ಶಿವಮೊಗ್ಗ,ಜೂ: ರಾಜ್ಯಸರಕಾರ ಹೆಚ್. ಕಾಂತರಾಜ್ ಆಯೋಗದ ವರದಿ ಜಾರಿಗೆ ತರುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಿಂದುಳಿದ ಜನಜಾಗೃತಿ ವೇದಿಕೆ ಶಿವಮೊಗ್ಗ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
೨೦೧೪ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಹೆಚ್. ಕಾಂತರಾಜ್ ನೇತೃತ್ವದಲ್ಲಿ ನೇಮಿಸಿದ್ದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ೫ ವರ್ಷಗಳ ಕಾಲ ದೀರ್ಘ ಅಧ್ಯಯನ ಕೈಗೊಂಡು ಹಿಂದುಳಿದ ಜಾತಿ ವರ್ಗಗಳ ಅಭಿವೃದ್ಧಿಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಅಂಕಿ-ಅಂಶ ಕಲೆಹಾಕಿ ಜಾತಿ ಸಮೀಕ್ಷೆ ನಡೆಸಿ ವೈಜ್ಞಾನಿಕ ವರದಿ ರೂಪಿಸಿ ೨೦೧೯ರಲ್ಲಿ ರಾಜ್ಯಸರ್ಕಾರಕ್ಕೆ ಸಲ್ಲಿಸಿತು. ಅನಂತರ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಸದರಿ ವರದಿಯನ್ನು ಜಾರಿಗೊಳಿಸದೆ ನಿರ್ಲಕ್ಷಿಸಿದ್ದು ವಿಷಾದನೀಯವಾಗಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಹಿಂದುಳಿದ ಜಾತಿ ವರ್ಗಗಳ ಮೀಸಲಾತಿಗೆ ಸಂಬಂಧಿಸಿದಂತೆ ಅಂಕಿ-ಅಂಶಗಳು ಅತ್ಯವಶ್ಯಕವಾಗಿದೆ. ಅಂಕಿ-ಅಂಶ ಕೊರತೆಯಿಂದಾಗಿ ಸುಪ್ರೀಂ ಕೋರ್ಟ್ ಆಯೋಗಗಳು ನೀಡಿದ ವರದಿಯನ್ನು ಪರಿಗಣಿಸಿರಲಿಲ್ಲ. ಕರ್ನಾಟಕದಲ್ಲಿ ನೇಮಕವಾದ ಕಾಂತರಾಜ್ ಆಯೋಗವು ಕೂಲಂಕಶವಾಗಿ ಸಮೀಕ್ಷೆ ನಡೆಸಿ ಅಂಕಿ-ಅಂಶಗಳನ್ನು ನೀಡಿದೆ. ಈ ವರದಿಯನ್ನು ಜಾರಿಮಾಡದಿರುವುದು ಹಿಂದುಳಿದ ಜಾತಿ ವರ್ಗಗಳಿಗೆ ಮಾಡಿದ ದ್ರೋಹವಾಗಿದೆ. ಹಿಂದುಳಿದ ಜಾತಿ ವರ್ಗಗಳ ಶೈಕ್ಷಣಿಕ ಹಾಗೂ ಆರ್ಥಿಕ ಮತ್ತು ರಾಜಕೀಯ ಅಧಿಕಾರ ಹಂಚಿಕೆಗೆ ಈ ವರದಿ ಜಾರಿಗೆ ತರುವುದು ಅತ್ಯವಶ್ಯಕವಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ತಡಮಾಡದೆ ಕಾಂತರಾಜ್ ಆಯೋಗದ ವರದಿಯನ್ನು ಅಂಗೀಕರಿಸಿ ಸಮಗ್ರ ವರದಿಯನ್ನು ಚಾಚೂ ತಪ್ಪದೆ ಅನುಷ್ಠಾನಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹಿಂದುಳಿದ ಜನಜಾಗೃತಿ ವೇದಿಕೆ ಶಿವಮೊಗ್ಗ ಹಕ್ಕೊತ್ತಾಯ ಮಾಡಿದೆ. ವೇದಿಕೆಯ ಗೌರವಾಧ್ಯಕ್ಷರಾದ ತೀ.ನ. ಶ್ರೀನಿವಾಸ್, ಹಾಲೇಶಪ್ಪ, ಚನ್ನವೀರಪ್ಪ, ಮನೋಹರ್ ಹಾಗೂ ವೇದಿಕೆಯ ಪ್ರಮುಖರಿದ್ದರು.