ಶಿವಮೊಗ್ಗ:ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳಿಗೆ ಮಾನವ ಸಂಪನ್ಮೂಲವನ್ನು ಸರಬರಾಜು ಮಾಡಲು ಅನುಮತಿ ಪಡೆದಿರುವ ಗುತ್ತಿಗೆದಾರ ಸಂಸ್ಥೆಗಳು ಕೆಲಸಕ್ಕಾಗಿ ನೇಮಕವಾಗುವ ಅಭ್ಯರ್ಥಿಗಳಿಂದ ಭಾರೀ ಪ್ರಮಾಣದ ಹಣ ವಸೂಲು ಮಾಡುತ್ತಿರುವ ಬಗ್ಗೆ ಹಾಗೂ ಅವರಿಗೆ ನೀಡಲಾಗುತ್ತಿರುವ ಸಮವಸ್ತ್ರಗಳ ಬಗ್ಗೆ ಸಾರ್ವಜನಿಕ ವಲಯದಿಂದ ಭಾರೀ ಪ್ರಮಾಣ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಅಂತಹ ಸಂಸ್ಥೆಗಳನ್ನು ಪರಿಶೀಲಿಸಿ, ತಪ್ಪಿದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಸೂಚಿಸಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆಲವು ಸಂಸ್ಥೆಗಳು ಪ್ರತಿ ವ್ಯಕ್ತಿಯಿಂದ ರೂ.೨,೦೦೦, ಸಮವಸ್ತ್ರದ ಬಾಬ್ತು ರೂ.೪,೦೦೦ ಹಾಗೂ ಸಿಮ್ಸ್‌ನಲ್ಲಿ ನೇಮಕವಾಗುವ ವ್ಯಕ್ತಿ ಲಕ್ಷಾಂತರ ರೂ.ಗಳನ್ನು ಪಡೆದಿರುವ ಬಗ್ಗೆ ದೂರುಗಳಿದ್ದು, ಅವುಗಳಿಗೆ ಸೂಕ್ತ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಮರಳು ಕ್ವಾರಿಗಳಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಅವುಗಳನ್ನು ನಿಯಂತ್ರಿಸುವ ಕಾರ್ಯ ಆಗಬೇಕಾಗಿದೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಹೊಂದಿದ್ದಾರೆ ಎಂದು ಸಮಿತಿ ಸದಸ್ಯ ಜಗದೀಶ್ ಹಸೂಡಿ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿ, ಮರಳು ಕ್ವಾರಿಗಳ ನಿರ್ವಾಹಕರು ಪ್ರತಿ ಮಾಹೆ ಕ್ವಾರಿಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳ ಚಿತ್ರಿತ ಮಾಹಿತಿಯನ್ನು ಪಡೆದುಕೊಳ್ಳಬೇಕು. ಕಳೆದ ಆರು ತಿಂಗಳುಗಳ ಸಿಸಿ. ಕ್ಯಾಮರಾಗಳ ಚಿತ್ರಿತ ಮಾಹಿತಿ ಒದಗಿಸದಿರುವ ಕ್ವಾರಿಗಳ ಗುತ್ತಿಗೆದಾರರಿಗೆ ನೋಟೀಸ್ ಜಾರಿಗೊಳಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳಿಗೆ ಸೂಚಿಸಿದರು.
ಮಳೆಯ ಕೊರತೆಯಿಂದ ಶರಾವತಿ ಮತ್ತು ಭದ್ರಾ ಜಲಾಶಯಗಳ ಹಿನ್ನೀರಿನಲ್ಲಿ ಮೀನುಮರಿಗಳನ್ನು ಅವ್ಯಾಹತವಾಗಿ ಹಿಡಿಯಲಾಗುತ್ತಿದ್ದು, ಮೀನುಗಳ ಸಂತತಿ ನಾಶಗೊಳ್ಳುವ ಸಂಭವವಿದೆ. ಮೀನುಮರಿಗಳ ಸಂತಾನೋತ್ಪತ್ತಿಯ ಕಾಲ ಇದಾಗಿರುವುದರಿಂದ ಮೀನು ಹಿಡಿಯದಂತೆ ಕ್ರಮ ವಹಿಸಲು ಮೀನುಗಾರಿಕೆ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಕುವೆಂಪು ವಿವಿ ಮುಂಭಾಗದಲ್ಲಿ ಮದ್ಯದಂಗಡಿ ಆರಂಭಗೊಂಡಿದ್ದು, ಇಲ್ಲಿನ ಶೈಕ್ಷಣಿಕ ವಾತಾವರಣ ಕಲುಷಿತಗೊಳ್ಳುತ್ತಿರುವ ಬಗ್ಗೆ ಆತಂಕವಿದೆ. ಈ ಬಗ್ಗೆ ತಕ್ಷಣದ ಕ್ರಮ ವಹಿಸುವಂತೆ ಸಮಿತಿ ಸದಸ್ಯ ರಾಜಕುಮಾರ್ ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದಾಗ, ಅಬಕಾರಿ ಇನ್ಸ್‌ಪೆಕ್ಟರ್‌ರವರು ಸ್ಥಳಕ್ಕೆ ಭೇಟಿ ನೀಡಿ, ವಾಸ್ತವವನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ದಾಖಲಿಸಿ, ಕಾನೂನೂ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ನಗರದ ವಿದ್ಯಾನಗರದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಕಬಳಿಸಲು ಯತ್ನಿಸುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಸಂಬಂಧಿಸಿದ ಪಾಲಿಕೆ ಅಧಿಕಾರಿಗಳು ಜುಲೈ ೧೫ರೊಳಗಾಗಿ ವಾಸ್ತವ ಗಮನಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಅಂತಹ ಅಧಿಕಾರಿಗಳ ಮೇಲೆ ನಿರ್ಧಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದರು.
ಶಿವಮೊಗ್ಗ ತಾಲೂಕಿನ ಕಲ್ಲಗಂಗೂರು ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಕೋಳಿ ಫಾರಂಗಳು ನಿರ್ಮಾಣವಾಗಿದ್ದು, ಇಲ್ಲಿನ ಜನಸಮುದಾಯಕ್ಕೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿರುವ ಬಗ್ಗೆ ಆಕ್ಷೇಪವಿದೆ. ಈ ಸಂಬಂಧ ಆರೋಗ್ಯ ಇಲಾಖೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನಡೆದಿರಬಹುದಾದ ದಲಿತರ ಮೇಲಿನ ಪ್ರಕರಣಗಳು, ಸೌಲಭ್ಯಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್, ಸಮಿತಿ ಸದಸ್ಯರಾದ ನಾಗರಾಜ್, ಹಸೂಡಿ ಜಗದೀಶ್, ರಾಜ್‌ಕುಮಾರ್, ಬಸವರಾಜ ಹಸ್ವಿ, ಏಳುಕೋಟಿ, ರಾಮಚಂದ್ರಪ್ಪ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.