ಕಾಂಗ್ರೆಸ್ -3
ಬಿಜೆಪಿ-3
ಜೆಡಿಎಸ್ –1
ಶಿವಮೊಗ್ಗ,ಮೇ ೧೩: ರಾಜ್ಯ ಬಿಜೆಪಿ ಶಕ್ತಿ ಕೇಂದ್ರ ಶಿವಮೊಗ್ಗ ಜಿಲ್ಲೆಯಲ್ಲಿ ಈ ಚುನಾವಣೆಯಲ್ಲಿ ಹಿನ್ನಡೆಯಾಗಿದ್ದು,ಕಾಂಗ್ರೆಸ್ ಗಮನಾರ್ಹ ಸಾಧನೆ ಮಾಡಿದ್ದರೆ, ಜೆಡಿಎಸ್ ಪಕ್ಷಕ್ಕಿಂತ ವ್ಯಕ್ತಿ ಆಧಾರಿತವಾಗಿ ಚುನಾವಣೆ ನಡೆಸಿದ್ದರಿಂದ ಒಂದು ಕ್ಷೇತ್ರದಲ್ಲಿ ಜಯ ಸಾಧಿಸಿದೆ.
ಒಟ್ಟು ಏಳು ಸ್ಥಾನಗಳಲ್ಲಿ ಬಿಜೆಪಿ ೩ ಕಾಂಗ್ರೆಸ್ ೩ ಹಾಗೂ ಜೆಡಿಎಸ್ ಒಂದು ಸ್ಥಾನದಲ್ಲಿ ಜಯಗಳಿಸಿದೆ.
ಬಿಜೆಪಿಯಿಂದ ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರ, ಶಿವಮೊಗ್ಗದಲ್ಲಿ ಚೆನ್ನಬಸಪ್ಪ ಹಾಗೂ ಶಿಕಾರಿಪುರದಲಿ ವಿಜಯೇಂದ್ರ ಅವರು ಗೆಲವು ಸಾಧಿಸಿದ್ದಾರೆ.
ಕಾಂಗ್ರೆಸ್‌ನಿಂದ ಸೊರಬದಲ್ಲಿ ಮಧುಬಂಗಾರಪ್ಪ, ಸಾಗರ ಕ್ಷೇತ್ರದಲ್ಲಿ ಬೇಳೂರು ಗೋಪಾಲಕೃಷ್ಣ ಮತ್ತು ಭದ್ರಾವತಿಯಲ್ಲಿ ಬಿ.ಕೆ.ಸಂಗಮೇಶ್ವರ್ ಗೆಲುವಿನ ನಗೆ ಬೀರಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಶರದಾ ಪೂರ್ಯಾನಾಯ್ಕ್ ಆಯ್ಕೆಯಾಗಿದ್ದಾರೆ.
ಆರು ಶಾಸಕರನ್ನು ಹೊಂದಿದ್ದ ಆಡಳಿತ ಪಕ್ಷ ಬಿಜೆಪಿ ಮೂರು ಎರಡು ಸ್ಥಾನಗಳನ್ನು ಪ್ರಯಾಸದಲ್ಲಿ ಒಂದು ಸ್ಥಾನವನ್ನು ಭರ್ಜರಿಯಾಗಿ ಗೆದ್ದುಕೊಂಡಿದೆ. ಒಬ್ಬ ಶಾಸಕರನ್ನು ಹೊಂದಿದ್ದ ಕಾಂಗ್ರೆಸ್ ಮತ್ತೆರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಅಸ್ತಿತ್ವ ಸಡಿಲಗೊಂಡಿದ್ದ ಜೆಡಿಎಸ್‌ಗೆ ಶಾರದಾ ಪೂರ್ಯನಾಯ್ಕ ಅವರ ಗೆಲವು ಚೇತರಿಕೆ ನೀಡಿದೆ.
ಜಿಲ್ಲೆಯಲ್ಲಿ ತಲಾ ಮೂರು ಸ್ಥಾನಗಳನ್ನು ಗಳಿಸಿರುವ ಬಿಜೆಪಿ ಮತ್ತು ಕಾಂಗ್ರೆಸ್ ಸಮಾನ ಗೆಲುವು ಪಡೆದಿಕೊಂಡಂತಾಗಿದೆ. ಶಿಕಾರಿಪುರ ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ಅವರು ಸೋಲುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕೊನೆಯಲ್ಲಿ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರು ಮಾಡಿರುವ ಅಭಿವೃದ್ಧಿ ಅವರನ್ನು ಗೆಲುವಿನ ದಡ ಸೇರಿಸಿದೆ.
ಕಾಂಗ್ರೆಸ್ ಪಕ್ಷ ನೀಡಿದ್ದ ಸುಳ್ಳು ಗ್ಯಾರಂಟಿಗಳಿಂದ ನಮಗೆ ಹಿನ್ನಡೆಯಾಯಿತು. ನಮ್ಮ ಆಡಳಿತಕ್ಕೆ ಆದ ಸೋಲಲ್ಲ. ಅಪಪ್ರಚಾರ ಆಧಾರ ರಹಿತ ಧೂಷಣೆಗಳಿಂದ ಪಕ್ಷ ಹಿನ್ನಡೆ ಅನುಭವಿಸಿತು. ಈ ಬಗ್ಗೆ ಆತ್ಮಾವಲೋಕನ ಮಾಡುತ್ತೇವೆ. ತೀರ್ಥಹಳ್ಳಿಯ ಇಬ್ಬರು ನಾಯಕರು ನನ್ನನ್ನು ಸೋಲಿಸಲು ಪ್ರಯತ್ನಿಸಿದರು. ಆದರೆ ಜನ ನನ್ನನ್ನು ಗೆಲ್ಲಿಸಿದರು.
–ಆರಗ ಜ್ಞಾನೇಂದ್ರ, ತೀರ್ಥಹಳ್ಳಿ ಶಾಸಕ
ಬಿಜೆಪಿಯ ದುರಾಡಳಿತ, ಜಾತಿ, ಧರ್ಮಗಳ ನಡುವೆ ತಾರತಮ್ಯ ಮಾಡುವುದು. ಅಧಿಕಾರದಲ್ಲಿರುವಾಗ ಅವರು ಮಾಡಿದ ಜನವಿರೋಧಿ ಕೆಲಸಗಳಿಂದಾಗಿ ಜನ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಕಾಂಗ್ರೆಸ್‌ನ ಪ್ರಣಾಳಿಕೆ ಮತ್ತು ಕೊಟ್ಟ ಮಾತು ನಾವು ತಪ್ಪುವುದಿಲ್ಲ ಎಂಬ ನಂಬಿಕೆ ನಮ್ಮ ಮೇಲಿದೆ. ಈ ಕಾರಣದಿಂದ ಜನ ಆಶೀರ್ವದಿಸುತ್ತಾರೆ. ಅವರ ನಿರೀಕ್ಷೆ ಹುಸಿ ಮಾಡುವುದಿಲ್ಲ. ಸೊರಬದ ಎಲ್ಲಾ ಜಾತಿ ಧರ್ಮ ಮತ್ತು ವರ್ಗದ ಜನ ನನ್ನನ್ನು ಬೆಂಬಲಿಸಿ ಹರಸಿದ್ದಾರೆ ಅವರಿಗೆ ನಾನು ಯಾವತ್ತೂ ಋಣಿಯಾಗಿರುವೆ
ಮಧುಬಂಗಾರಪ್ಪ, ಸೊರಬ ಶಾಸಕ
ನನ್ನ ಗೆಲವನ್ನು ಸಾಗರದ ಸಮಸ್ತ ಜನರಿಗೆ ಅರ್ಪಿಸುವೆ. ಇದು ದುರಹಂಕಾರ ಮತ್ತು ದರ್ಪಕ್ಕೆ ಕೊಟ್ಟ ಉತ್ತರವಾಗಿದೆ. ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರ ಆಶೀರ್ವಾದ ಮತ್ತು ಶ್ರಮ ನನ್ನ ಗೆಲುವಿನ ಹಿಂದಿದೆ. ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುತ್ತೇನೆ
ಬೇಳೂರು ಗೋಪಾಲಕೃಷ್ಣ, ಸಾಗರ ಶಾಸಕ
ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇವೆ. ಶಿಕಾರಿಪುರದಲ್ಲಿ ತಂದೆಯವರ ಅಭಿವೃದ್ಧಿ ಕೆಲಸಗಳು ನನ್ನನ್ನು ಗೆಲ್ಲಿಸಿವೆ. ರಾಜ್ಯದಲ್ಲಿ ಪಕ್ಷಕ್ಕೆ ಆದ ಸೋಲು ಗೆಲುವಿನ ಮೆಟ್ಟಿಲು ಎಂದು ಭಾವಿಸಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಮರಳಿ ಸಮರ್ಥವಾಗಿ ಸಂಘಟಿಸುತ್ತೇವೆ.
ಬಿ.ವೈ.ವಿಜಯೇಂದ್ರ, ಶಿಕಾರಿಪುರ ಶಾಸಕ
ಕ್ಷೇತ್ರದ ಜನ ಹಿಂದಿನವರ ದುರಾಡಳಿತ ದರ್ಪ ಮತ್ತು ಭ್ರಷ್ಟಾಚಾರವನ್ನು ತಿರಸ್ಕರಿಸಿದ್ದಾರೆ. ಇಡೀ ಕ್ಷೇತ್ರದ ಜನ ನನ್ನನ್ನು ಬೆಂಬಲಿಸಿ ಗೆಲ್ಲಿಸಿದ್ದಾರೆ. ನನ್ನ ಜಯಕ್ಕಾಗಿ ದುಡಿದವರಿಗೆ ಮತ್ತು ಮತದಾರರಿಗೆ ಈ ಗೆಲುವು ಸಲ್ಲುತ್ತದೆ. ಜನರ ನಿರೀಕ್ಷೆಯಂತೆ ಕೆಲಸ ಮಾಡುವೆ
ಶಾರದಾ ಪೂರ್ಯಾನಾಯ್ಕ್ ,ಶಿವಮೊಗ್ಗ ಗ್ರಾಮಾಂತರ ಶಾಸಕಿ