ಶಿವಮೊಗ್ಗ: ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಪುತ್ರರಾದ ಪ್ರಶಾಂತ್ ಮಾಡಾಳ್ ಸೇರಿ ಐವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದು, ಸಿಎಂ ಬೊಮ್ಮಾಯಿ ಹಾಗೂ ಶಾಸಕ ವಿರೂಪಾಕ್ಷಪ್ಪ ಕೂಡಲೇ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ. ಲೋಕಾಯುಕ್ತ ದಾಳಿಯಲ್ಲಿ ೭.೬೨ ಕೋಟಿ ರೂ. ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶಿವಪ್ಪ ನಾಯಕ ವೃತ್ತದಿಂದ ಗೋಪಿವೃತ್ತದ ವರೆಗೆ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಎಐಸಿಸಿ ಸದಸ್ಯ ಮಧುಬಂಗಾರಪ್ಪ ಮಾತನಾಡಿ, ಬಿಜೆಪಿ ಎಂದರೆ ಭ್ರಷ್ಟ ಜನತಾ ಪಾರ್ಟಿ ಎಂದು ಸಾಬೀತಾಗಿದೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಬಣ್ಣ ಬಯಲಾಗಿದೆ ಎಂದು ಹೇಳಿದರು.
ನಾನು ಮುಖ್ಯಮಂತ್ರಿ ರಾಜೀನಾಮೆ ಕೇಳುವುದಿಲ್ಲ.ಅವರು ಏನಿದ್ದರೂ ಕೇವಲ ೧೦ ದಿನವಷ್ಟೆ ಬಿಜೆಪಿ ಮುಖ್ಯಮಂತ್ರಿಯಾಗಿ ಇರುತ್ತಾರೆ. ಬಿಜೆಪಿಯವ ಭ್ರಷ್ಟಾಚಾರವನ್ನು ರಾಜ್ಯದ ಪ್ರತಿ ಮನೆಗೂ ತಿಳಿಸಬೇಕು ಎಂದ ಅವರು, ಬಿಜೆಪಿಯವರು ಪ್ರತಿ ಕ್ಷೇತ್ರದಲ್ಲೂ ಮತದಾರರಿಗೆ ಹಂಚಲು ಕಳ್ಳತನದ ದುಡ್ಡು ಶೇಖರಿಸಿಟ್ಟಿದ್ದು, ಮಾಡಾಳ್ ಪುತ್ರನ ಮನೆಯಲ್ಲಿ ಸಿಕ್ಕಿದ್ದು, ಕೇವಲ ಸ್ಯಾಂಪಲ್ ಅಷ್ಟೆ ಎಂದರು.
ರಾಮರಾಜ್ಯ ಆಗಬೇಕಾದರೆ ಬದಲಾವಣೆ ಅಗತ್ಯ. ಇಂದಿರಾಗಾಂಧಿ, ದೇವರಾಜ್ ಅರಸ್, ಎಸ್.ಬಂಗಾರಪ್ಪ ಜನ ಸಾಮಾನ್ಯರಿಗೆ ಏನು ಕೊಡುಗೆ ನೀಡಿದ್ದರು ಎಂಬುದು ಎಲ್ಲರಿಗೂ ಗೊತ್ತು ಎಂದರು.
ಕಳ್ಳತನ ಮಾಡಿದವರಿಗೆ ಜನ ತಕ್ಕ ಶಿಕ್ಷೆ ಕೊಡುತ್ತಾರೆ. ಬರಿ ಸೋಪ್ ಫ್ಯಾಕ್ಟರಿಯ ಅಧ್ಯಕ್ಷನೇ ಇಷ್ಟೊಂದು ಲೂಟಿ ಮಾಡಿದ್ದಾರೆ ಎಂದರೆ ಇನ್ನು ಮಂತ್ರಿ ಮಹನೀಯರುಗಳು ಕರ್ನಾಟಕವನ್ನು ಎಷ್ಟೊಂದು ಪ್ರಮಾಣದಲ್ಲಿ ಲೂಟಿ ಮಾಡಿರಬಹುದು. ರಾಜ್ಯ ಹಾಗೂ ದೇಶ ಉಳಿಯಬೇಕಾದರೆ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಸರ್ಕಾರವನ್ನು ವಿಸರ್ಜಿಸಿ ಚುನಾವಣೆ ಎದುರಿಸಬೇಕು. ಶಾಸಕನ ಪುತ್ರನ ಮನೆಯಲ್ಲಿ ಕೋಟ್ಯಂತರ ರೂ ಹಣ ಸಿಕ್ಕರೂ ಭ್ರಷ್ಟಾಚಾರ ನಡೆದಿಲ್ಲ ಎಂಬ ಸಮರ್ಥನೆಯನ್ನು ಸರ್ಕಾರ ಮಾಡುತ್ತಿದೆ.ಈ ರೀತಿಯ ಭಂಡ ಸರ್ಕಾರವನ್ನು ನಾವೆಂದು ಕಂಡಿಲ್ಲ ಎಂದರು.
ಮಾಡಾಳ್ ವಿರೂಪಕ್ಷಾಪ್ಪ ಗೃಹ ಸಚಿವ ಆರಗ ಜೊತೆ ಭ್ರಷ್ಟಾಚಾರ ಮಾಡುವುದು ಹೇಗೆ ಎಂದು ಮಾಹಿತಿ ಪಡೆದುಕೊಂಡಿದ್ದರೆ ಬಹುಶಃ ಸಿಕ್ಕಿ ಬಿಳುತ್ತಿರಲಿಲ್ಲವೇನೋ ಎಂದು ವ್ಯಂಗ್ಯವಾಡಿದ ಅವರು, ಬಿಜೆಪಿಯವರಷ್ಟು ದುರಾಡಳಿತವನ್ನು ಯಾವ ಸರ್ಕಾರಗಳು ಮಾಡಿರಲಿಲ್ಲ.ಭ್ರಷ್ಟಾಚಾರ ವಿರೋಧಿಸುವವರು ಬಿಜೆಪಿಯವರು ಇಂದು ಪ್ರತಿಭಟನೆ ಮಾಡಬೇಕಿತ್ತು. ಆದರೆ ಕಾಂಗ್ರೆಸ್‌ನವರು ಮಾಡಬೇಕಾಗಿದೆ ಎಂದರು.
ಜಾತಿ ಧರ್ಮದ ಮೇಲೆ ಅಧಿಕಾರ ಬಂದು ದೇಶ ಹಾಗೂ ರಾಜ್ಯವನ್ನು ಬಿಜೆಪಿಯವರು ಲೂಟಿ ಮಾಡುತ್ತಿದ್ದಾರೆ.ಬಿಜೆಪಿಗರು ತಮ್ಮ ಮರಿಮಕ್ಕಳಿಗೆ ಮತ್ತು ಅವರ ಮರಿಮಕ್ಕಳಿಗೂ ಆಗುವಷ್ಟು ಆಸ್ತಿ ಮಾಡಿದ್ದಾರೆ. ಇವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದರು.
ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಆರ್.ಪ್ರಸನ್ನ ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್, ಪ್ರಮುಖರಾದ ಕಲಗೋಡು ರತ್ನಾಕರ್, ರವಿಕುಮಾರ್, ಶ್ರೀನಿವಾಸ ಕರಿಯಣ್ಣ, ವೈ.ಹೆಚ್.ನಾಗರಾಜ್, ಎಸ್.ಪಿ.ದಿನೇಶ್, ಮುಡುಬ ರಾಘವೇಂದ್ರ, ,ಯೋಗಿಶ್, ರಮೇಶ ಶಂಕರಘಟ್ಟ, ಇಸ್ಮಾಯಿಲ್ ಖಾನ್, ತಿ.ನಾ.ಶ್ರೀನಿವಾಸ್, ರೇಖಾ ರಂಗನಾಥ್, ಚಂದ್ರ ಭೂಪಾಲ್, ಅನಿತಾ ಕುಮಾರಿ, ಪಲ್ಲವಿ ಮತ್ತಿತರರು ಹಾಜರಿದ್ದರು.
ಶಾಸಕನ ಪುತ್ರನ ಮನೆಯಲ್ಲಿ ಕೋಟ್ಯಂತರ ರೂ ಹಣ ಸಿಕ್ಕರೂ ಭ್ರಷ್ಟಾಚಾರ ನಡೆದಿಲ್ಲ ಎಂಬ ಸಮರ್ಥನೆಯನ್ನು ಸರ್ಕಾರ ಮಾಡುತ್ತಿದೆ.ಈ ರೀತಿಯ ಭಂಡ ಸರ್ಕಾರವನ್ನು ನಾವೆಂದು ಕಂಡಿಲ್ಲ
ಕಿಮ್ಮನೆ ರತ್ನಾಕರ್