ಶಿವಮೊಗ್ಗ: ಈ ಹಿಂದೆ ಜಾರಿಯಲ್ಲಿದ್ದ ಮತಾಂತರ ನಿಷೇಧ ಕಾನೂನನ್ನು ರಾಜ್ಯ ಸರ್ಕಾರ ಹಿಂಪಡೆಯಲು ತೀರ್ಮಾನಿಸಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಶಾಖೆ ವತಿಯಿಂದ ಗೋಪಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಸಭೆಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ್, ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ನಿರ್ಧಾರವನ್ನು ಸರ್ಕಾರ ಕೂಡಲೇ ಕೈ ಬೀಡಬೇಕೆಂದು ಆಗ್ರಹಿಸಿದರು. ಭಾರತವು ಹಿಂದೂ ರಾಷ್ಟ್ರವಾಗಿದ್ದು ಇಲ್ಲಿ ಹಿಂದುಗಳೊಡನೆ ಅನ್ಯಧರ್ಮೀಯರೂ ಸಹ ಸಹಬಾಳ್ವೆ ಮಾಡಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಕರ್ನಾಟಕದಲ್ಲೂ ಸಹ ಹಿಂದೂಗಳೊಡನೆ ಅನ್ಯಧರ್ಮೀಯರೂ ತಮ್ಮ ಧರ್ಮ-ಮತಾಚರಣೆ ಮಾಡಲು ಅವಕಾಶವಿದೆ. ಇದನ್ನು ನಾವು ಒಪ್ಪುತ್ತೇವೆ ಮತ್ತು ಪ್ರಶ್ನಿಸುವುದಿಲ್ಲ. ಆದರೆ ಹಿಂದೂಗಳಿಗೆ ಆಮಿಷ ತೋರಿಸಿ ಅಥವಾ ಹೆದರಿಸಿ ಬಲವಂತವಾಗಿ ಮತಾಂತರಿಸುವುದನ್ನು ಅಥವಾ ಮರುಳು ಮಾಡಿ ಮತಾಂತರಿಸುವುದನ್ನು ನಾವು ಖಂಡಿಸುತ್ತೇವೆ ಎಂದರು.
ಆರ್‌ಎಸ್‌ಎಸ್ ಪ್ರಮುಖ ಪಟ್ಟಾಭಿರಾಮ್, ಶಾಸಕ ಎಸ್.ರುದ್ರೇಗೌಡ, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರ ನಾಯಕ್, ಪ್ರಮುಖರಾದ ಆರ್.ಕೆ.ಸಿದ್ದರಾಮಣ್ಣ, ನಟರಾಜ್ ಭಾಗವತ್, ಗಿರೀಶ್ ಕಾರಂತ್, ಜಗದೀಶ್, ಈ.ವಿಶ್ವಾಸ್, ತಮ್ಡಿಹಳ್ಳಿ ನಾಗರಾಜ್, ಗಿರೀಶ್ ಪಟೇಲ್, ರಾಜೇಶ್ ಗೌಡ, ದೀನದಯಾಳ್, ನಾರಾಯಣ ವರ್ಣೇಕರ್, ಬಿ.ವೈ. ರಂಗನಾಥ್, ಲೋಕೇಶ್ವರ್ ಕಾಳೆ, ಬಳ್ಳೆಕೆರೆ ಸಂತೋಷ್ ಮತ್ತಿರರಿದ್ದರು
ಮತಾಂತರ ಹಾಗೂ ಗೋ ಹತ್ಯೆಯಂತಹ ಕಾಯ್ದೆಗಳನ್ನು ರದ್ದು ಮಾಡಲು ಸರ್ಕಾರ ಮುಂದಾಗಿರುವುದು ದೇಶಕ್ಕೆ ಮಾಡಿದ ಅಪಮಾನವಾಗಿದೆ. ಭಾರತವು ಹಿಂದೂ ರಾಷ್ಟ್ರವಾಗಿದೆ ಮತ್ತು ಕರ್ನಾಟಕವು ಭಾರತದ್ದೇ ಒಂದು ಭಾಗವಾಗಿದೆ. ಇಲ್ಲಿನ ಹಿಂದೂಗಳನ್ನು ಮತಾಂತರದಿಂದ ರಕ್ಷಿಸಿ ನಮ್ಮ ಧರ್ಮವನ್ನು ಕಾಪಾಡುವುದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯವಾಗಿದೆ.
ಕೆ.ಎಸ್.ಈಶ್ವರಪ್ಪ , ಮಾಜಿ ಉಪಮುಖ್ಯಮಂತ್ರಿ
ಕಾಂಗ್ರೆಸ್ ಸರ್ಕಾರಕ್ಕೆ ಅನ್ಯಧರ್ಮೀಯರಲ್ಲದೆ ಅತಿ ಸಂಖ್ಯೆಯಲ್ಲಿ ಹಿಂದೂಗಳೂ ಸಹ ಮತ ಹಾಕಿದ್ದು, ಅವರ ಮತದಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೇ ಹೊರತು ಕೇವಲ ಅಲ್ಪಸಂಖ್ಯಾತರಿಂದಲ್ಲ. ಇದು ಕಾಂಗ್ರೆಸ್ ತನಗೆ ಮತ ನೀಡಿದ ಸಮಸ್ತ ಹಿಂದೂ ಸಮಾಜಕ್ಕೆ ದ್ರೋಹ ಬಗೆದಂತಾಗಿದೆ. ಕರ್ನಾಟಕದ ಹಿಂದುಗಳು ಇದನ್ನು ಖಂಡಿಸುವುದರೊಂದಿಗೆ ಮಂತ್ರಿಮಂಡಲ ತೆಗೆದುಕೊಂಡಿರುವ ನಿರ್ಧಾರವನ್ನು ಕೂಡಲೇ ಹಿಂತೆದುಕೊಳ್ಳಬೇಕು
ಎಸ್.ಎನ್.ಚನಬಸಪ್ಪ , ಶಾಸಕ