ಮಕ್ಕಳ ಹಕ್ಕು ಮತ್ತು ಅವರ ಮೇಲಿನ ಲೈಂಗಿಕ ಶೋಷಣೆ ಬಗ್ಗೆ ವಿಶ್ವಮಟ್ಟದಲ್ಲಿ ಚರ್ಚೆಯಾಗುತ್ತಿರುತ್ತದೆ. ಅಮೇರಿಕಾದಲ್ಲಿ ಟಿಪ್ ಲೈನ್ ಎಂಬ ಪ್ರಕರಣದ ಬಗ್ಗೆ ಆಂದೋಲನವೇ ನಡೆಯುತ್ತಿರುತ್ತದೆ. ಸಾಮಾಜಿಕ ಮಾಧ್ಯಮ ಸಂಸ್ಥೆಗಳಾದ ಫೇಸ್ ಬುಕ್, ಟ್ವಿಟರ್, ವಾಟ್ಸ್ ಆಪ್ ಸಂಸ್ಥೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಈ ಸಂದರ್ಭ ಮೆರೆಯುತ್ತವೆ.
ಮಕ್ಕಳ ಪೋರ್‍ನ್ ಸೈಟ್ ಮತ್ತು ಪೋಕ್ಸೋ ಪ್ರಕರಣಗಳ ಬಗ್ಗೆ ಭಾರತವೂ ಗಂಭೀರವಾಗಿರುತ್ತದೆ. ದೇಶಾದ್ಯಂತ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಬಗ್ಗೆ ತನಿಖೆ ಎಫ್‌ಐಆರ್‌ಗಳು ದಾಖಲಾಗುತ್ತವೆ. ಈ ರೀತಿಯ ವಿಚಿತ್ರ ಪ್ರಕರಣದ ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಿದ್ದ ಸಿಐಡಿ ಶಿವಮೊಗ್ಗ ಸೈಬರ್ ಪೋಲಿಸ್ ಠಾಣೆಗೆ ಒಂದು ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತದೆ…
ಅಂದು ಶಿವಮೊಗ್ಗ ಸೈಬರ್ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದವರು ಕೆ.ಟಿ.ಗುರುರಾಜ್, ಮೂಲತಃ ಎಂಜನಿಯರಿಂಗ್ ಪದವೀಧರರಾಗಿದ್ದ ಗುರುರಾಜ್ ಪ್ರಕರಣದ ಆಳಕ್ಕಿಳಿಯುತ್ತಾರೆ. ಸೈಬರ್ ಅಪರಾಧದ ಶೋಧನೆಗಿಳಿದ ಅವರು, ಮೊದಲು ಮಕ್ಕಳ ಅಶ್ಲೀಲ ವಿಡಿಯೊ ವೀಕ್ಷಕರ ಮೇಲೆ ಕಣ್ಣಿಡುತ್ತಾರೆ. ಹೀಗೆ ತನಿಖಾ ಹಾದಿಯಲ್ಲಿರುವ ಅವರಿಗೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ವ್ಯಕ್ತಿಯೊಬ್ಬರು ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಬೇರೆ ಕಡೆ ಕಳಿಸಿದ ಸುಳಿವು ಸಿಗುತ್ತದೆ. ಆ ಏರಿಯಾದ ಮೇಲೆ ನಿಗಾ ಇಟ್ಟ ಗುರುರಾಜ್ ಅವರಿಗೆ ಮುಂದೆ ಸಿಕ್ಕಿದ್ದು ಆಘಾತಕಾರಿ ಮಾಹಿತಿ….
ಹಳ್ಳಿಯ ಶಾಲೆಯೊಂದರಲ್ಲಿ ಕ್ರೀಡೆ, ಸಂಗೀತ, ಸಾಮಾಜಿಕ ಚಟುವಟಿಕೆಯಲ್ಲಿ ಊರಿಗೇ ಫೇಮಸ್ ಆಗಿದ್ದ ಶಿಕ್ಷಕನೊಬ್ಬನ ಕರಾಳ ಮುಖದ ಪರಿಚಯವಾಗುತ್ತದೆ. ಈ ಕಾಮುಕ ಶಿಕ್ಷಕ ಆರು ಮಂದಿ ಗಂಡು ಮಕ್ಕಳನ್ನು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದ. ಅಪ್ರಾಪ್ತ ಮಕ್ಕಳಿಗೆ ಅರಿವೇ ಇಲ್ಲದಂತೆ ಅವರ ವಿಡಿಯೊಗಳು ಪೋರ್‍ನ್ ವೆಬ್‌ಗಳಿಗೆ ಹೋಗುತ್ತಿದ್ದವು. ಈ ಜಾಡನ್ನು ಹಿಡಿದ ಗುರುರಾಜ್ ಪ್ರಕರಣ ಪತ್ತೆ ಹಚ್ಚಿ ಆರು ಮಂದಿ ಬಾಲಕರನ್ನು ರಕ್ಷಣೆ ಮಾಡುತ್ತಾರೆ. ಆರೋಪಿಯ ಕೃತ್ಯದ ಬಗ್ಗೆ ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆರೋಪಿಗೆ ೨೦ ವರ್ಷಗಳ ಶಿಕ್ಷೆ ವಿಧಿಸುತ್ತದೆ….
ಇಂಡಿಯಾ ಸೈಬರ್ ಕಾಫ್ ಆಫ್ ಇಯರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾದ ಪ್ರಕರಣದ ವಿವರ. ಪ್ರತಿಷ್ಠಿತ ಸೈಬರ್ ಅವಾರ್ಡ್‌ಗೆ ನಾಮನಿರ್ದೇಶನವಾದ ಇನ್ಸ್‌ಫೆಕ್ಟರ್ ಕೆ.ಟಿ.ಗುರುರಾಜ್ ಅವರು ಟಫ್ ಕಾಪ್ ಎಂದೇ ಹೆಸರು ಮಾಡಿದ್ದವರು. ಇವರೊಂದಿಗೆ ಮಧ್ಯಪ್ರದೇಶದ ಭೂಪಾಲ್‌ನಲ್ಲಿರುವ ಸೈಬರ್ ಆಂಡ್ ಹೈಟೆಕ್ ಪೊಲೀಸ್ ಸ್ಟೇಷನ್‌ನ ಇನ್‌ಸ್ಪೆಕ್ಟರ್ ನೀತೂ ಕನಸರಿಯಾ ಹಾಗೂ ಮುಂಬೈನ ವೆಸ್ಟ್ ರೀಜನ್ ಸೈಬರ್ ಪೊಲೀಸ್ ಸ್ಟೇಷನ್‌ನ ಇನ್‌ಸ್ಪೆಕ್ಟರ್ ಸುವರ್ಣ ಶಿಂಧೆಯವರು ಅಂತಿಮ ಸುತ್ತಿಗೆ ಆಯ್ಕೆಯಾದ ಇನ್ನಿಬ್ಬರು ಅಧಿಕಾರಿಗಳಾಗಿದ್ದಾರೆ,
ಎಡಿಜಿಪಿ ಹಂತದ ಅಧಿಕಾರಿಗಳು, ವಿಶ್ರಾಂತ ನ್ಯಾಯಮೂರ್ತಿಗಳೂ ಇರುವ ಆಯ್ಕೆ ಸಮಿತಿ ಮೂರು ಪ್ರಕರಣಗಳನ್ನು ಪರಿಗಣಿಸಿದ್ದು, ಅಂತಿಮವಾಗಿ ಆಯ್ಕೆಯಾಗುವ ಪ್ರಕರಣದ ತನಿಖಾಧಿಕಾರಿಗೆ ಇಂಡಿಯಾ ಸೈಬರ್ ಅವಾರ್ಡ್ ಆಫ್‌ದ ಇಯರ್ ಪ್ರಶಸ್ತಿ ಘೋಷಣೆಯಾಗಲಿದೆ.
ಕಡಕ್ ಅಧಿಕಾರಿ:
ಗುರುರಾಜ್ ಅವರು, ರಾಷ್ಟಮಟ್ಟದಲ್ಲಿ ಗಮನ ಸೆಳೆದಿದ್ದ ಹುಣಸೋಡು ಸ್ಫೋಟ ಸೇರಿದಂತೆ, ಹಿಂದೂ ಹರ್ಷನ ಕೊಲೆ ಪ್ರಕರಣ, ನಾಗೇಶ್ ಮೇಲಿನ ಹಲ್ಲೆ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಪ್ಲೆಕ್ಸ್ ಕೇಸ್, ಶಂಕಿತರ ಅರೆಸ್ಟ್‌ನಲ್ಲಿಯು ಎಸ್‌ಪಿಗೆ ಸಾಥ್:
ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ವೀರ ಸಾವರ್ಕರ್ ಪ್ಲೆಕ್ಸ್ ವಿವಾದದಿಂದ ಭುಗಿಲೆದ್ದ ಸಂಘರ್ಷದ ವಾತಾವರಣದ ನಡುವೆ ಸಂಭವಿಸಿದ್ದ ಪ್ರೇಮ್ ಸಿಂಗ್‌ಗೆ ಚಾಕು ಇರಿದ ಕೇಸ್‌ನಲ್ಲಿ, ಶಂಕಿತರ ಜಾಡು ಭೇದಿಸುವಲ್ಲಿ ಅಂದಿನ ಎಸ್‌ಪಿ ಲಕ್ಷ್ಮೀಪ್ರಸಾದ್‌ರಿಗೆ ಇನ್‌ಸ್ಪೆಕ್ಟರ್ ಗುರುರಾಜ್ ಸಾಥ್ ನೀಡಿದ್ದರು. ಅದಾದ ಬಳಿಕ ಭಯತ್ಪಾದಕ ಸಂಘಟನೆಗಳ ಮಲೆನಾಡಿನ ಸಂಪರ್ಕದ ಬಗ್ಗೆಯೂ ತನಿಖೆಗೆ ಗುರುರಾಜ್ ಸಹಕರಿಸಿದ್ದಾರೆ. ಪ್ರಸ್ತುತ ಕಡೂರು ಪೊಲೀಸ್ ಟ್ರೈನಿಂಗ್ ಸೆಂಟರ್‌ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.