಬಹುದೊಡ್ಡ ಹೋರಾಟ ಪ್ರಾರಂಭಿಸುತ್ತೇವೆ ಎಂದರು.
ಕೇಂದ್ರ ಅರಣ್ಯ ಹಕ್ಕು ಕಾಯಿದೆ, ಶರಾವತಿ ಮುಳುಗಡೆ ಸಂತ್ರಸ್ತರ ಭೂಹಕ್ಕಿನ ಕಾಯಿದೆ ಸಮರ್ಪಕ ಅನುಷ್ಠಾನ, ಬಗರ್ ಹುಕುಂ ಸಮಸ್ಯೆ ಹಾಗೂ ಅಡಿಕೆ ಬೆಳೆಗಾರ ಸಮಸ್ಯೆ ಕುರಿತಂತೆ ಅಧ್ಯಯನ ವರದಿ ಸಲ್ಲಿಸಲು ಕೆಪಿಸಿಸಿಯಿಂದ ೯ ಜನರ ತಾಂತ್ರಿಕ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಕರ್ತವ್ಯ ಲೋಪದಿಂದಾಗಿ ಶರಾವತಿ ಮುಳುಗಡೆ ಸಂತ್ರಸ್ತರು ಜಮೀನು ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಪರಿಸರವಾದಿಗಳ ಹೆಸರಿನಲ್ಲಿ ಕೆಲವರು ಹೈಕೋರ್ಟ್‌ಗೆ ಹೋಗಿರುವುದರಿಂದ ಡಿ ನೋಟಿಫಿಕೇಶನ್ ರದ್ದಾಗಿದೆ. ಇದು ಇಡೀ ಶರಾವತಿ ಮುಳುಗಡೆ ಸಂತ್ರಸ್ತರ ಬದುಕಿನ ಪ್ರಶ್ನೆಯಾಗಿದೆ. ಸರಕಾರ ಸಂತ್ರಸ್ತರ ಪರ ನ್ಯಾಯಾಲಯದಲ್ಲಿ ಸರಿಯಾದ ವಾದ ಮಂಡನೆ ಮಾಡಲಿಲ್ಲ ಎಂದು ಮಧು ಬಂಗಾರಪ್ಪ ಆರೋಪಿಸಿದರು.

ಕಂದಾಯ ಕಾಯಿದೆ ೯೪ ಸಿ ಹಾಗೂ ೯೪ ಸಿಸಿ ಗೆ ತಿದ್ದುಪಡಿ ತಂದು ಬಗರ್ ಹುಕುಂ ಸಾಗುವಳಿದಾರರಿಗೆ ಅನುಕೂಲ ಮಾಡಿದ್ದರೂ ಕೂಡ ಅದನ್ನು ಸಮರ್ಥವಾಗಿ ಜಾರಿಗೊಳಿಸಿಲ್ಲ. ಭೂ ಅಕ್ರಮೀಕರಣ ನ್ಯಾಯಲಯ ಸ್ಥಾಪಿಸಿ ರೈತರು ಬೆಂಗಳೂರು ಕೋರ್ಟ್ ಗೆ ಹೋಗುವಂತೆ ಮಾಡಲಾಗಿದೆ. ಮುಳುಗಡೆ ಸಂತ್ರಸ್ಥರನ್ನು ಮತ್ತೆ ಮುಳುಗಡೆ ಮಾಡುವ ಹುನ್ನಾರವನ್ನು ಬಿಜೆಪಿ ಸರ್ಕಾರ ಮತ್ತು ಅರಣ್ಯಾಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಮಾಜಿ ಸೂಡಾ ಅಧ್ಯಕ್ಷ ಎನ್.ರಮೇಶ್.ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರದಾನ ಕಾರ್ಯದರ್ಶಿ ಚಂದ್ರಭೂಪಾಲ್, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ರಮೇಶ್ ಇಕ್ಕೇರಿ, ಮಹಾನಗರಪಾಲಿಕೆ ಸದಸ್ಯ ರಮೇಶ್ ಹೆಗ್ಡೆ, ಹಾಪ್ ಕಾಮ್ಸ್ ನಿರ್ದೇಶಕರಾದ ವಿಜಯಕುಮಾರ್ (ದನಿ), ಜಿಲ್ಲಾ ವಕ್ತಾರ ರಮೇಶ್ ಶಂಕರಘಟ್ಟ, ಕಾಂಗ್ರೆಸ್ ಮುಖಂಡರುಗಳಾದ ಜಿ.ಡಿ.ಮಂಜುನಾಥ್, ಧರ್ಮರಾಜ್, ಚಂದ್ರಶೇಖರ್,ಮಹೇಂದ್ರ,ರಾಜ್ ಕುಮಾರ್, ರಘು,ಕುಮಾರ್ ಉಪಸ್ಥಿತರಿದ್ದರು.

Ad Widget

Related posts

ನಡು ರಸ್ತೆಯಲ್ಲಿ ತಲೆಕೆಳಗಾಗಿ ನಿಂತ ಟಿ.ಆರ್.ಕೃಷ್ಣಣ್ಣ, ಬಂಧನ ಯಾಕೆ ಗೊತ್ತಾ ?

Malenadu Mirror Desk

ಐಸಿಸ್ ನಂಟು : ಶಿವಮೊಗ್ಗದಲ್ಲಿ ಇಬ್ಬರ ಬಂಧನ, ಮತ್ತೊಬ್ಬನಿಗೆ ಶೋಧ

Malenadu Mirror Desk

ಪತಿಯಿಂದ ಪತ್ನಿಯ ಕೊಲೆ: ಆರೋಪಿ ವಶಕ್ಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.