Malenadu Mitra
Uncategorizedರಾಜ್ಯಶಿವಮೊಗ್ಗಸಾಗರ

ಹಾಲಪ್ಪ- ಬೇಳೂರು ನಡುವೆ ತೀವ್ರ ಹಣಾಹಣಿ,
ಬಂಗಾರಪ್ಪ ಶಿಷ್ಯರ ನಡುವೆ ಕಾಗೋಡು ಭೀಷ್ಮನಿದ್ದಂತೆ, ಇಬ್ಬರೂ ಗೆಲ್ಲುವವರೇ ಆದ್ರೆ ಸೋಲುವವರಾರು ?

ಶಿವಮೊಗ್ಗ: ನಾಡಿಗೆ ಬೆಳಕು ಕೊಟ್ಟ ಶಕ್ತಿನದಿ ಶರಾವತಿಯಲ್ಲೀಗ ನೀರಿನ ಹರಿವಿಲ್ಲ. ಆದರೆ ಎಲ್ಲೆಂದರಲ್ಲಿ ನಿಂತಿರುವ ಅಗಾಧ ಜಲರಾಶಿ ನೀಲಿಗಟ್ಟಿದೆ. ಹಾಗೇ ನೋಡಿದರೆ ನೀರೊಳಗೆ ಎಲ್ಲವೂ ಅಸ್ಪಷ್ಟ ಮತ್ತು ನಿಗೂಢವಾಗಿದೆ. ಐತಿಹಾಸಿಕ ಕಾಗೋಡು ಚಳವಳಿ ಕಟ್ಟಿದ ಸಾಗರ ಸೀಮೆಯಲ್ಲೀಗ ಯಾವ ಹೋರಾಟಗಳಲ್ಲೂ ಅಂತಹ ಕಸುವು ಉಳಿದಿಲ್ಲ. ಆದರೆ ಈ ಬಾರಿ ನಡೆಯುತ್ತಿರುವ ವಿಧಾನ ಸಭೆ ಚುನಾವಣೆ ಮಾತ್ರ ಅತ್ಯಂತ ಬಿರುಸಿನ ಹೋರಾಟವನ್ನೇ ಸೃಷ್ಟಿಸಿದೆ.
ಮಾಜಿ ಸಿಎಂ ಬಂಗಾರಪ್ಪ ಗರಡಿಯಲ್ಲಿ ರಾಜಕೀಯದ ಅಕ್ಷರ ಕಲಿತ ಸೀನಿಯರ್ ಶಿಷ್ಯ ಹರತಾಳು ಹಾಲಪ್ಪ ಬಿಜೆಪಿಯ ಹುರಿಯಾಳಾದರೆ, ಜೂನಿಯರ್ ಶಿಷ್ಯ ಕಾಂಗ್ರೆಸ್‌ನ ಕಟ್ಟಾಳು. ಕಾನೂನು ತಜ್ಞ , ಈ ಗುರು ಶಿಷ್ಯರ ಸಂಕಷ್ಟಕ್ಕನುಸಾರವಾಗಿ ಆಪ್ತವಾಗಿದ್ದ ಕೆ.ದಿವಾಕರ್ ಅವರು ಆಮ್ ಆದ್ಮಿ ಅಭ್ಯರ್ಥಿ. ಜೆಡಿಎಸ್ ನಿಂದ ಸಯ್ಯದ್ ಜಾಕೀರ್, ಉತ್ತಮ ಪ್ರಜಾಕೀಯದಿಂದ ಸೋಮರಾಜ್, ಕೆಆರೆಸ್‌ನ ಕಿರಣ್, ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ೯ ಅಭ್ಯರ್ಥಿಗಳಿದ್ದಾರೆ. ರಾಜಕೀಯದಲ್ಲಿ ಕಳೆದು ಹೋದ ಮೌಲ್ಯಗಳನ್ನು ಹುಡುಕ ಹೊರಟ ಹಿರಿಯ ರಾಜಕಾರಣಿ,ಹೋರಾಟಗಾರ ತೀನಾ ಶ್ರೀನಿವಾಸ್ ಸ್ಪರ್ಧೆ ಕೂಡಾ ಗಮನ ಮಾತ್ರ ಸೆಳೆದಿದೆ.
ಜಾತಿ ಲೆಕ್ಕಾಚಾರ:
ಸಾಗರ ಕ್ಷೇತ್ರದಲ್ಲಿ ೬೦ ಸಾವಿರಕ್ಕೂ ಹೆಚ್ಚಿರುವ ದೀವರು(ಈಡಿಗರು) ೨೮ ಸಾವಿರದಷ್ಟಿರುವ ಹವ್ಯಕ ಬ್ರಾಹ್ಮಣರು, ೨೫ ಸಾವಿರದಷ್ಟಿರುವ ಲಿಂಗಾಯತರು, ೨೦ ಸಾವಿರದಷ್ಟಿರುವ ಮುಸ್ಲಿಮರು, ೧೬ ಸಾವಿರ ಮಡಿವಾಳರು ಮಾತ್ರವಲ್ಲದೆ ಜೈನರು, ಚೆನ್ನಯ್ಯ ಸಮಾಜ, ಕ್ರಿಶ್ಚಿಯನ್ ಮತಗಳು ಗಣನೀಯ ಪ್ರಮಾಣದಲ್ಲಿವೆ. ಈ ಕ್ಷೇತ್ರದಲ್ಲಿ ಹವ್ಯಕ ಬ್ರಾಹ್ಮಣರು ಮತ್ತು ದೀವರ ಪ್ರತಿನಿಧಿಗಳೇ ಈ ತನಕ ಹೆಚ್ಚಾಗಿ ಆಯ್ಕೆಯಾಗಿದ್ದಾರೆ. ದೀವರು ಮತ್ತು ಹವ್ಯಕರೇ ನಿರ್ಣಾಯಕರು ಎಂಬ ವಾತಾವರಣ ಕ್ಷೇತ್ರದಲ್ಲಿದೆ.


ಹಾಲಪ್ಪ-ಬೇಳೂರು ನಡುವೆ ನೇರ ಜಿದ್ದಾ ಜಿದ್ದಿ


ಹರತಾಳು ಹಾಲಪ್ಪ ಮತ್ತು ಬೇಳೂರು ಗೋಪಾಲಕೃಷ್ಣ ಇಬ್ಬರ ನಡುವೆ ಒಂದು ಕಾಲದಲ್ಲಿ ಉತ್ತಮ ಸಂಬಂಧ ಇತ್ತು. ರಾಜಕೀಯ ಮಹತ್ವಾಕಾಂಕ್ಷೆಯ ಕಾರಣಕ್ಕೆ ಪಕ್ಷ ಮತ್ತು ನಿಷ್ಠೆ ಬದಲಾವಣೆಯಾಗಿದ್ದರಿಂದ ಇಬ್ಬರೂ ವಿಭಿನ್ನ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ಈ ಇಬ್ಬರೂ ಪರಸ್ಪರ ಟೀಕೆಗಳನ್ನು ಮಾಡಿಕೊಳ್ಳುವುದರಲ್ಲಿ ಎತ್ತಿದ ಕೈ. ಆಹಾರ, ಉಡುಗೆ ತೊಡುಗೆಗಳವರೆಗೂ ಹೀಗಳೆದುಕೊಂಡಿದ್ದಾರೆ.
ಮೂರು ಕ್ಷೇತ್ರದಲ್ಲಿ ಶಾಸಕರಾಗಿರುವ ಹಿರಿಮೆ ಹೊಂದಿರುವ ಹರತಾಳು ಹಾಲಪ್ಪ, ಕಳೆದ ಚುನಾವಣೆಯಲ್ಲಿ ಮುತ್ಸದ್ದಿ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರನ್ನು ಸೋಲಿಸಿದ್ದರು. ಚುನಾವಣೆ ರಾಜಕೀಯದಿಂದ ದೂರ ಉಳಿದಿರುವ ಕಾಗೋಡು ತಿಮ್ಮಪ್ಪ ಅವರು, ತಮ್ಮ ಸೋದರಳಿಯನಾದ ಕಾಂಗ್ರೆಸ್‌ನ ಬೇಳೂರು ಗೋಪಾಲಕೃಷ್ಣ ಅವರ ಪರ ಭೀಷ್ಮನಂತೆ ನಿಂತಿದ್ದಾರೆ.
ಚುನಾವಣೆ ವಿಷಯಗಳು:
ಸಾಗರ ಕ್ಷೇತ್ರದ ಅಭಿವೃದ್ಧಿ, ಸಿಗಂದೂರು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕೆಂಬ ಹುನ್ನಾರ, ಗಣಪತಿ ಕೆರೆ ವಿವಾದ, ಶರಾವತಿ ಸಂತ್ರಸ್ಥರ ಭೂಮಿ ನೋಟಿಫಿಕೇಷನ್ ರದ್ದತಿ. ಪ್ರತಿಷ್ಠಿತ ಎಂಡಿಎಫ್ ಸರ್ವಸದಸ್ಯರ ಸಭೆಯಲ್ಲಿ ನಡೆದ ಹೊಡೆದಾಟದ ಜತೆಗೆ ಶಾಸಕ ಹಾಲಪ್ಪ ಬಳಗದ ದುರಹಂಕಾರವೂ ಈ ಬಾರಿಯ ಚುನಾವಣೆ ವಿಷಯವಾಗಲಿದೆ ಎಂದು ಕ್ಷೇತ್ರ ಸಂಚಾರದಲ್ಲಿ ತಿಳಿದುಬರುವ ಸಂಗತಿ.
ಸಾಗರ ಕ್ಷೇತ್ರಕ್ಕೆ ಹಾಲಪ್ಪ ಹಿಂದೆಂದಿಗಿಂತಲೂ ಹೆಚ್ಚಿನ ಅನುದಾನ ತಂದಿದ್ದಾರೆ. ಕಳಸವಳ್ಳಿ-ಅಂಬಾರಗೊಡ್ಲು ಸೇತುವೆ ಕಾಮಗಾರಿ ನಡೆಯುತ್ತಿದೆ. ಗಣಪತಿ ಕೆರೆ ಹೂಳೆತ್ತಲಾಗಿದೆ.ಕೆರೆ ಹಬ್ಬ, ಹಿನ್ನೀರ ಹಬ್ಬಗಳನ್ನು ಯಶಸ್ವಿಗೊಳಿಸಲಾಗಿದೆ. ರಾಜ್ಯದಲ್ಲಿ ನೂರಾರು ಎಕರೆ ಅರಣ್ಯ ಪ್ರದೇಶ ದೇವಸ್ಥಾನ ಮತ್ತು ಮಠಗಳ ಹಿಡಿತದಲ್ಲಿದ್ದರೂ, ತಳಸಮುದಾಯದ ಆರಾದ್ಯದೇವಿ ಸಿಗಂದೂರು ಚೌಡೇಶ್ವರಿ ದೇವಾಲಯದ ಹೊಂದಿದ್ದ ಕೇವಲ ೧೨ ಎಕರೆ ಪ್ರದೇಶದಲ್ಲಿ ಈಗ ಆರು ಎಕರೆ ಜಾಗವನ್ನು ತೆರವುಗೊಳಿಸಲಾಗಿದೆ. ಈ ಇಡೀ ವಿವಾದವನ್ನು ಬಗೆಹರಿಸುವಲ್ಲಿ ಶಾಸಕ ಹಾಲಪ್ಪ ಅವರು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಎಂಬ ಆರೋಪ ಇದೆ. ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಆಡಳಿತದಲ್ಲಿ ಸದಸ್ಯರಲ್ಲದ ಹಾಲಪ್ಪ ಅವರು ಪ್ರವೇಶ ಮಾಡಿದ್ದರು. ಅಲ್ಲಿನ ಇಬ್ಬರು ಪದಾಧಿಕಾರಿಗಳ ಮೇಲೆ ಹಾಲಪ್ಪರ ಸಮ್ಮುಖದಲ್ಲಿಯೇ ಹಲ್ಲೆ ನಡೆಸಿದ್ದ ಪ್ರಕರಣ ಈ ಚುನಾವಣೆ ಮೇಲೆ ಪ್ರಭಾವ ಬೀರಬಹುದು ಎಂಬುದು ಕೆಲವರ ಅಭಿಪ್ರಾಯ.

ಶರಾವತಿ ಸಂತ್ರಸ್ತರ ಸಮಸ್ಯೆ:
ಶಾಸಕ ಹರತಾಳು ಹಾಲಪ್ಪ ಅವರ ಕುಟುಂಬವೂ ಶರಾವತಿ ಮುಳುಗಡೆ ಸಂತ್ರಸ್ತರದ್ದೇ ಆಗಿದ್ದು, ೨೦೧೮ ರ ಚುನಾವಣೆಯಲ್ಲಿ ನಮ್ಮವರೇ ಶಾಸಕರಾದರೆ ಶಾಶ್ವತ ಪರಿಹಾರ ಸಿಕ್ಕೀತು ಎಂದು ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿರುವ ಮುಳುಗಡೆ ಸಂತ್ರಸ್ತರು ಹಾಲಪ್ಪರಿಗೆ ಬೆಂಬಲಿಸಿದ್ದರು. ಈಗ ಮತ್ತೊಂದು ಚುನಾವಣೆ ಬಂದಿದೆ. ಆದರೆ ಸಂತ್ರಸ್ತರ ಸಮಸ್ಯೆ ಹಿಂದಿಗಿಂತ ಈಗ ಭೀಕರವಾಗಿದೆ. ಕಾಗೋಡು ತಿಮ್ಮಪ್ಪ ಅವರ ಅವಧಿಯಲ್ಲಿಮಾಡಿದ್ದ ಎಲ್ಲಾ ಡಿನೋಟಿಫೀಕೇಷನ್ ಆದೇಶಗಳನ್ನು ನ್ಯಾಯಾಲಯ ರದ್ದುಗೊಳಿಸಿದ್ದು, ನ್ಯಾಯಾಲಯ ಆದೇಶ ಪಾಲಿಸಿದ ರಾಜ್ಯ ಸರಕಾರ ನೋಟಿಫಿಕೇಷನ್ ರದ್ದು ಮಾಡಿ ರಾಜ್ಯಪತ್ರವನ್ನೂ ಹೊರಡಿಸಿದೆ. ಈ ಪ್ರಕರಣದಲ್ಲಿ ರಾಜ್ಯ ಸರಕಾರ ನ್ಯಾಯಾಲಯದಲ್ಲಿ ಸರಿಯಾದ ವಾದ ಮಂಡನೆ ಮಾಡಲಿಲ್ಲ. ಸಂತ್ರಸ್ತರ ಪ್ರತಿನಿಧಿಯಾಗಿದ್ದ ಹಾಲಪ್ಪ ಅವರು ಆಸ್ಥೆವಹಿಸಲಿಲ್ಲ ಎಂಬ ಆರೋಪವಿದೆ.

ಸಕಾರಾತ್ಮಕ ಮತ್ತು ನಕಾರಾತ್ಮಕ ವಿಷಯಗಳು

ಹಾಲಿ ಶಾಸಕ ಹಾಲಪ್ಪ ಅವರಿಗೆ ಪೇಜ್ ಪ್ರಮುಖರಿಂದ ಹಿಡಿದು ಬಿಜೆಪಿಯ ಬುಡಮಟ್ಟದ ನೆಟ್ವರ್ಕ್, ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಹಿರಿಯ ರಾಜಕಾರಣಿ ಮಾಜಿ ಶಾಸಕ ಬಿ.ಸ್ವಾಮಿರಾವ್, ಡಾ.ರಾಜನಂದಿನಿ ಕಾಗೋಡು, ಪ್ರಸನ್ನ ಕೆರೆಕೈ,ಹರನಾಥರಾಯರಂತಹ ಪ್ರಮುಖರ ಬೆಂಬಲ ಹಾಲಪ್ಪರಿಗಿರುವ ಸಕಾರಾತ್ಮಕ ಅಂಶಗಳಾಗಿವೆ. ತಮ್ಮ ಆಸ್ತಿ ಇರುವ ಕಾರಣಕ್ಕೆ ಗಣಪತಿ ಕೆರೆ ಅಭಿವೃದ್ಧಿ ಮಾಡಲಾಗಿದೆ. ಕಾರ್ಯಕರ್ತರು, ಮುಖಂಡರೊಂದಿಗೆ ಅಸಹನೆಯ ವರ್ತನೆ, ಹಿಂಬಾಲಕರ ಮೇಲಿರುವ ದರ್ಪದ ಆರೋಪ ನಕಾರಾತ್ಮಕ ಅಂಶಗಳಾಗಿವೆ.
ಎರಡು ಬಾರಿ ಶಾಸಕರಾಗಿದ್ದ ಅವಧಿಯಲ್ಲಿ ಶರಾವತಿ ಹಿನ್ನೀರಿನಿಂದ ಸಾಗರ ಪಟ್ಟಣಕ್ಕೆ ಕುಡಿಯುವ ನೀರು ತಂದಿರುವುದು. ಬಸ್ ನಿಲ್ದಾಣ, ಬಸ್ ಡಿಪೋ ಸೇರಿದಂತೆ ಕಣ್ಣಿಗೆ ಕಾಣುವ ಕೆಲಸ ಮಾಡಿರುವುದು. ಶಾಸಕತ್ವದ ಅವಧಿಯಲ್ಲಿ ಎಲ್ಲರೊಂದಿಗೆ ಪ್ರೀತಿಯಿಂದ ನಡೆದುಕೊಂಡಿರುವುದು. ಎರಡು ಬಾರಿ ಶಾಸಕರಾದರೂ ಸಾಗರ ಪಟ್ಟಣದಲ್ಲಿ ಒಂದು ಮನೆಯನ್ನೂ ಖರೀದಿ ಮಾಡಿಲ್ಲ. ಆಸ್ತಿಮಾಡಿಲ್ಲ ಎಂಬ ಅನುಕಂಪ. ಸಾಮಾನ್ಯ ಜನರೊಂದಿಗೂ ಹೊಂದಿರುವ ಸಂಪರ್ಕ. ಎಲ್ಲಕ್ಕಿಂತ ಮುಖ್ಯವಾಗಿ ಸಾಗರ ಕ್ಷೇತ್ರದ ಜನರಿಗೆ ಒಂದು ಸ್ವಾಭಿಮಾನ ನೀಡಿರುವ ಕಾಗೋಡು ತಿಮ್ಮಪ್ಪ, ಬಿ.ಆರ್.ಜಯಂತ್, ಹಕ್ರೆ ಮಲ್ಲಿಕಾರ್ಜುನ ಅವರ ಬೆಂಬಲ ಸಕಾರಾತ್ಮ ಅಂಶಗಳಾಗಿವೆ. ಸೀರಿಯಸ್ ರಾಜಕಾರಣಿಯಲ್ಲ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಒಂದು ವಿಷನ್ ಇಲ್ಲ ಎಂಬುದು ಮತ್ತು ಹಾಲಪ್ಪರನ್ನು ಎದುರಿಸುವಷ್ಟು ಆರ್ಥಿಕ ಸಂಪನ್ಮೂಲ ಇಲ್ಲದಿರುವುದು ಬೇಳೂರು ಅವರಿಗಿರುವ ನಕಾರಾತ್ಮಕ ಅಂಶಗಳಾಗಿವೆ.

ತೀವ್ರ ಪೈಪೋಟಿ
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿಯಿದೆ. ಕಾಂಗ್ರೆಸ್‌ನವರು ನಮ್ಮದು ಪ್ರೀತಿಯ ರಾಜಕಾರಣ, ಇದು ಬಡವ ಮತ್ತು ಶ್ರೀಮಂತರ ನಡುವಿನ ಹೋರಾಟ ಎಂದು ಹೇಳಿಕೊಂಡು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರು ತಮ್ಮ ಸಂಪರ್ಕ ಜಾಲದ ಮೂಲಕ ಸಮರ್ಪಕ ಸಂಪನ್ಮೂಲ ಹಂಚಿಕೆ ಮಾಡಿ ಸದ್ದಿಲ್ಲದೆ, ತಂತ್ರಗಾರಿಕೆಯ ಚುನಾವಣೆ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಯಥೇಚ್ಚವಾಗಿ ಹಣದ ಹರಿವಾಗಲಿದ್ದು, ಈ ಹಣ ಮತದಾರರನ್ನು ಯಾವ ರೀತಿ ಮರುಳು ಮಾಡುವುದು ಎಂಬುದರ ಮೇಲೆ ಫಲಿತಾಂಶ ಬರಲಿದೆ. ಸಧ್ಯದ ಮಟ್ಟಿಗೆ ಗ್ರಾಮಾಂತರದಲ್ಲಿ ಕಾಂಗ್ರೆಸ್ ಮುಂದಿದ್ದರೆ, ನಗರ ಪ್ರದೇಶದಲ್ಲಿ ಪ್ರಬಲ ಪೈಪೋಟಿ ಕಂಡುಬರುತ್ತಿದೆ. ಆಪ್‌ನ ದಿವಾಕರ್ ಮತ್ತು ಉಳಿದ ಅಭ್ಯರ್ಥಿಗಳು ಕಸಿಯುವ ಮತಗಳೂ ಪಲಿತಾಂಶದ ಮೇಲೆ ಪರಿಣಾಮ ಬೀರಲಿವೆ.

ಜನರ ಕೆಲಸಕ್ಕಾಗಿ ನೇರ ಮತ್ತು ನಿಷ್ಟುರವಾಗಿ ಮಾತನಾಡುವುದು ನನ್ನ ಸಹಜ ಗುಣ. ಅಧಿಕಾರಿಗಳು, ಮುಖಂಡರು ಬೇಜವಾಬ್ದಾರಿ ಮಾಡಿದಾಗ ಬೈಯ್ದಿದ್ದೇನೆ. ಎಲ್ಲವೂ ಕ್ಷೇತ್ರ ಮತ್ತು ಜನಕ್ಕಾಗಿ ಅದನ್ನೇ ದುರಹಂಕಾರ ಅನ್ನುವುದು ಸರಿಯಲ್ಲ

ಹೆಚ್. ಹಾಲಪ್ಪ, ಶಾಸಕ

ನನ್ನದು ಪ್ರೀತಿಯ ರಾಜಕಾರಣ, ಎಲ್ಲ ಜಾತಿ ಧರ್ಮದವರು ನನ್ನ ಬಂಧುಗಳು. ಯಾರಿಗೂ ಮನಸು ನೋವು ಮಾಡಿ ನಾನು ರಾಜಕಾರಣಿ ಎನ್ನಿಸಿಕೊಳ್ಳುವ ಅಗತ್ಯವಿಲ್ಲ. ಗೆಲ್ಲಿಸಿದ ಜನ ನಮಗೆ ದೇವರಿದ್ದಂತೆ. ನನ್ನ ಉಡುಗೆ ತೊಡುಗೆ ಟೀಕಿಸುವುದು ದರ್ಪ ಅಲ್ಲದೆ ಮತ್ತೇನು ?

ಗೋಪಾಲಕೃಷ್ಣ ಬೇಳೂರು, ಕಾಂಗ್ರೆಸ್ ಅಭ್ಯರ್ಥಿ

Ad Widget

Related posts

ಅರಣ್ಯಾಧಿಕಾರಿಗಳ ದುರಾಡಳಿತ ಖಂಡಿಸಿ ಪಾದಯಾತ್ರೆ

Malenadu Mirror Desk

ನಾಳೆ ಕೆ-ಸೆಟ್ ಅರ್ಹತಾ ಪರೀಕ್ಷೆ , ಎಲ್ಲೆಲ್ಲಿ ಪರೀಕ್ಷಾ ಕೇಂದ್ರಗಳಿವೆ ಗೊತ್ತಾ?

Malenadu Mirror Desk

ಪ್ರತಿಭಟನೆ ವೇಳೆ ಉಪನ್ಯಾಸಕಿ ಅಸ್ವಸ್ಥ : ಎಂಎಲ್ಸಿ ಡಾ.ಧನಂಜಯ ಸರ್ಜಿರಿಂದ ಚಿಕಿತ್ಸೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.