ಶಿವಮೊಗ್ಗ, ಡಿ 29:
ದೇಶದ ಭಾವಿ ಪ್ರಜೆಗಳಿಗೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯ ಎಂದು ಚಲನಚಿತ್ರ ನಟಿ ಕು. ಆಶಾ ಭಟ್ ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿ, ಡಿವಿಎಸ್ ಪದವಿ ಪೂರ್ವ(ಸ್ವತಂತ್ರ) ಕಾಲೇಜ್ ಶಿವಮೊಗ್ಗ ಇದರ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಬೃಹತ್ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಸಂಸ್ಥೆಗಳು ವ್ಯಕ್ತಿತ್ವದ ನಿರ್ಮಾಣ ಮಾಡುತ್ತವೆ. ಮತ್ತು ವ್ಯಕ್ತಿತ್ವ, ಉತ್ತಮ ಚಾರಿತ್ರ್ಯ ನಿರ್ಮಾಣ ಮಾಡುತ್ತದೆ. ನಿಮ್ಮಲ್ಲಿ ನೀವು ದೃಢವಾದ ನಂಬಿಕೆ ಇಟ್ಟುಕೊಳ್ಳಬೇಕು.ಶಿಕ್ಷಣದಲ್ಲಿ ದೈಹಿಕ, ಧಾರ್ಮಿಕ, ಮಹಿಳಾ ಮತ್ತು ಮೌಲ್ಯಾಧಾರಿತ ಶಿಕ್ಷಣದ ಅಗತ್ಯತೆ ಬಗ್ಗೆ ವಿವೇಕಾನಂದರು ಯಾವಾಗಲೂ ಮಾತನಾಡುತ್ತಿದ್ದರು. ಶಿಕ್ಷಣ ಯುವ ಜನತೆಗೆ ಅಗತ್ಯವಾಗಿದೆ ಎಂದರು.
ನಾವು ಯಾವ ಕಾರ್ಯವನ್ನು ಮಾಡುತ್ತೇವೆ ಅದನ್ನು ಇಷ್ಟಪಟ್ಟು ಮಾಡಬೇಕು. ಸಂತೋಷದಿಂದ ಕಾರ್ಯ ಮಾಡಿದಾಗ ನಮಗೆ ಅದರ ಫಲ ಕೂಡ ಖುಷಿ ನೀಡುತ್ತದೆ. ಆತ್ಮ ವಿಶ್ವಾಸದಿಂದ ನಾನು ಕಲಿತ ಎಲ್ಲಾ ಶಿಕ್ಷಣವೂ ನನ್ನ ಜೀವನದ ಯಶಸ್ಸಿಗೆ ಉಪಯೋಗಕ್ಕೆ ಬಂತು. ಅದೇ ರೀತಿ ನಿಮ್ಮಲ್ಲಿ ನೀವು ನಂಬಿಕೆ ಇಟ್ಟು ಮುಂದುವರೆಯಿರಿ ಎಂದರು.
ಡಿವಿಎಸ್ ಉಪಾಧ್ಯಕ್ಷ ಎಸ್.ಪಿ. ದಿನೇಶ್ ಮಾತನಾಡಿ, ಸಂಸ್ಥೆಯ ೫೦ ನೇ ವರ್ಷದ ಅಂಗವಾಗಿ ವೈವಿಧ್ಯಮಯ ವಸ್ತು ಪ್ರದರ್ಶನ ಹಮ್ಮಿಕೊಂಡಿದ್ದೇವೆ. ಜನವರಿ ೪ ರಂದು ೫೦ ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟನೆಗೆ ಮೈಸೂರು ಮಹಾರಾಜರು ಬರಲಿದ್ದಾರೆ ಎಂದರು.
ನಮ್ಮ ಸಂಸ್ಥೆಯಿಂದ ಓದಿದ ಹಳೆ ವಿದ್ಯಾರ್ಥಿಗಳಲ್ಲಿ ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಜನ ವೈದ್ಯರಾಗಿದ್ದಾರೆ. ಇಂಜಿನಿಯರ್, ಐಎಎಸ್, ಐಪಿಎಸ್ ಗಳಾಗಿ ಉನ್ನತ ಹುದ್ದೆಯಲ್ಲಿದ್ದು, ದೇಶ ಸೇವೆ ಮಾಡುತ್ತಿದ್ದಾರೆ. ೧೯೫೮ ರಲ್ಲಿ ಪ್ರೈಮರಿ ಶಾಲೆಯಿಂದ ಪ್ರಾರಂಭವಾದ ಡಿವಿಎಸ್ ಸಂಸ್ಥೆ ಇಂದು ೫೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಜ. ೬ ರಂದು ಸಮಾರೋಪ ನಡೆಯಲಿದ್ದು, ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಬರಲಿದ್ದಾರೆ. ನಾಡಿನ ಹಲವು ಸಚಿವರು ಶಾಸಕರು ಕೂಡ ನಮ್ಮದೇ ಡಿವಿಎಸ್ ನಲ್ಲಿ ವಿದ್ಯಾರ್ಥಿಗಳಾಗಿದ್ದರು ಎಂಬುದು ನಮಗೆ ಹೆಮ್ಮೆ. ಆಶಾ ಭಟ್ ಅವರ ತಾಯಿ ಕೂಡ ನಮ್ಮ ಸಂಸ್ಥೆಯ ವಿದ್ಯಾರ್ಥಿನಿ ಎಂದರು.
ಡಿವಿಎಸ್ ಅಧ್ಯಕ್ಷ ಕೆ.ಎನ್. ರುದ್ರಪ್ಪ ಕೊಳಲೆ, ಕಾರ್ಯದರ್ಶಿ ಎಸ್. ರಾಜಶೇಖರ್, ಸಹಕಾರ್ಯದರ್ಶಿ ಎ. ಸತೀಶ್ ಕುಮಾರ್ ಶೆಟ್ಟಿ, ಖಜಾಂಚಿ ಗೋಪಿನಾಥ್, ನಿರ್ದೇಶಕರಾದ ಎಂ.ರಾಜು, ಆರ್. ನಿತಿನ್, ಡಾ. ಅವಿನಾಶ್, ಡಾ. ಮಂಜುನಾಥ್, ಸತ್ಯನಾರಾಯಣ್, ಶಿಕ್ಷಕರ ಪ್ರತಿನಿಧಿ ಹೆಚ್.ಸಿ. ಉಮೇಶ್, ಪ್ರಾಂಶುಪಾಲ ಎ.ಇ. ರಾಜಶೇಖರ್ ಹಾಗೂ ಡಿವಿಎಸ್ ಅಂಗಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.