ಹೊಸನಗರ ; ಬಗರ್ ಹುಕ್ಕುಂ ರೈತರ ಒಂದು ಗುಂಟೆ ಜಾಗವೂ ಹೋಗಲು ಬಿಡಲ್ಲ. ಸರ್ಕಾರ ರೈತರ ಪರವಾಗಿದೆ ಎಂದು ಶಾಸಕ ಹಾಲಪ್ಪ ಹರತಾಳು ಹೇಳಿದರು.
ತಾಲ್ಲೂಕಿನ ಪಟಗುಪ್ಪ ಸೇತುವೆ ಬಳಿ ನಡೆದ ಶರಾವತಿ ಹಿನ್ನೀರ ಹಬ್ಬವನ್ನು ಉದ್ಘಾಟಿಸಿ ಮಾತನಾಡಿ, ರೈತರು ಸರ್ಕರದ ಮೇಲೆ ನಂಬಿಕೆ ಇಡಬೇಕು. ಯಾವುದೇ ಕಾರಣಕ್ಕೂ ರೈತರಲ್ಲಿ ಆತಂಕ ಬೇಡ. ರೈತರನ್ನು ಒಕ್ಕಲೇಬ್ಬಿಸಲು ಬಿಡಲ್ಲ. ಸದ್ಯದಲ್ಲೆ ಶುಭಸುದ್ದಿ ನೀಡಲಿದ್ದೇವೆ. ರೈತರ ಸಮಸ್ಯೆ ಉಲ್ಬಣವಾಗಲು ಕಾಂಗ್ರೆಸ್ ನೇರ ಕಾರಣ. ಅಧಿಕಾರ ಇದ್ದಾಗ ಸಮಸ್ಯೆ ಬಗೆಹರಿಸದೇ ಈಗ ನಮ್ಮ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದರು.
ಶರಾವತಿ ನದಿಗೆ ಸೇತುವೆ ಕಟ್ಟುವಲ್ಲಿ ವಿಶೇಷ ಆಸಕ್ತಿ ತೋರಿದ್ದೇನೆ. ಇದೀಗ ಮೂರು ಸೇತುವೆ ಆಗುತ್ತಿದೆ. ಇದು ನಮ್ಮ ಸರ್ಕಾರದ ಹೆಮ್ಮೆ ಆಗಿದೆ ಎಂದರು.
ಹಿನ್ನೀರ ಹಬ್ಬದ ವಿಚಾರದಲ್ಲಿ ವಿರೋಧಿಗಳು ತಮ್ಮ ಮಾತಿನ ಚಪಲತೆ ತೋರಿದ್ದಾರೆ. ನಾಡಿಗೆ ಬೆಳಕು ನೀಡಿದ ಖ್ಯಾತಿ ಶರಾವತಿಗೆ ಇದೆ. ಶರಾವತಿ ನದಿ ದಡದಲ್ಲಿ ಇದ್ದ ನಮಗೆ ಹಬ್ಬ ಆಚರಿಸುವ ಸಂಭ್ರಮ ಇಲ್ಲವೆ ? ನಮ್ಮ ಮಕ್ಕಳು ಏನು ಮಾಡಿದ್ದಾರೆ ? ಇಲ್ಲಿ ಸೇರಿದ ಜನರು ಸಂಭ್ರಮ ಪಡುತ್ತಿದ್ದಾರೆ. ಇಷ್ಟು ಜನ ಕಲೆತು ಸಂಭ್ರಮ ಪಡುವ ಹಬ್ಬದ ಆಚರಣೆ ಕಣ್ಣೀರು ಹೇಗೆ ಆಗುತ್ತದೆ ? ಎಂದು ಪ್ರಶ್ನಿಸಿ ‘ಹಿನ್ನೀರನ್ನು ಪನ್ನೀರು ಮಾಡಿ ತೋರಿಸುತ್ತೇವೆ’ ಎಂದರು.
ಸಭೆಯಲ್ಲಿ ಮಾಜಿ ಶಾಸಕ ಬಿ.ಸ್ವಾಮಿರಾವ್, ಗಣಪತಿ ಬೆಳಗೋಡು, ಸುರೇಶ್ ಸ್ವಾಮಿರಾವ್, ಲೋಕನಾಥ್, ಗಣೇಶ್ ಪ್ರಸಾದ್ ಇದ್ದರು. ಎಂ.ಎನ್. ಸುಧಾಕರ್ ಕಾರ್ಯಕ್ರಮ ನಿರ್ವಹಿಸಿದರು.