Malenadu Mitra
ಶಿವಮೊಗ್ಗ

ಅಡಕೆ ಮಾನ ಕಳೆದ ಕೇಂದ್ರ ಸರಕಾರ, ರೋಗ , ಬೆಲೆ ಕುಸಿತದಿಂದ ರೈತರಿಗೆ ಸಂಕಷ್ಟ
ಸಚಿವ ಸಂಸದರ ತಾತ್ಸಾರ: ಕಾಂಗ್ರೆಸ್ ಮುಖಂಡ ರಮೇಶ್ ಹೆಗ್ಡೆ ಆರೋಪ,

ಗುಜರಾತ್ ಮತ್ತು ಉತ್ತರ ಭಾರತದ  ಗುಟ್ಕಾ ಕಂಪನಿಗಳ ಲಾಭಕ್ಕಾಗಿ ಕರ್ನಾಟಕದ ಅಡಿಕೆ ಬೆಳೆಗಾರರ ಹಿತವನ್ನು ಕೇಂದ್ರ ಸರ್ಕಾರ ಬಲಿಕೊಡುತ್ತಿದೆ ಎಂದು  ಕೆಪಿಸಿಸಿ ಮಲೆನಾಡು ರೈತ ಸಮಸ್ಯೆಗಳ ಅಧ್ಯಯನ ಸಮಿತಿ ಸಂಯೋಜಕ ಬಿ.ಎ. ರಮೇಶ್ ಹೆಗ್ಡೆ  ಆರೋಪಿಸಿದರು.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ೨೦೧೪ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚಿಕ್ಕಮಗಳೂರಿಗೆ ಬಂದಾಗ ಅಡಿಕೆಗೆ ಮಾನ ತರುತ್ತೇನೆ. ಅಡಿಕೆ ಬೆಳೆಗಾರರ ಸಂಕಷ್ಟವನ್ನು ಪರಿಹರಿಸುತ್ತೇನೆ ಎಂದು ಮಾತು ಕೊಟ್ಟಿದ್ದರು. ಅದಾಗಿ ಈಗ ಎಂಟು ವರ್ಷಗಳಾಗಿವೆ. ಆದರೂ  ಅಡಿಕೆ ಬೆಳೆಗಾರರ ಸಮಸ್ಯೆ ಬಗೆಹರಿಯದೆ ದ್ವಿಗುಣಗೊಂಡಿದೆ. ಅಡಿಕೆಗೆ ಮಾನ ತರುವುದಿರಲಿ ಮೋದಿ ಸರ್ಕಾರ ಅಡಿಕೆಗೆ ಅಗೌರವವನ್ನುಂಟುಮಾಡಿದೆ ಎಂದರು


ಗುಜರಾತ್ ಹಾಗೂ ಉತ್ತರಭಾರತದ ಬಿಜೆಪಿ ಬೆಂಬಲಿಸುವ ಗುಟ್ಕಾ, ಪಾನ್ ಮಸಾಲಾ ಕಂಪನಿಗಳ ಲಾಭಕ್ಕಾಗಿ, ಭೂತಾನ್ ದೇಶದಿಂದ  ಬರುವ ಅಡಿಕೆಗೆ ಕನಿಷ್ಟ ಸುಂಕ ವಿನಾಯಿತಿ ನೀಡಿ, ೧೭,೦೦೦ ಮೆಟ್ರಿಕ್ ಟನ್ ಅಡಿಕೆ ಆಮದಿಗೆ ಅವಕಾಶ ಮಾಡಿಕೊಡುವುದರ ಮೂಲಕ ಲಕ್ಷಾಂತರ ಅಡಿಕೆ ಬೆಳೆಗಾರರಿಗೆ ಆರ್ಥಿಕ ನಷ್ಟ ಉಂಟುಮಾಡಿದೆ ಆರೋಪಿಸಿದರು.
ದೇಶದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯದ ಕೊಡುಗೆಯೇ ಶೇ.೮೦ ರಷ್ಟಿದೆ. ನಾಲ್ಕು ತಿಂಗಳ ಹಿಂದೆ ಕ್ವಿಂಟಾಲಿಗೆ ೫೯ ಸಾವಿರ ಇದ್ದ ಬೆಲೆ ಈಗ ೩೯ ಸಾವಿರಕ್ಕೆ ಇಳಿದಿದೆ. ೧೦ರಿಂದ ೧೫ ಸಾವಿರದಷ್ಟು ಆರ್ಥಿಕ ನಷ್ಟವಾಗಿದೆ. ಇಡೀ ದೇಶದ ಆರ್ಥಿಕ ವ್ಯವಸ್ಥೆಗೆ ಅಡಿಕೆ ತನ್ನದೇ ಆದ ಕೊಡುಗೆ ನೀಡಿದೆ. ಈ ರೀತಿ ಅಡಿಕೆ ಬೆಲೆ ಕುಸಿತಕ್ಕೆ ನರೇಂದ್ರ ಮೋದಿಯವರು ನೇರಹೊಣೆಯಾಗುತ್ತಾರೆ ಎಂದರು.
ಈಶಾನ್ಯ ಭಾರತದ ಗಡಿ ರಾಜ್ಯಗಳಾದ ಮಿಜೋರಾಂ ಹಾಗೂ ಮಣಿಪುರಗಳ ಮೂಲಕ ಬರ್ಮಾದೇಶದಿಂದ ಸಾವಿರಾರು ಟನ್ ಅಡಿಕೆ  ಕಳ್ಳಸಾಗಣಿಕೆಗೆ ಹಾಗೂ (ಖಅಊSಅ) ಸಾಫ್ಟಾ ಇನ್ನಿತರ ಮುಕ್ತ ವಾಣಿಜ್ಯ ಒಪ್ಪಂದದ ರಿಯಾಯಿತಿಗಳನ್ನು ದುರ್ಬಳಕೆ ಮಾಡಿಕೊಂಡು ಇಂಡೋನೇಷಿಯಾ ದೇಶದ ಅಗ್ಗದ ಹಾಗೂ ಕಳಪೆ ಗುಣಮಟ್ಟದ ಅಡಿಕೆಯನ್ನು  ಶ್ರೀಲಂಕಾದೇಶದಿಂದ ಮರುರಫ್ತು (ಉಉಗಿPuS) ಅವಕಾಶ ಮಾಡಿಕೊಡುವುದರ ಮೂಲಕ ದೇಶೀಯ ಅಡಿಕೆ ಧಾರಣೆ ಕುಸಿಯುವಂತೆ ಮಾಡಿದೆ ಎಂದರು.


ಅಡಿಕೆ ಕಾರ್ಯಪಡೆ ವಿಫಲ:


ಆರಗ ಜ್ಞಾನೇಂದ್ರ ಅವರು ಅಡಿಕೆ ಕಾರ್ಯಪಡೆಯ ಅಧ್ಯಕ್ಷರು ಕೂಡ. ಅಡಿಕೆಯ ಯಾವ ಹಿತವನ್ನೂ ಇವರು ಕಾಯಲಿಲ್ಲ. ಸುಮಾರು ೧೦೦ ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳು ಅಡಿಕೆ ಕಾರ್ಯಪಡೆಗೆ ನೀಡಿದ್ದರು. ಈ ಹಣ ಈಗ ಎಲ್ಲಿದೆ, ಅಡಿಕೆ ಬೆಳೆಗಾರರ ಹಿತ ಕಾಯದ ಅಡಿಕೆ ಕಾರ್ಯಪಡೆ ಏಕೆ ಬೇಕು ಅದನ್ನು ರದ್ದು ಮಾಡಲಿ ಎಂದ ಅವರು, ಕಾರ್ಯಪಡೆಗೂ ಕೂಡ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.


ಮುನಿರತ್ನ  ಉಚ್ಚಾಟನೆಗೆ ಆಗ್ರಹ:
ರಾಜ್ಯದ ತೋಟಗಾರಿಕಾ ಸಚಿವ ಮುನಿರತ್ನ ಅವರು ಅಡಿಕೆ ಬೆಲೆ ದಿನೇದಿನೇ ಕುಸಿಯುತ್ತಿದ್ದರೂ ಗಮನಹರಿಸಿಲ್ಲ. ಹೋಗಲಿ, ಎಲೆಚುಕ್ಕಿ ರೋಗ ಬಂದು ತಿಂಗಳುಗಳೇ ಮುಗಿದಿವೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಚಿವ ಮುನಿರತ್ನ ಮಾತ್ರ ತಮಗೇನೂ ಗೊತ್ತಿಲ್ಲ ಎನ್ನುವಂತೆ ಸುಮ್ಮನೆ ಕುಳಿತಿದ್ದಾರೆ. ಒಂದು ದಿನವೂ ರೈತರ ತೋಟಕ್ಕೆ ಹೋಗಲಿಲ್ಲ. ಸಾಂತ್ವನ ಹೇಳಲಿಲ್ಲ. ಇವರು  ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದರು.


 ಸಂಸದರ ನಿಷ್ಕ್ರಿಯತೆಗೆ ಖಂಡನೆ :


ಸಂಸದ ರಾಘವೇಂದ್ರ ಅವರು ಕೂಡ ಅಡಿಕೆ ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಕರ್ನಾಟಕದ ಅದರಲ್ಲೂ ಅಡಿಕೆ ಬೆಳೆಯುವ ಪ್ರದೇಶಗಳ ಯಾವ ಸಂಸದರೂ ಕೂಡ ಸಂಸತ್‌ನಲ್ಲಿ ಒಮ್ಮೆಯೂ ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಕೈಗೆತ್ತಿಕೊಳ್ಳಲಿಲ್ಲ. ಬದಲಾಗಿ ಬಿಜೆಪಿ ಸಂಸದರು ಸುಪ್ರೀಂ ಕೋರ್ಟಿಗೆ ಅಡಿಕೆ ಹಾನಿಕರ ಎಂದು ಪ್ರಮಾಣ ಪತ್ರ ಸಲ್ಲಿಸಿದಾಗಲೂ ಕೂಡ ಸುಮ್ಮನಿದ್ದರು. ರಾಜ್ಯಸರ್ಕಾರ ಕೂಡ ಖಾಸಗಿ ಸಂಸ್ಥೆಯಾದ ಎಂ.ಎಸ್. ರಾಮಯ್ಯ ಸಂಶೋಧನಾ ಕೇಂದ್ರಕ್ಕೆ ವರದಿ ನೀಡುವಂತೆ ಹೇಳಿದೆ. ಆದರೆ ಸುಪ್ರೀಂ ಕೋರ್ಟ್ ಖಾಸಗಿ ಸಂಸ್ಥೆಯ ವರದಿಯನ್ನ ಮಾನ್ಯತೆ ಮಾಡುವುದಿಲ್ಲ ಎಂಬ ಅಂಶವೂ ಕೂಡ ರಾಜ್ಯಸರ್ಕಾರಕ್ಕೆ ಗೊತ್ತಿಲ್ಲ ಎಂದರು.
ಅಮಿತ್ ಶಾ ಕೂಡ ಶಿವಮೊಗ್ಗದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲು ೫೦೦ ಕೋಟಿ ರೂ. ನೀಡುವುದಾಗಿ ಹೇಳಿದ್ದರು. ಈಗ ನಾಲ್ಕು ವರ್ಷಗಳಾಗಿವೆ. ಶಿವಮೊಗ್ಗದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪನೆ ಆಗಿಯೇ ಇಲ್ಲ. ಚುನಾವಣೆಯ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಮಖಂಡರು ಅಡಿಕೆ ಬೆಳೆಗಾರರಿಗೆ ಭರವಸೆ ನೀಡುತ್ತಾರೆ. ನಂತರ ಮರೆತುಬಿಡುತ್ತಾರೆ ಎಂದು ದೂರಿದರು.
ಅಡಿಕೆ ಬೆಳೆಗಾರರ ಸಮಸ್ಯೆ, ಎಲೆಚುಕ್ಕಿ ರೋಗ ಮುಂತಾದ ವಿಷಯಗಳನ್ನಿಟ್ಟುಕೊಂಡು ಕಾಂಗ್ರೆಸ್ ಬಹುದೊಡ್ಡ ಹೋರಾಟವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಭೂಪಾಲ್, ನಗರದ ಮಹಾದೇವಪ್ಪ, ದೀಪಕ್ ಸಿಂಗ್, ಖಲೀಮ್ ಉಲ್ಲಾ, ಹೆಚ್.ಎಂ. ಮಧು, ಜಿ.ಡಿ. ಮಂಜುನಾಥ್, ವಿಜಯಕುಮಾರ್ ಮತ್ತಿತರರಿದ್ದರು.

Ad Widget

Related posts

ಸಿಗಂದೂರು ದೇಗುಲ ಹೋಟೆಲ್ ಕಟ್ಟಡ ತೆರವಿಗೆ ಕೋರ್ಟ್ ಆದೇಶ

Malenadu Mirror Desk

ರೇಣುಕಾಸ್ವಾಮಿ ಮರ್ಡರ್ ಕೇಸ್ : ಎ-6 ಜಗದೀಶ್ ಜೈಲಿನಿಂದ ಬಿಡುಗಡೆ

Malenadu Mirror Desk

ರಾಗಿಗುಡ್ಡ ಗಲಭೆ ಪ್ರಕರಣ ಎನ್‌ಐಎಗೆ ವಹಿಸಲು ಸಂಸದ ರಾಘವೇಂದ್ರ ಆಗ್ರಹ, ಬಿಜೆಪಿಯಿಂದ ಪ್ರತಿಭಟನೆ ಸಿದ್ದರಾಮಯ್ಯ ಸರಕಾರದ ವಿರುದ್ಧ ವಾಗ್ದಾಳಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.