ಶಿವಮೊಗ್ಗ,ಫೆ.೨೦: ಸಾಗರ ತಾಲೂಕು ತುಮರಿ ಪಂಚಾಯಿತಿ ವ್ಯಾಪ್ತಿಯ ಕಳಸವಳ್ಳಿಯಲ್ಲಿ ಅಕ್ರಮವಾಗಿ ನಾಟಾ ಕಡತಲೆ ಮತ್ತು ಸಂಗ್ರಹಣೆ ಆರೋಪದ ಮೇಲೆ ಗುಮ್ಮಗೋಡು ದೇವಾಲಯದ ಕಾರ್ಯದರ್ಶಿ ವಿರುದ್ಧ ದೂರು ದಾಖಲಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ವನ್ಯಜೀವಿ ವಲಯದ ಅರಣ್ಯ ಸಂಚಾರಿ ದಳದ ಆರ್.ಎಫ್‌ಒ ಆಸೀಫ್ ಅಹಮದ್ ನೇತೃತ್ವದ ತಂಡ ದಾಳಿ ನಡೆಸಿ ದೂರು ದಾಖಲಿಸಿದ್ದಾರೆ.
ಶರಾವತಿ ವನ್ಯಜೀವಿ ವಲಯದ ಅರಣ್ಯದಲ್ಲಿ ಯಂತ್ರಚಾಲಿಕ ಗರಗಸವನ್ನು ಕೊಂಡೊಯ್ದು ದಟ್ಟಕಾಡಿನಲ್ಲಿ ಅಕ್ರಮವಾಗಿ ಮರ ಕಡಿತಲೆ ಮಾಡಲಾಗಿದೆ ಎನ್ನಲಾಗಿದೆ. ಭಾನುವಾರವೇ ಅರಣ್ಯ ಇಲಾಖೆಗೆ ಮಾಹಿತಿ ಇದ್ದರೂ ದಾಳಿ ಮಾಡುವಲ್ಲಿ ವಿಳಂಬ ಮಾಡಿದ್ದಲ್ಲದೆ, ರಾಜಕೀಯ ಒತ್ತಡದ ಕಾರಣಕ್ಕೆ ಕಡಿಮೆ ಪ್ರಮಾಣದ (೨ಸಿಎಫ್ಟಿ) ಮರ ವಶಪಡಿಸಿಕೊಂಡು ದೂರು ದಾಖಲಿಸುವ ಶಾಸ್ತ್ರ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶರಾವತಿ ಅಭಯಾರಣ್ಯದಲ್ಲಿ ಯಂತ್ರಗಳನ್ನ ಬಳಸಿ ಅಪಾರ ಪ್ರಮಾಣದ ನಾಟಾವನ್ನು ಕಡಿದು ಸಂಗ್ರಹಿಸಿದ್ದಲ್ಲದೆ, ಪ್ರಭಾವಿ ವ್ಯಕ್ತಿಯೊಬ್ಬರು ಪರ ಊರಿಗೆ ಸಾಗಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸ್ಥಳಕ್ಕೆ ಧಾವಿಸಿದ್ದರೂ, ಅಕ್ರಮ ಸಂಗ್ರಹಣೆ ಇರುವ ಜಾಗಕ್ಕೆ ಹೋಗುವುದರೊಳಗಾಗಿ ಸ್ಥಳೀಯ ರಾಜಕಾರಣಿಗಳು ಪ್ರವೇಶ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಡ್ಡಗಾಲಾಗಿದ್ದರು. ಜನಪ್ರತಿನಿಧಿಗಳಿಂದ ಒತ್ತಡ ಹಾಕಿಸಿ ಅಕ್ರಮ ವ್ಯವಹಾರ ಮರೆಮಾಚಿದ ಮೇಲೆ ದೂರು ದಾಖಲಿಸಲಾಗಿದೆ ಎಂದು ಸ್ಥಳೀಯ ಪರಿಸರ ಪ್ರೇಮಿಗಳು ಆರೋಪಿಸಿದ್ದಾರೆ.
ಹೊಟ್ಟೆ ಪಾಡಿಗೆ ಸಾಗುವಳಿ ಮಾಡುವ ಜನ ಕಟ್ಟಿಗೆ ತರಲೂ ಅಡ್ಡಿ ಮಾಡುವ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ, ಕಾಡಿನೊಳಗೆ ತಿಂಗಳುಗಟ್ಟಲೆ ದಿಮ್ಮಿಗಳನ್ನು ಕಡಿದು, ಸಾಮಿಲ್ ಮಾದರಿಯಲ್ಲಿ ಕೆಲಸ ಮಾಡಿದ್ದರೂ ಅತ್ತ ಕಣ್ಣು ಹಾಯಿಸದಿರುವುದು ಅಚ್ಚರಿಯ ಸಂಗತಿಯಾಗಿದೆ. ವನ್ಯಜೀವಿ ಕಾಯಿದೆ ಪ್ರಕಾರ ಕಾಡೊಳಗೆ ಅಕ್ರಮ ಪ್ರವೇಶ ನಿಷಿದ್ಧ ಎಂದು ಹೇಳುವ ಇಲಾಖೆ ಅಧಿಕಾರಿಗಳು ಶರಾವತಿ ಅಭಯಾರಣ್ಯದೊಳಗೆ ವಿದ್ಯುತ್ ಚಾಲಿತ ಕೊಯ್ಯುವ ಮೆಷಿನ್ ಹಾಗೂ ವಾಹನಗಳನ್ನು ಹೇಗೆ ಬಿಟ್ಟರು ಇದಕ್ಕೆ ಯಾರ ಪ್ರಭಾವ ಇದೆ ಎಂಬ ಸತ್ಯ ಹೊರಬರಬೇಕಿದೆ.
ಪ್ರಭಾವಿ ವ್ಯಕ್ತಿಗಳ ಕೈವಾಡ:
ಅಕ್ರಮ ಮರ ಕಡಿತಲೆ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡ ಇದೆ ಎಂಬ ಮಾತು ಕೇಳಿಬರುತ್ತಿವೆ. ರಂಜಲ್ ಮರ ಕಡಿತಲೆ ಮಾಡಿದ್ದು, ಇವು ದೇವಸ್ಥಾನಕ್ಕೆ ಮಾತ್ರ ಬಳಸುತಾರೆ ಎಂದು ಹೇಳಲಾಗುತ್ತಿದೆ. ಆದರೆ ಬೆಲೆ ಬಾಳುವ ಮರಗಳ ಸಂಗ್ರಹ ಮತ್ತು ಸಾಗಣೆಯನ್ನು ಮರೆಮಾಚಲಾಗಿದೆ ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿದ್ದು, ರಂಜಲ್ ಮರ ಸಂಗ್ರಹ ಕಂಡು ಬಂತು. ಅಕ್ರಮವಾಗಿ ಕಡಿತಲೆ ಮಾಡಿದ್ದು, ಸಾಬೀತಾದ ಕಾರಣ ಮರ ವಶಪಡಿಸಿಕೊಂಡು ದೂರು ದಾಖಲಿಸಿದ್ದೇವೆ. ಅಭಯಾರಣ್ಯ ಕಾಯಿದೆ ಅನುಸಾರ ಕಾಡಿಗೆ ಅಕ್ರಮ ಪ್ರವೇಶ ಮಾಡಲಾಗಿದೆ.
ಆಸೀಫ್ ಅಹಮದ್
ವಲಯ ಅರಣ್ಯ ಅಧಿಕಾರಿ ಫಾರೆಸ್ಟ್ ಸ್ಕ್ವಾಡ್