Malenadu Mitra
ರಾಜ್ಯ

ಡಿನೋಟಿಫಿಕೇಷನ್‌ಗೆ ಸಿಗಲಿಲ್ಲ ಕೇಂದ್ರದ ಸಮ್ಮತಿ
ಶರಾವತಿ ಸಂತ್ರಸ್ಥರಿಗೆ ಕೇಂದ್ರದ ಬರೆ: ಮುಳುಗಡೆ ಸಂತ್ರಸ್ಥರ ಭೂ ಹಕ್ಕಿನ ಕನಸು ನುಚ್ಚು ನೂರು

ಶಿವಮೊಗ್ಗ : ಶರಾವತಿ ಮುಳುಗಡೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ನಿರ್ಧಾರ ಬರಸಿಡಿಲಿನಂತೆ ಅಪ್ಪಳಿಸಿದೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂ ಹಕ್ಕು ನೀಡಲು ಮೀಸಲು ಅರಣ್ಯ ಪ್ರದೇಶ ಬಿಡುಗಡೆಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ತಿರಸ್ಕರಿಸಿದೆ.
ಹೌದು, ಕೇಂದ್ರ ಸರ್ಕಾರದ ಈ ನಿರ್ಧಾರ ಆರು ದಶಕಗಳಿಂದ ಭೂ ಹಕ್ಕಿನ ಕನಸಿನಲ್ಲಿದ್ದ ಮುಳುಗಡೆ ಸಂತ್ರಸ್ತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೀಸಲು ಅರಣ್ಯ ಪ್ರದೇಶದ ಕುರಿತಂತೆ ಸುಪ್ರೀಂಕೋರ್ಟ್ ಆದೇಶದನ್ವಯ ಪ್ರಸ್ತಾವನೆಗೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದಿದೆ. ೨೦೨೩ ಏಪ್ರಿಲ್ ೨೮ ರಂದು ಕೇಂದ್ರ ಸರ್ಕಾರದ ಅರಣ್ಯ ಸಚಿವಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದ್ದು,ಸಂತ್ರಸ್ಥರ ಭೂ ಹಕ್ಕಿನ ಕನಸು ಚಂದ್ರನಲ್ಲಿರುವ ಗಂಟಿನಂತಾಗಿದೆ.
ಹಿಂದಿನ ಬಿಜೆಪಿ ಸರ್ಕಾರ ಮೀಸಲು ಅರಣ್ಯ ಪ್ರದೇಶದಲ್ಲಿರುವ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಕ್ಕಿನ ಒಡೆತನ ನೀಡಲಾಗುವುದು ಎಂದು ಸಂತ್ರಸ್ಥ ರೈತರಿಗೆ ವಚನ ನೀಡಿತ್ತು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಪ್ರಸ್ತಾವನೆ ಸಲ್ಲಿಸಿತ್ತು.ಇದೀಗ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿದೆ.ಈ ಮೂಲಕ ಸಂತ್ರಸ್ತರ ಸಮಸ್ಯೆ ಮತ್ತೊಮ್ಮೆ ರಾಜಕೀಯ ಆಹಾರವಾಗಿದೆ.
ಈ ಹಿಂದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮುಳುಗಡೆ ರೈತರಿಗೆ ಹಕ್ಕುಪತ್ರ ಕೊಟ್ಟೆ ತೀರುತ್ತೇವೆ ಎಂದು ವಾಗ್ಧಾನ ಕೊಟ್ಟಿದ್ದರು. ಅಷ್ಟೇ ಅಲ್ಲದೇ ಡಿನೋಟಿಫಿಕೇಷನ್ ರದ್ದು ಗೊಂಡ ಬೆನ್ನಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಶಿವಮೊಗ್ಗ ನಗರದ ಈಡಿಗರ ಭವನದಲ್ಲಿ ನಡೆದ ಮುಳುಗಡೆ ಸಂತ್ರಸ್ಥರ ರೈತರ ಸಭೆಯಲ್ಲಿ ,ಇಪ್ಪತ್ತು ದಿವಸಗಳಲ್ಲಿ ಕೇಂದ್ರ ಸರ್ಕಾರದ ಅನುಮತಿ ಕೊಡಿಸುತ್ತೇನೆ ಎಂದು ಶಪಥ ಮಾಡಿದ್ದರು. ಆದರೆ ಕೇಂದ್ರ ಸರ್ಕಾರ ಪ್ರಸ್ತಾವನೆ ರದ್ದುಗೊಳಿರುವುದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ತೀವ್ರ ವಾಗ್ವಾದ ನಡೆಯುವ ಸಾಧ್ಯತೆ ದಟ್ಟವಾಗಿದೆ.
ಕಾನೂನು ಪಾಲನೆಗೆ ಸೂಚನೆ:
ಮೀಸಲು ಅರಣ್ಯ ಪ್ರದೇಶದ ರಕ್ಷಣೆ ಮಾಡುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಖಡಕ್ ಸೂಚನೆ ಕೊಟ್ಟಿದೆ.
೧೯೫೮ ರಿಂದ ೧೯೬೯ ರೊಳಗೆ ಶರಾವತಿ ಜಲವಿದ್ಯುತ್ ಯೋಜನೆಯಡಿ ಸಂತ್ರಸ್ಥಗೊಂಡ ಕುಟುಂಬಗಳಿಗೆ ಪುನರ್ವಸತಿ ಅಡಿಯಲ್ಲಿ ಭೂ ಹಕ್ಕು ನೀಡಲು ೯೧೨೯ ಎಕರೆ ಮೀಸಲು ಅಧಿಸೂಚಿತ ಅರಣ್ಯ ಪ್ರದೇಶವನ್ನು ಡಿನೋಟಿಫಿಕೇಷನ್ ಮಾಡಲು ಅವಕಾಶ ನೀಡುವಂತೆ ಕೋರಿ ೨೦೨೩ ಮಾರ್ಚ್ ೨೩ ರಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ಪರಿಶೀಲಿಸಿ ಮೀಸಲು ಅರಣ್ಯ ಪ್ರದೇಶ ಕುರಿತಂತೆ ಸುಪ್ರೀಂ ಕೋರ್ಟ್ ೨೦೦೦ ನವೆಂಬರ್ ೧೧,ಫೆಬ್ರವರಿ ೯ ರಲ್ಲಿ ನೀಡಿರುವ ತೀರ್ಪಿನ ಅಂಶಗಳನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ತಿರಸ್ಕರಿಸಿದೆ.

ಮರಣ ಶಾಸನ ಬರೆದ ಕೇಂದ್ರ….
ಸಂತ್ರಸ್ತ ಕುಟುಂಬಗಳಿಗೆ ಪುರ್ನವಸತಿ ಕಲ್ಪಿಸುವ ಸದುದ್ದೇಶದಿಂದ ೨೦೧೭ ಅಕ್ಟೋಬರ್ ೧೪ರಂದು ಶಿವಮೊಗ್ಗ ಹೊಸನಗರ, ತೀರ್ಥಹಳ್ಳಿ ತಾಲೂಕು ವ್ಯಾಪ್ತಿಯ ೯,೯೩೪ ಎಕರೆ ೨ ಗುಂಟೆ ಅಧಿಸೂಚಿತ ಮೈಸವಿ ಮೀಸಲು ಅರಣ್ಯ ಪ್ರದೇಶವನ್ನು ೫೬ ಅಧಿಸೂಚನೆಗಳ ಮೂಲಕ ರಾಜ್ಯ ಸರಕಾರ ಡಿನೋಟಿಫಿಕೇಷನ್ ಆದೇಶವನ್ನು ಜಾರಿಗೊಳಿಸಿತು.
ಡಿನೋಟಿಫಿಕೇಷನ್ ಆದೇಶದಲ್ಲಿ ರಾಜ್ಯ ಸರಕಾರ ಅರಣ್ಯ ಸಂರಕ್ಷಣೆ ಕಾಯಿದೆ ನಿಯಮ ಉಲ್ಲಂಘಿಸಿದೆ ಎಂದು ಆಕ್ಷೇಪಿಸಿ ಜನ ಸಂಗ್ರಾಮ ಪರಿಷತ್ ಮುಖಂಡ ಹೊಸನಗರದ ಗಿರೀಶ್ ಆಚಾರ್ ಎಂಬುವವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ೧೯೭೮ರ ಅರಣ್ಯ ಸಂರಕ್ಷಣೆ ಕಾಯಿದೆ ಅನ್ವಯ ಕೇಂದ್ರ ಸರಕಾರದ ಪೂರ್ವಾನುಮತಿ ಪಡೆದಿಲ್ಲ ಎಂದು ಡಿನೋಟಿಫಿಕೇಷನ್ ಆದೇಶವನ್ನು ೨೦೨೧ ಮಾರ್ಚ್ ೪ರಂದು ಹೈಕೋರ್ಟ್ ರದ್ದುಗೊಳಿಸಿತು.ಇದು ಸಂತ್ರಸ್ಥರಿಗೆ ಶಾಕ್ ನೀಡಿತ್ತು.ಶಿವಮೊಗ್ಗದಲ್ಲಿ ಸಂತ್ರಸ್ಥರ ಹೋರಾಟದ ಕಾವು ತೀವ್ರಗೊಂಡಿತು.ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಕಾನೂನು ಸಂಘರ್ಷದ ಮದ್ಯೆಯೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.ಈಗ ರಾಜ್ಯದ ಪ್ರಸ್ತಾವನೆಗೆ ಕೇಂದ್ರ ತಿರಸ್ಕರಿಸುವುದು ಸಂತ್ರಸ್ಥರ ಪಾಲಿಗೆ ಮರಣ ಶಾಸನ ಬರೆದಂತಾಗಿದೆ.


ಡಿನೋಟಿಫಿಕೇಷನ್ ತಡೆ ತಂದಿದ್ದ ರೈತರು.
ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಭೂ ಹಕ್ಕು ನೀಡುವ ಸಂಬಂಧ ಪ್ರಕಟವಾಗಿದ್ದ ೫೬ ಡಿನೋಟಿಫಿಕೇಷನ್ ರದ್ದುಗೊಳಿಸಿ ೨೦೨೩ ಫೆಬ್ರವರಿ ೧೬ರಂದು ಬಿಜೆಪಿ ಸರಕಾರ ಪ್ರಕಟಿಸಿತ್ತು. ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ, ಅಧಿಸೂಚನೆ ರದ್ದತಿ ಆದೇಶ ರದ್ದುಗೊಳಿಸಬೇಕು ಎಂದು ಕೋರಿ ಶ್ರೀಕ್ಷೇತ್ರ ಸಿಗಂದೂರು ಧರ್ಮದರ್ಶಿ ಎಸ್.ರಾಮಪ್ಪ ನೇತೃತ್ವದಲ್ಲಿ ಒಟ್ಟು ೩೦೫ ಸಂತ್ರಸ್ತರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿ ೨೦೨೩ ಏಪ್ರಿಲ್ ೧೯ರಂದು ತಡೆ ನೀಡಿದೆ. ಸಂತ್ರಸ್ತ ಕುಟುಂಬಗಳ ಡಿನೋಟಿಫಿಕೇಷನ್ ವ್ಯಾಪ್ತಿ ಜಮೀನಿಗೆ ಮಾತ್ರ ತಡೆ ಆದೇಶ ಅನ್ವಯಿಸುತ್ತದೆ ಎಂದು ನ್ಯಾಯಪೀಠ ಉಲ್ಲೇಖಿಸಿದೆ. ಇಷ್ಟೆಲ್ಲಾ ಪ್ರಕ್ರಿಯೆ ನಡುವೆ ಕೇಂದ್ರ ಸರಕಾರ ರಾಜ್ಯ ಸರಕಾರದ ಪ್ರಸ್ತಾವನೆ ತಿರಸ್ಕರಿಸಿದೆ.

Ad Widget

Related posts

1802 ಅಡಿ ದಾಟಿದ ಲಿಂಗನಮಕ್ಕಿ, ಶಿವಮೊಗ್ಗ ನಗದಲ್ಲಿ ಪರಿಹಾರ ಕಾರ್ಯ, ಜೋಗದಲ್ಲಿ ಮುಂದುವರಿದ ಜಲವೈಭವ

Malenadu Mirror Desk

ತುಮರಿ ಸಮೀಪ ಮೈಸೂರು ಜಿಲ್ಲೆ ಶೈಕ್ಷಣಿಕ ಪ್ರವಾಸದ ಬಸ್ ಪಲ್ಟಿ, ಹತ್ತು ಮಕ್ಕಳಿಗೆ ಗಾಯ, ನೆರವಿಗೆ ಬಂದು ಮಾನವೀಯತೆ ಮೆರೆದ ಸ್ಥಳೀಯ ನಿವಾಸಿಗಳು

Malenadu Mirror Desk

ಕಂದಾಯ ಗ್ರಾಮ ಘೋಷಣೆಗೆ ಕಾಗೋಡು ತಿಮ್ಮಪ್ಪ ಒತ್ತಾಯ, ಸರಕಾರ ಸ್ಪಂದಿಸದಿದ್ದಲ್ಲಿ ಹೋರಾಟದ ಎಚ್ಚರಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.