ಸಾಗರ,ಆ.೨೮: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಮಕ್ಕಳು ಭಾಗವಹಿಸುವ ಮೂಲಕ ತಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ತಾಲೂಕು ಉಳ್ಳೂರು ಸರಕಾರಿ ಪ್ರೌಢಶಾಲೆಯ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಆನಂದಪುರ ವಲಯ ಮಟ್ಟದ ಕ್ರೀಡಾಕೂಟವನ್ನು ಸೋಮವಾರ ಕ್ರೀಡಾದ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡೆಯಿಂದ ಮಕ್ಕಳು ಆರೋಗ್ಯ ಹಾಗೂ ಮಾನಸಿಕವಾಗಿ ಸದೃಢವಾಗುತ್ತಾರೆ. ಶಾಲಾ ಹಂತದಲ್ಲಿಯೇ ಕ್ರೀಡೆಗೆ ಸೂಕ್ತತರಬೇತಿ ಲಭಿಸಿದರೆ ಮಕ್ಕಳ ರಾಜ್ಯ ಹಾಗೂ ದೇಶ ಮಟ್ಟಕ್ಕೆ ಬೆಳೆಯಬಹುದು. ಮಲೆನಾಡಿನಲ್ಲಿ ಅನೇಕ ಪ್ರತಿಭೆಗಳಿದ್ದು, ಅವುಗಳಿಗೆ ಪ್ರೋತ್ಸಾಹ ಅಗತ್ಯವಾಗಿ ಬೇಕಾಗಿದೆ. ಶಿಕ್ಷಕರು ಈ ನಿಟ್ಟಿನಲ್ಲಿ ಶ್ರಮಿಸಬೇಕು.ಮಕ್ಕಳು ಕ್ರೀಡಾಸ್ಫೂರ್ತಿಯಿಂದ ಆಟದಲ್ಲಿ ಭಾಗಿಯಾಗಬೇಕು ಎಂದು ಶಾಸಕರು ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ವಹಿಸಿದ್ದರು. ಸಮನ್ವಯಾಧಿಕಾರಿ ಡಾ.ಅನ್ನಪೂರ್ಣ ಕ್ರೀಡಾಜ್ಯೋತಿ ಸ್ಥಾಪಿಸಿದರು. ಸಂಯೋಜಕ ಉಮೇಶ್,ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರು, ಸಹಶಿಕ್ಷಕರ ಸಂಘದ ಅಧ್ಯಕ್ಷರು, ಖಾಸಗಿ ಅನುದಾನಿತ ಶಾಲಾ ಶಿಕ್ಷಕರ ಸಂಘದ ಹಾಗೂ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.