Malenadu Mitra
ರಾಜ್ಯಶಿವಮೊಗ್ಗ

ಸುಖ ಭೋಗದ ಬೆನ್ನು ಹತ್ತಿದರೆ ಅನಾರೋಗ್ಯ ಖಂಡಿತ, ಯೋಗ ದಿನಾಚರಣೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಎಚ್ಚರಿಕೆ

ಶಿವಮೊಗ್ಗ,ಜೂ.೨೧: ಸುಖ, ಭೋಗ, ಎಲ್ಲವೂ ದೇಹಕ್ಕೆ ಅನಾರೋಗ್ಯ ತರುತ್ತದೆ. ಮೆದುಳಿಗೆ ಯೋಗಾಭ್ಯಾಸದ ಅವಶ್ಯಕತೆ ಇದೆ ಈ ಕಾರಣದಿಂದ ಧರ್ಮಸ್ಥಳ ಸಂಸ್ಥೆ ಯೋಗ ಗುರುಗಳನ್ನು ತಯಾರು ಮಾಡುತ್ತಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು. ಪಿಇಎಸ್ ಪ್ರೇರಣಾ ಸಭಾಂಗಣದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಮತ್ತು ಯೋಗ ಕೇಂದ್ರ, ಶಾಂತಿವನ ಟ್ರಸ್ಟ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಶಿವಮೊಗ್ಗ ಇದರ ವತಿಯಿಂದ ನಡೆದ ೯ನೇ ಅಂತರಾಷ್ಟ್ರೀಯ ಯೋಗದಿನಾಚರಣೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಭಾರತವನ್ನು ಹಿಂದೆ ಬಡ ರಾಷ್ಟ್ರ ಎನ್ನುತ್ತಿದ್ದರು. ಆದರೆ ಈಗ ವಿಶ್ವದಲ್ಲೇ ದೊಡ್ಡ ರಾಷ್ಟ್ರ ಎಂದೆನಿಸಿಕೊಂಡಿದೆ. ಬೇರೆ ದೇಶಗಳು ಆಧುನಿಕ ಸಾಮಗ್ರಿಗಳನ್ನು ನೀಡಿದರೆ ನಮ್ಮ ದೇಶದಿಂದ ಆರೋಗ್ಯ ಮತ್ತು ನೆಮ್ಮದಿ ಕೊಡುವ ಯೋಗವನ್ನೇ ವಿಶ್ವಕ್ಕೆ ಕೊಡುಗೆಯಾಗಿ ನೀಡಿದ್ದೇವೆ. ಪ್ರಾಣಿ ಪಕ್ಷಿಗಳು ಮರಿ ಹಾಕಿದ ತಕ್ಷಣ ಅದಕ್ಕೆ ತನ್ನಿಂತಾನೆ ಶಕ್ತಿ ಬರುತ್ತದೆ . ಆದರೆ ಮನುಷ್ಯ ಹಾಗಲ್ಲ. ಅವನಿಗೆ ಪೋಷಕರು ಆರೈಕೆ ಮಾಡಿ ರಕ್ಷಿಸಬೇಕು. ಕನಿಷ್ಠ ಒಂದು ವರ್ಷದ ನಂತರ ಆತ ನಡೆಯಲು ಪ್ರಾರಂಭಿಸುತ್ತಾನೆ. ತಾಯಿ-ತಂದೆ ಆಹಾರ ಕೊಡಬಹುದು. ಆದರೆ ಆರೋಗ್ಯ ಕೊಡಲಾಗುವುದಿಲ್ಲ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೆಂದ್ರ ಸ್ವಾಮೀಜಿ ಮಾತನಾಡಿ, ದೇಹವೆಂಬ ಬಂಡಿ ನಡೆಸುವವರ ಮನಸ್ಥಿತಿ ಚೆನ್ನಾಗಿರಬೇಕು. ನಿರ್ದಿಷ್ಟವಾದ ಗುರಿ ತಲುಪಲು ಏಕೈಕ ಮಹಾ ಮಾರ್ಗವೆಂದರೆ ಯೋಗ ಮಾರ್ಗ ಎಂದರು. ಪ್ರತಿಯೊಬ್ಬನ ಮನಸ್ಸು ಮತ್ತು ಬದುಕು ಇತ್ತೀಚೆಗೆ ಅತಂತ್ರದ ಕಡೆ ಸಾಗುತ್ತಿದೆ. ಸೂಕ್ತ ಗುರಿ ಮತ್ತು ದಾರಿಯಿಲ್ಲದೆ ಮನುಷ್ಯ ದುರಂತದ ಕಡೆ ಸಾಗುತ್ತಿದ್ದಾನೆ. ದಾರಿಹೋಕ ಗುರಿ ಕಾಣದಿದ್ದರೆ ಗುರಿ ಮುಟ್ಟುವುದಿಲ್ಲ. ನಮ್ಮ ಹಿರಿಯರು ಆರೋಗ್ಯಕ್ಕಾಗಿ ಅನೇಕ ಮಾರ್ಗಗಳನ್ನು ಸೂಚಿಸಿದ್ದರು. ತಮ್ಮ ಕೆಲಸವನ್ನು ತಾವೇ ಮಾಡುತ್ತಿದ್ದರು. ಈಗ ಸುಖದ ಬದುಕಿನ ಹಿಂದೆ ಹೋಗಿ ಅಂಗಾಂಗಗಳಿಗೆ ವ್ಯಾಯಾಮವಿಲ್ಲದೆ ಅನಾರೋಗ್ಯಕ್ಕೆ ಗುರಿಯಾಗುತ್ತಿದ್ದಾರೆ. ಇದಕ್ಕೆಲ್ಲಾ ಸಮಯೋಚಿತ ಮಾರ್ಗವೆಂದರೆ ಯೋಗ ಮಾರ್ಗ ಎಂದರು.

ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಎಸ್.ಎನ್. ಚನ್ನಬಸಪ್ಪ, ಡಾ. ಪ್ರಶಾಂತ್ ಡಾ. ಶಿವಪ್ರಸಾದ್ ಶೆಟ್ಟಿ, ನಾಗರಾಜ್ ಮತ್ತಿತರರಿದ್ದರು. ಸಾಗರದ ಕು. ಸಂಧ್ಯಾ ಎಂ.ಎಸ್. ಇವರಿಗೆ ಯೋಗರತ್ನ ಪ್ರಶಸ್ತಿ ನೀಡಲಾಯಿತು.


ವಿಶ್ವದ ಗಮನ ಸೆಳೆದ ಪ್ರಧಾನಿ
ಎಲ್ಲರೂ ಪ್ರತಿನಿತ್ಯ ಅರ್ಧಗಂಟೆ ಎಲ್ಲರೂ ಕೂಡ ಯೋಗಾಸನ ಮಾಡಬೇಕು. ಇದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವದ ಅನೇಕರ ಗಣ್ಯರ ಸಮಕ್ಷಮ ಅಮೆರಿಕ ದೇಶದಲ್ಲಿ ಯೋಗ ಅಭ್ಯಾಸ ಮಾಡುತ್ತಿದ್ದಾರೆ. ಯೋಗ ಮಾಡುವ ಮೂಲಕ ಮೋದಿ ವಿಶ್ವದ ಗಮನ ಸೆಳೆದಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ಪ್ರಧಾನಿ ಮೋದಿಯವರು ಯೋಗದ ಮೂಲಕ ಪ್ರೇರಣೆ ನೀಡಿದ್ದಾರೆ. ಕೇವಲ ಭಾರತವಲ್ಲದೆ ಇಡೀ ವಿಶ್ವದಲ್ಲಿ ಯೋಗಕ್ಕೆ ಆದ್ಯತೆ ನೀಡಲಾಗುತ್ತಿದೆ. ಪ್ರಧಾನಿ ಮೋದಿಯವರು ಇದರ ರೂವಾರಿಯಾಗಿದ್ದು ಈಗ ಭಾರತದ ಯೋಗ ವಿಶ್ವದ ತುಂಬಾ ಹರಡಿದೆ ಎಂದರು.

Ad Widget

Related posts

ಶಿವಮೊಗ್ಗ ಪೊಲೀಸ್ ಕಮಿಷನರೇಟ್ ಆಗಲಿದೆಯೆ ?

Malenadu Mirror Desk

ಜು.೨೧ ರಂದು ನರಗುಂದದಲ್ಲಿ ಬೃಹತ್ ರೈತ ಸಮಾವೇಶ

Malenadu Mirror Desk

ಅಪ್ಪಾಜಿ ಗೌಡರಿಲ್ಲದ ಭದ್ರಾವತಿ ನಗರಸಭೆ ಚುನಾವಣೆ ಹೇಗಿದೆ ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.