ರಾಜ್ಯ ಹಾಗೂ ದೇಶದಲ್ಲಿ ಜನರನ್ನು ಸಂಕಷ್ಟಕ್ಕೆ ತಳ್ಳಿರುವ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಇಡೀ ರಾಜ್ಯದ ಜನರು ತೀರ್ಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮಧುಬಂಗಾರಪ್ಪ ಹೇಳಿದರು.
ಸೊರಬ ತಾಲೂಕು ಹಂಚಿ ಗ್ರಾಮದಲ್ಲಿ ಚುನಾವಣೆ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಘೋಷಿಸಿರುವ ಪಂಚ ಗ್ಯಾರಂಟಿಗಳು ಪ್ರತಿಕುಟುಂಬವನ್ನು ಸಶಕ್ತಗೊಳಿಸುವ ಉದ್ದೇಶ ಹೊಂದಿವೆ. ಇಂಧನ, ಗ್ಯಾಸ್, ದಿನಬಳಕೆ ವಸ್ತುಗಳ ಬೆಲೆ ಏರಿಸಿರುವ ಬಿಜೆಪಿ ಜನರ ಬದುಕನ್ನು ದುರ್ಬರ ಮಾಡಿದೆ. ಈ ಸಂಕಷ್ಟದಿಂದ ಜನರನ್ನು ಪಾರು ಮಾಡುವ ಪ್ರಾಮಾಣಿಕ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ ಎಂದರು.
ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷನಾಗಿ ನಾನೂ ಕೆಲಸ ಮಾಡಿದ್ದು, ಬಡ ಹಾಗೂ ಮಧ್ಯಮವರ್ಗದ ಜನರ, ರೈತರ, ಕೂಲಿಕಾರ್ಮಿಕರ ಪರವಾದ ಪ್ರಣಾಳಿಕೆ ಸಿದ್ಧಮಾಡಿವೆ. ಈಗಿನ ಬಿಜೆಪಿ ಸರಕಾರದಂತೆ ಸುಳ್ಳು ಹೇಳಿ ಕೊಟ್ಟ ಮಾತು ತಪ್ಪುವ ಪಕ್ಷ ನಮ್ಮದಲ್ಲ. ಹಿಂದೆ ಸಿದ್ದರಾಮಯ್ಯ ಸರಕಾರ ಇರುವಾಗ ಪ್ರಣಾಳಿಕೆಯಲ್ಲಿ ಭರವಸೆಗಳನ್ನು ಈಡೇರಿಸಿದಂತೆ ಮುಂದೆ ಆಡಳಿತಕ್ಕೆ ಬಂದಾಗಿ ನಮ್ಮ ಸರಕಾರ ಮಾಡಲಿದೆ ಎಂದು ಹೇಳಿದರು.
ಬಿಜೆಪಿಯವರು ಮತಗಳಿಗೆ ಹಣಹಂಚಲು ಬರುತ್ತಾರೆ. ಯಾರೂ ನಿಮ್ಮ ಮತವನ್ನು ಮಾರಿಕೊಳ್ಳಬಾರದು. ಕಾಂಗ್ರೆಸ್ ಸರಕಾರ ಕೊಟ್ಟ ಅಕ್ಕಿಯನ್ನು ಕಡಿಮೆ ಮಾಡಿದ, ಬೆಲೆ ಏರಿಕೆ ಮಾಡಿ ಬವಣೆಪಡುವಂತಹ ಆ ಪಕ್ಷದವರು ಊರಾಚೆಯೇ ನಿಲ್ಲುವಂತೆ ಮಾಡಿ ಎಂದು ಹೇಳಿದರು.
ಸೊರಬ ಸೇರಿದಂತೆ ರಾಜ್ಯಾದ್ಯಂತ ಬಿಜೆಪಿ ಪ್ರಚಂಡ ಬಹುಮತದಿಂದ ಆಯ್ಕೆಯಾಗಲಿದೆ ಎಲ್ಲರೂ ಮೇ ೧೦ ರಂದು ನಡೆಯುವ ಚುನಾವಣೆಯಲ್ಲಿ ನನ್ನನ್ನು ಹಾಗೂ ನಮ್ಮ ಪಕ್ಷವನ್ನು ಬೆಂಬಲಿಸಿ. ಮುಂದೆ ನಿಮ್ಮ ಊರಿನ ಮಗನಾಗಿ ನಿಮ್ಮ ಸೇವೆ ಮಾಡಲು ಅವಕಾಶಕೊಡಿ ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ತಾಲೂಕು ಕಾಂಗ್ರೆಸ್ ಮುಖಂಡರು, ಬ್ಲಾಕ್ ಅಧ್ಯಕ್ಷರುಗಳು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.