ಶಿವಮೊಗ್ಗ: ಪ್ರಜಾತಂತ್ರದ ಹಬ್ಬ ವಾದ ಚುನಾವಣೆ ಮಲೆನಾಡು ಹಾಗೂ ಮಧ್ಯ ಕರ್ನಾಟಕದಲ್ಲಿ ಶಾಂತಿಯುತವಾಗಿ ಮುಕ್ತಾಯ ಗೊಂಡಿದೆ. ಕಳೆದ ಒಂದು ತಿಂಗಳಿಂದ ಚುನಾ ವಣೆಯ ಕಾವನ್ನು ಅಲ್ಲಲ್ಲಿ ಬಿದ್ದ ಮಳೆಯೂ ತಣ್ಣಗೆ ಮಾಡಿದೆ. ಬೆಳಗ್ಗೆ ಏಳು ಗಂಟೆಗೆ ಮುನ್ನವೇ ಸರತಿ ಸಾಲಿನಲ್ಲಿ ನಿಂತಿದ್ದ ಜನರು ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದರು. ಮಧ್ಯಾಹ್ನದ ಹೊತ್ತಿಗೆ ಚುರುಕಾದ ಮತದಾನ ಸಂಜೆ ಮಳೆ ಬರುವ ಮುನ್ಸೂಚನೆ ಇದ್ದ ಕಾರಣ ಬಿರುಸಿನಿಂದ ಮತದಾನ ನಡೆಯಿತು.
ಶಿವಮೊಗ್ಗ ಜಿಲ್ಲೆಯಲ್ಲಿ ಅಂತಿಮ ವರದಿ ಬಂದಾಗ ಶೇ.78.28 ಮತದಾನವಾಗಿದೆ. ಶಿವಮೊಗ್ಗ ಗ್ರಾಮಾಂತರ ಶೇ. 83.71ಭದ್ರಾವತಿ 68.47, ಶಿವಮೊಗ್ಗ ನಗರ 68.74, ತೀರ್ಥಹಳ್ಳಿ 84.83, ಶಿಕಾರಿಪುರ 82.57, ಸೊರಬ 82.97 ಹಾಗೂ ಸಾಗರ ಕ್ಷೇತ್ರದಲ್ಲಿ 80.29 ಮತದಾನ ವಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಕುಟುಂಬದೊಂದಿಗೆ ಶಿಕಾರಿಪುರದಲ್ಲಿ ಮತಚಲಾವಣೆ ಮಾಡಿದರೆ, ಮಾಜಿ ಡಿಸಿಎಂ ಈಶ್ವರಪ್ಪ ಅವರು ಶಿವಮೊಗ್ಗ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಸಾಗರದಲ್ಲಿ ಮತ ದಾನ ಮಾಡಿದರು. ಡಿ.ಹೆಚ್.ಶಂಕರಮೂರ್ತಿ ಅವರು ಕುಟುಂಬದೊಂದಿಗೆ ಶಿವಮೊಗ್ಗದಲ್ಲಿ ಮತ ದಾನ ಮಾಡಿದರು. ಉಳಿದಂತೆ ಎಲ್ಲಾ ಅಭ್ಯರ್ಥಿ ಗಳು ಆಯಾ ಕ್ಷೇತ್ರದಲ್ಲಿ ಮತದಾನ ಮಾಡಿದರು.
ಅಶೋಕ್‌ನಾಯ್ಕ್ ವಿರುದ್ಧ ಘೋಷಣೆ:
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕ್ ನಾಯ್ಕ್ ಅವರು ಕುಂಚೇನಹಳ್ಳಿ ಗ್ರಾಮದಲ್ಲಿ ಮತದಾನ ಕೇಂದ್ರಕ್ಕೆ ಭೇಟಿ ನೀಡಿದ್ದ ಸಂದರ್ಭ ಕೆಲವರು ಧಿಕ್ಕಾರ ಕೂಗಿ ದರು. ಈ ಸಂದರ್ಭ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿಗರು ನಡುವೆ ಪರವಿರೋಧ ಘೋಷಣೆ ಕೂಗಿದರು. ಪೊಲೀಸರು ಎರಡೂ ಗುಂಪುಗಳನ್ನು ಸಮಾಧಾನಿಸಿ ವಾತಾವರಣ ತಿಳಿಗೊಳಿಸಿದರು.