Malenadu Mitra
ರಾಜ್ಯ ಶಿವಮೊಗ್ಗ

ಪತ್ರಕರ್ತರಿಗೆ ಬದ್ಧತೆ, ಉದ್ಯಮಕ್ಕೆ ವಿಶ್ವಾಸಾರ್ಹತೆ ಮುಖ್ಯ
ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದಿಸಿ ಮಾತನಾಡಿದ ವಾರ್ತಾಇಲಾಖೆ ನಿರ್ದೇಶಕ ಮುರಳೀಧರ್


ಶಿವಮೊಗ್ಗ, : ವಿಶ್ವಾಸವೇ ಮರೆಯಾಗುತ್ತಿರುವ ಇಂದಿನ ದಿನದಲ್ಲೂ ಪತ್ರಿಕೋದ್ಯಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬಂದಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಡಿ.ಪಿ.ಮುರಳೀಧರ್ ಹೇಳಿದರು.
ಪತ್ರಿಕಾಭವನದಲ್ಲಿ ಭಾನುವಾರ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಅಭಿನಂದನಾ ಸಮಾರಂಭವನ್ನುಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರಿಗೆ ನೀಡುವ ಪ್ರಶಸ್ತಿಗಳು ಪತ್ರಿಕೋದ್ಯಮದ ವೃತ್ತಿಪರತೆಯತ್ತ ತುಡಿಯಲು ಕಾರಣವಾಗುತ್ತದೆ. ಮಾಧ್ಯಮ ಅಕಾಡೆಮಿ ಬಂದ ಮೇಲೆ ಪತ್ರಕರ್ತರನ್ನು ಗುರುತಿಸುವಂತ ಕೆಲಸ ಆಗುತ್ತಿದೆ. ವೃತ್ತಿಪರರಿಗೆ ಪ್ರಶಸ್ತಿಗಳನ್ನುನೀಡಿ ಬೆನ್ನು ತಟ್ಟುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ. ಪತ್ರಕರ್ತರ ಸೇವೆ ಪರಿಗಣಿಸಿ ನೀಡುವ ಪುರಸ್ಕಾರದಿಂದ ಪತ್ರಿಕೋದ್ಯಮಕ್ಕೆ ಗರಿ ಮೂಡಿದೆ. ಪತ್ರಿಕೋದ್ಯಮವನ್ನು ಅವಸರದ ಸಾಹಿತ್ಯ ಎಂದು ಕರೆದರೂ ಪತ್ರಿಕೋದ್ಯಮದ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದೆ ಎಂದರು.

ಪತ್ರಿಕೋದ್ಯಮ ಬಲಿಷ್ಠವಾಗಿ ಬೆಳೆಯಬೇಕು ಪತ್ರಕರ್ತರು ಬದ್ದತೆಯಿಂದ ಕೆಲಸ ಮಾಡಬೇಕು ಎನ್ನುವುದು ಸಮಾಜದ ನಿರೀಕ್ಷೆ. ಆದರೆ, ಇತ್ತೀಚೆಗೆ ವೃತ್ತಿ ಬದ್ಧತೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಅನೇಕ ಸವಾಲುಗಳ ಮಧ್ಯೆ ಸೇವೆ ಸಲ್ಲಿಸುವ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸನ್ಮಾನಗಳು, ಪುರಸ್ಕಾರಗಳಿಂದ ಪತ್ರಿಕೆಗಳನ್ನು ಗುರುತಿಸುವಂತ ಕೆಲಸ ಆಗುತ್ತದೆ. ಉದ್ಯಮಿ ಇಂದು ಪೈಪೋಟಿಯಿಂದ ಕೂಡಿದೆ. ಸಾಮಾಜಿಕ ಮಾಧ್ಯಮಗಳಿಂದಾಗಿ ಸ್ಪರ್ಧೆ ಏರ್ಪಟ್ಟಿದ್ದು, ಮುದ್ರಣ ಮಾಧ್ಯಮ ಇಂದಿಗೂ ಹೆಚ್ಚಿನ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಪತ್ರಕರ್ತರು ಸರ್ಕಾರಿ ನೌಕರರಂತೆ ಸಂಕಷ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಲ್ಲಿ ೧೨ ಮಂದಿ ಶಿವಮೊಗ್ಗ ಜಿಲ್ಲೆಯವರೇ ಇರುವುದು ಪತ್ರಿಕೋದ್ಯಮದಲ್ಲಿ ಶಿವಮೊಗ್ಗ ಜಿಲ್ಲೆ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಸೂಚಿಸುತ್ತದೆ. ಇಂದು ಪ್ರಶಸ್ತಿಗಳನ್ನು ಲಾಭಿ ಮಾಡಿ ತೆಗೆದುಕೊಳ್ಳುವವರ ಮಧ್ಯೆ ಅರ್ಹತೆಯಿಂದ ಪ್ರಶಸ್ತಿ ಗಿಟ್ಟಿಸಿಕೊಳ್ಳುವುದು ದೊಡ್ಡ ಸವಾಲು. ಇಂದು ಅಭಿನಂದಿಸಲ್ಪಡುವ ಪತ್ರಕರ್ತರು ಮಾದರಿ ಪತ್ರಕರ್ತರರಾಗಿದ್ದಾರೆ. ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸುವುದು ಯುವ ಪತ್ರಕರ್ತರಲ್ಲಿ ಉತ್ಸಾಹ ಹೆಚ್ಚಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಇತ್ತೀಚೆಗೆ ಪ್ರಶಸ್ತಿಗಳು ಲಾಭಿಗೆ ಒಳಗಾಗಿವೆ. ಇದರ ನಡುವೆಯೂ ಅರ್ಹತೆಯಿಂದ ಪ್ರಶಸ್ತಿಗಳಿಸುವ ಪತ್ರಕರ್ತರು ನಮ್ಮೊಂದಿಗೆ ಇದ್ದಾರೆ. ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರಶಸ್ತಿ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಚಂದ್ರಹಾಸ ಹಿರೇಮಳಲಿ, ಕೆ.ತಿಮ್ಮಪ್ಪ ಹುಲಿಮನೆ, ನಾಗರಾಜ್ ನೇರಿಗೆ, ರಾಮಸ್ವಾಮಿ ಹುಲ್ಕೊಡು, ಹೊನ್ನಾಳಿ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಸಂಘದ ನಗರ ಕಾರ್ಯದರ್ಶಿ ಗೋ.ವ.ಮೋಹನಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಡಿ.ವತ್ಸಲ ಸೂರ್ಯನಾರಾಯಣ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ರಾಮಚಂದ್ರ ಗುಣಾರಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ವಂದಿಸಿದರು.ರಾಮಚಂದ್ರ ಗುಣಾರಿ, ರಾ.ನ.ಮೂರ್ತಿ, ಗಜೇಂದ್ರಸ್ವಾಮಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಪತ್ರಕರ್ತರು ಮತ್ತವರ ಕುಟುಂಬ ಹಾಗೂ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಆತ್ಮಾವಲೋಕನ ಅಗತ್ಯ


ಆಶಯ ಭಾಷಣ ಮಾಡಿದ ಮಾಧ್ಯಮ ಅಕಾಡೆಮಿ ಸದಸ್ಯ, ಎಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗರೆ, ಪತ್ರಕರ್ತರು ಪ್ರತಿನಿತ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಗ ಮಾತ್ರ ಉತ್ತಮ ಪತ್ರಕರ್ತರಾಗಿ ಹೊರಹೊಮ್ಮಲು ಸಾಧ್ಯ. ಪತ್ರಕರ್ತರನ್ನು ಸಮಾಜದ ಕಾವಲು ನಾಯಿ ಎಂದು ಎನ್ನುತ್ತಾರೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಸಾಕು ನಾಯಿ ಎಂದು ವ್ಯಂಗ್ಯದಿಂದ ಕರೆಯಾಗುತ್ತಿದೆ. ಇದಕ್ಕೆ ಕಾರಣ ನಮ್ಮ ವ್ಯವಸ್ಥೆ. ಪತ್ರಕರ್ತರು ತಮ್ಮ ಸ್ವಾತಂತ್ರ್ಯದ ಮಿತಿಯಲ್ಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ದೇಶಕ್ಕೆ ಕಷ್ಟಕಾಲ ಬಂದಾಗ ಹಾಗೂ ಚುನಾವಣೆ ಸಂದರ್ಭದಲ್ಲಿ ಪತ್ರಕರ್ತರ ಕೆಲಸ ಸವಾಲಿನಿಂದ ಕೂಡಿರುತ್ತದೆ. ಅದನ್ನು ವೃತ್ತಿಯಿಂದ ಜಯಿಸಿದಾಗ ಭವಿಷ್ಯವನ್ನು ರೂಪಿಸಿಕೊಳ್ಳಲು ನಮ್ಮಲ್ಲಿ ಹೊಸ ಶಕ್ತಿ ಹುಟ್ಟುತ್ತದೆ. ಪತ್ರಕರ್ತರಲ್ಲಿ ವ್ಯಕ್ತಿತ್ವ ಸಾಣೆ ಹಿಡಿಯುವಂತ ಕೆಲಸ ಆಗಬೇಗುತ್ತದೆ ಎಂದು ಹೇಳಿದರು.

Ad Widget

Related posts

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಭಿವೃದ್ಧಿಪಡಿಸುವ ಉದ್ದೇಶ: ಎಸ್.ರಘುನಾಥ್

Malenadu Mirror Desk

ಹೊಸನಗರ ಕ್ಷೇತ್ರ ಕೊಡಿ, ರೂಪುಗೊಳ್ಳುತ್ತಿದೆ ದೊಡ್ಡ ಆಂದೋಲನ

Malenadu Mirror Desk

ಹಿಂದುಳಿದ ವರ್ಗಗಳು ಒಟ್ಟಾದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.