ಶಿವಮೊಗ್ಗ ನಗರದಲ್ಲಿ ತುಂಗಾ ನದಿ ತುಂಬಿ ಹರಿಯುತ್ತಿದೆ. ಇದರ ನಡುವೆ ತುಂಗಾ ನದಿಯನ್ನು ನೋಡಲು ಜನರ ದಂಡು ಹೊಸ ಸೇತುವೆ ಹಾಗೂ ಹಳೆ ಸೇತುವೆಗಳ ಬಳಿಗೆ ಬರುತ್ತಿದೆ. ಮಂಗಳವಾರ ತುಂಗಾ ನದಿಯ ಹಳೆಯ ಸೇತುವೆಯಿಂದ ಯುವಕನೊಬ್ಬ ಹೊಳೆಗೆ ಹಾರಿದ್ದಾನೆ. ಈ ಘಟನೆ ಕೆಲಕಾಲ ಆತಂಕ ಮೂಡಿಸಿತ್ತಾದರೂ ಬಳಿಕ ಯುವಕನ ಹುಚ್ಚಾಟಕ್ಕೆ ಆಕ್ರೋಶ ವ್ಯಕ್ತವಾಗಿದೆ
ತುಂಬಿದ ತುಂಗೆಯಲ್ಲಿ ಈಜುವುದು ಅಪಾಯಕಾರಿ ಕೆಲಸವೇ ಸರಿ. ಹೊಳೆಬಸ್ ನಿಲ್ದಾಣ ಸಮೀಪದಲ್ಲಿ ಯುವಕನೊಬ್ಬ ಸೇತುವೆಯ ಮೇಲಿನಿಂದ ತುಂಬಿದ ಹೊಳೆಗೆ ಹಾರಿದ್ದಾನೆ. ಯಾರೋ ಈತ, ಸಾಯೋಕೆ ಹಾರಿದ್ದಾನಾ ಅಂತಾ ಜನರು ಸೇತುವೆಯಿಂದ ಇಣುಕಿ ನೋಡುತ್ತಿರುವಾಗಲೇ, ನದಿಗೆ ಹಾರಿದ್ದ ಯುವಕ ಅತ್ತ ಲೀಲಾಜಾಲವಾಗಿ ಈಜಿಕೊಂಡು ಸುಮಾರು ದೂರದಲ್ಲಿ ನದಿಯ ದಡದಿಂದ ಮೇಲಕ್ಕೆ ಬಂದಿದ್ದಾನೆ.
ಈ ದೃಶ್ಯವನ್ನು ನೋಡಿದವರು ಅಚ್ಚರಿಯ ವ್ಯಕ್ತಪಡಿಸುವುದರ ಜೊತೆಗೆ, ಇದೇನು ಹುಚ್ಚಾಟ ಎಂದು ಮಾತನಾಡಿಕೊಂಡರಷ್ಟೆ ಅಲ್ಲದೆ ಹತ್ತಿರ ಕೋಟೆ ಪೊಲೀಸ್ ಸ್ಟೇಷನ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಇನ್ನೂ ಪೊಲೀಸರ ವಿಚಾರಣೆ ವೇಳೆ ನದಿಗೆ ಹಾರಿದ ಯುವಕ ಹೆಸರು ಗಂಗಪ್ಪ ಅಲಿಯಾಸ್ ಅಂಗೂರಿ ಎಂದು ಗೊತ್ತಾಗಿದೆ. ಈ ಯುವಕ ಈಜು ಬಲ್ಲವನಾಗಿದ್ದು, ವಿಡಿಯೋ ಮಾಡುವ ಸಲುವಾಗಿ ನದಿಗೆ ಹಾರಿರುವ ಬಗ್ಗೆ ಮಾಹಿತಿಯಿದೆ.
ಸದ್ಯ ಯುವಕ ನದಿಗೆ ಹಾರುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಯುವಕನ ನಡೆ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ.