Malenadu Mitra
ರಾಜ್ಯ ಶಿವಮೊಗ್ಗ

ಸರಕಾರದ ಸೌಲಭ್ಯ ಸಾಮಾನ್ಯ ಜನರಿಗೂ ತಲುಪಲಿ: ಸಚಿವ ಮಧುಬಂಗಾರಪ್ಪ,ಜನತಾದರ್ಶನದಲ್ಲಿ ಜಿಲ್ಲೆಯ ಜನರ ಸಮಸ್ಯೆಗಳ ಅನಾವರಣ, ಸರಕಾರಿ ಬಸ್, ಹಕ್ಕುಪತ್ರ, ಗೃಹಲಕ್ಷ್ಮಿಗೇ ಹೆಚ್ಚಿನ ಮನವಿ

ಶಿವಮೊಗ್ಗ,ಸೆ.೨೫ : ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯಗಳನ್ನು ಸುಲಭ, ಸರಳವಾಗಿ ಒದಗಿಸುವ ಹಿನ್ನೆಲೆಯಲ್ಲಿ ಜನಸ್ನೇಹಿ ಆಡಳಿತವನ್ನು ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಜನತಾದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಪ್ರತಿ ತಿಂಗಳು ಜಿಲ್ಲೆಯ ತಾಲೂಕು ಕೇಂದ್ರ ಒಂದರಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಆಯೋಜಿಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಸ್ಥಳೀಯವಾಗಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ಉಳಿದ ಅರ್ಜಿಗಳನ್ನು ನಿಯಮಾನುಸಾರ ಇಲಾಖೆಗಳ ಅಧಿಕಾರಿಗಳ ಮೂಲಕ ವಿಲೇವಾರಿಗೊಳಿಸಲು ಸಮಯ ಅವಕಾಶ ನೀಡಲಾಗುವುದು. ಇದರಿಂದಾಗಿ ಸರ್ಕಾರಕ್ಕೆ ಆಡಳಿತದಲ್ಲಿ ಹಿಡಿತ ಸಿಗಲಿದೆ ಅಲ್ಲದೆ ವ್ಯವಸ್ಥೆ ತಪ್ಪು ದಾರಿಗೆ ಸಾಗದಂತೆ ಗಮನಿಸಬಹುದಾಗಿದೆ ಎಂದರು.
ಜನತಾದರ್ಶನ ಕಾರ್ಯಕ್ರಮದಿಂದಾಗಿ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ದೊರೆಯಲಿದೆ. ಜನರ ಮನವಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಲಾಗುವುದು. ಸಾರ್ವಜನಿಕರು ತಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಅವರು ಮನವಿ ಮಾಡಿದರು.

ಇಲ್ಲಿ ಸ್ವೀಕೃತವಾಗುವ ಕೆಲವು ಅರ್ಜಿಗಳು ನಿಯಮಾನುಸಾರ ಇತ್ಯರ್ಥಗೊಂಡರೆ, ಕಾನೂನಿನ ತೊಡಕಿನಿಂದ ಇನ್ನೂ ಕೆಲವು ಅರ್ಜಿಗಳು ವಿಲೇಗೊಳ್ಳದೇ ಹೋಗಬಹುದು. ಅವುಗಳನ್ನು ಗುರುತಿಸಿ, ಕಾನೂನು ತೊಡಕನ್ನು ನಿವಾರಿಸಿ, ಅಗತ್ಯವೆಂದಾದಲ್ಲಿ ಅವುಗಳಿಗೆ ತಜ್ಞರ ಸಲಹೆ ಪಡೆದು, ಸದನದಲ್ಲಿ ಚರ್ಚಿಸಿ, ಕಾನೂನನ್ನು ರೂಪಿಸಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದರು.

ವಿಕಲಚೇತನರು ಮಹಿಳೆಯರು ಗುಂಪಾಗಿ ಹಾಗೂ ವೈಯಕ್ತಿಕವಾಗಿ ಅರ್ಜಿಗಳನ್ನು ಸ್ವೀಕರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಜನತಾದರ್ಶನದಲ್ಲಿ ಪಡೆದ ಅರ್ಜಿಗಳನ್ನು ಐಪಿಜಿಆರ್‌ಎಸ್ ತಂತ್ರಾಂಶದ ಮೂಲಕ ದಾಖಲಿಸಿಕೊಂಡು ತ್ವರಿತ ವಿಲೇವಾರಿಗೆ ಹಾಗೂ ತಕ್ಷಣದಲ್ಲಿ ವಿಲೇವಾರಿ ಮಾಡಲು ಕ್ರಮ ವಹಿಸಲಾಗಿದೆ

ಡಾ.ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, ಅರಣ್ಯಾಧಿಕಾರಿ ಶಿವಶಂಕರ್ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಸೆ.೨೫ ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕರ ಕುಂದು-ಕೊರತೆ ಆಲಿಸುವ ಪ್ರಥಮ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಮ್ಮ ಸಮಸ್ಯೆಗೆ ಪರಿಹಾರ ಕಾಣಲು ಸಾರ್ವಜನಿಕರು ಮುಖ್ಯಮಂತ್ರಿ, ಸಚಿವರ ಭೇಟಿಗೆ ಬೆಂಗಳೂರು ಹೋಗುವುದನ್ನು ತಪ್ಪಿಸಿ ಜಿಲ್ಲಾ ಹಂತದಲ್ಲಿಯೇ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಿದ್ದು, ಸಚಿವ ಮಧು ಎಸ್. ಬಂಗಾರಪ್ಪ ಅವರು ಜಿಲ್ಲೆಯ ಜನರ ಸಮಸ್ಯೆ ಆಲಿಸಿ, ಅವರ ಅಹವಾಲುಗಳನ್ನು ಸ್ವೀಕರಿಸಿದ ನಂತರ ಕೆಲವು ಅರ್ಜಿಗಲಿಗೆ ಸ್ಥಳೀಯವಾಗಿ ಹಾಗೂ ಇನ್ನೂ ಕೆಲವು ಅರ್ಜಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಪಂಚ ಗ್ಯಾರಂಟಿಯಲ್ಲಿ ೪ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿರುವ ರಾಜ್ಯ ಸರ್ಕಾರ, ಇದೀಗ ಜನರ ಬಳಿಗೆ ಧಾವಿಸಿ ಅವರ ದೂರು, ದುಮ್ಮಾನುಗಳಿಗೆ ಕಿವಿಯಾಗುವತ್ತ ಮಹತ್ವದ ಹೆಜ್ಜೆ ಇಟ್ಟಿದೆ. “ಜನತಾ ದರ್ಶನ”ದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ತಮ್ಮ ಅಹವಾಲುಗಳೊಂದಿಗೆ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ಜನರು ಸಚಿವರಿಗೆ ಮನವಿ ಸಲ್ಲಿಸಿದರು.

ಮನವಿ ನೀಡಲು ಬಂದವರಿಗಾಗಿ ಸೂಕ್ತ ಆಸನ, ಕುಡಿಯುವ ನೀರು, ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ನೆರಳಿಗಾಗಿ ಟೆಂಟ್, ವಾಹನಗಳ ವ್ಯವಸ್ಥಿತ ನಿರ್ವಹಣೆಗಾಗಿ ಪಾಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾರ್ವಜನಿಕರಿಗೆ ಸರ್ಕಾರದ ವಿವಿಧ ಜನಪರ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಆಹಾರ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ತೋಟಗಾರಿಕೆ, ಕಾರ್ಮಿಕ, ಕಂದಾಯ ಹೀಗೆ ಪ್ರಮುಖ ೧೫ಕ್ಕೂ ಹೆಚ್ಚು ಇಲಾಖೆಯ ಮಳಿಗೆಗಳನ್ನು ಹಾಕಲಾಗಿತ್ತು.

ಬಗರ್ ಹುಕುಂ ಹಕ್ಕುಪತ್ರ, ಖಾತೆ ಪೋಡಿ, ಬೀದಿಬದಿಯ ವ್ಯಾಪಾರಕ್ಕೆ ಸಾಲಸೌಲಭ್ಯ, ಪಡಿತರ ಚೀಟಿ ತಿದ್ದುಪಡಿ, ಆಧಾರ್, ಕೆ.ವೈ.ಸಿ., ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಸಾರಿಗೆ, ಹಾಸ್ಟೆಲ್ ಸೇರಿದಂತೆ ಇನ್ನಿತರ ಯೋಜನೆಗಳ ಸಮಸ್ಯೆಗಳ ಕುರಿತು ಅರ್ಜಿಗಳು ಸಲ್ಲಿಕೆಯಾದವು.

ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ-ಸಿಬ್ಬಂದಿಗಳು ಸ್ಥಳದಲ್ಲಿ ಇದ್ದು, ಕುಂದುಕೊರತೆ ಅರ್ಜಿ ಸ್ವೀಕರಿಸಿದರು. ಅದಕ್ಕಾಗಿ ಸಭಾಂಗಣದ ಆವರಣದಲ್ಲಿ ೧೦-೧೫ ಕೌಂಟರ್‌ಗಳನ್ನು ತೆರೆಯಲಾಗಿತ್ತು.

ಜನರೊಂದಿಗೆ ಇದ್ದಾಗ ಮಾತ್ರ ಸಮಸ್ಯೆಯ ಅರಿವು: ಮಧುಬಂಗಾರಪ್ಪ
ಶಿವಮೊಗ್ಗ :- ಜನರ ಸಮಸ್ಯೆ ಅರಿತಾಗ ಮಾತ್ರ ನಮಗೆ ಗೊತ್ತಾಗುತ್ತದೆ. ಅಹವಾಲು ತಗೊಳ್ಳೋದು ಮುಖ್ಯವಲ್ಲ. ಉತ್ತರ ಕೊಡೋದು ಮುಖ್ಯ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಾದರ್ಶನದಿಂದ ಜನರಿಗೆ ಅನುಕೂಲ ಆಗಲಿದೆ. ಮುಂಚೆ ಅಧಿಕಾರ ಮಾಡಿದವರ ಹಣೆಬರಹ ಏನು ಅಂತಾ ಇವತ್ತು ಗೊತ್ತಾಗುತ್ತದೆ. ಆಡಳಿತವನ್ನು ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಈ ಕೆಲಸ ಮಾಡಿದ್ದಾರೆ. ಜನರ ಸಮಸ್ಯೆ ನಡುವೆ ಇದ್ದು ಪರಿಹಾರ ಕಂಡುಕೊಳ್ಳೋದು ಒಳ್ಳೆಯದು ಎಂದರು.
ಕಾವೇರಿ ಹೋರಾಟ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಬಂದ್ ಮಾಡೋದು ಅವರ ಹಕ್ಕು. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಆಗದ ಹಾಗೆ ಪ್ರತಿಭಟನೆ ಮಾಡಲಿ. ಇಂದು ಈ ವಿಷಯ ಸುಪ್ರೀಂ ಕೋರ್ಟ್ ನಲ್ಲಿದೆ. ಕೇಂದ್ರ ಸರ್ಕಾರ ವಸ್ತು ಸ್ಥಿತಿ ಅರಿತರೇ ಒಳ್ಳೆಯದು. ಕಾವೇರಿ ನದಿ ವಿಚಾರದಲ್ಲಿ ರಾಜ್ಯ ರಾಜ್ಯಗಳ ನಡುವೆ ಸಮಸ್ಯೆ ಆಗುತ್ತಿದೆ ಎಂದರು.
ಹೊಸ ಮದ್ಯದ ಅಂಗಡಿ ತೆರೆಯುವ ವಿಚಾರ ಕುರಿತು ಮದ್ಯ ಭಾಗ್ಯ ಕರುಣಿಸಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಲೇವಡಿ ವಿಚಾರಕ್ಕೆ ಪ್ರತಿಕ್ರಿಸಿದ ಮಧು ಬಂಗಾರಪ್ಪ, ಇಂತಹ ಹೇಳಿಕೆಗಳಿಗೆ ಎಲ್ಲಾ ಪ್ರತಿಕ್ರಿಯೆ ನೀಡಲ್ಲ. ಮಾಜಿ ಸಿಎಂ ಆದವರು ಟೀಕೆ ಮಾಡುವ ಮೊದಲು ಯೋಚನೆ ಮಾಡಲಿ. ನಮ್ಮ ಸರ್ಕಾರದ ಅಭಿವೃದ್ಧಿ ನೋಡಿ ಅವರಿಗೆ ಸಹಿಸಲಾಗುತ್ತಿಲ್ಲ. ವಿರೋಧ ಪಕ್ಷಗಳು ಜನರ ದಾರಿ ತಪ್ಪಿಸುವ ಹೇಳಿಕೆ ಕೊಟ್ಟರೆ ಅದು ನಿಮ್ಮ ಹಣೆ ಬರಹ, ನಮ್ಮ ಹಣೆಬರಹ ಅಲ್ಲ ಎಂದು ತಿರುಗೇಟು ನೀಡಿದರು.
ಶಿವಮೊಗ್ಗ ಸ್ಮಾರ್ಟ್ ಸಿಟಿ ಅವ್ಯವಹಾರ ತನಿಖೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸ್ಮಾರ್ಟ್ ಸಿಟಿ ಅವ್ಯವಹಾರದ ಬಗ್ಗೆ ತನಿಖೆಗೆ ಸೂಚಿಸಲಾಗಿದೆ. ತನಿಖೆ ನಡೆಸಲು ನಮ್ಮಲ್ಲಿ ಸೂಕ್ತ ತನಿಖೆ ವ್ಯವಸ್ಥೆ ಇದೆ ಎಂದರು.
ತನಿಖೆ ನೆಪದಲ್ಲಿ ಗುತ್ತಿಗೆದಾರರು ಮನೆ ಬಾಗಿಲಿಗೆ ಬರಲಿ ಎಂಬ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಆರೋಪಕ್ಕೆ ಪ್ರತಿಕ್ರಿಸಿದ ಸಚಿವರು, ಹಾಗಾದರೆ ಗುತ್ತಿಗೆದಾರರು ಅವರ ಮನೆಗೆ ಹೋಗಿದ್ದಾರಾ ಎಂದು ಈಶ್ವರಪ್ಪಗೆ ತಿರುಗೇಟು ನೀಡಿದರು.

ನಮ್ಮದೇ ಸರ್ಕಾರ ಇದೆ, ದಾವಣಗೆರೆಯಲ್ಲಿ ರೈತರು ಪ್ರತಿಭಟನೆ ಮಾಡ್ತಿದ್ದಾರೆ. ಅವರು ರೈತರೇ, ನಮ್ಮ ಜಿಲ್ಲೆಯವರೂ ರೈತರೇ ಆಸೆಯಿಂದ ಭತ್ತ ನಾಟಿ ಮಾಡಿದ್ದಾರೆ. ದುಡಿಮೆ ಮಾಡಲು ಬೇಡ ಎನ್ನಲಾಗದು. ನಾಳೆಯಿಂದ ನೀರು ಬಿಡಲೇ ಬೇಕಾಗುತ್ತದೆ

ಮಧುಬಂಗಾರಪ್ಪ, ಸಚಿವ

Ad Widget

Related posts

ನಕಲಿ ಮುಳುಗಡೆ ಪತ್ರ: ತನಿಖೆಗೆ ಆಗ್ರಹ

Malenadu Mirror Desk

ಪ್ರತಿಭಟನೆ ವೇಳೆ ಉಪನ್ಯಾಸಕಿ ಅಸ್ವಸ್ಥ : ಎಂಎಲ್ಸಿ ಡಾ.ಧನಂಜಯ ಸರ್ಜಿರಿಂದ ಚಿಕಿತ್ಸೆ

Malenadu Mirror Desk

ಮಧ್ಯರಾತ್ರಿ ಕಾರುಗಳ ಗಾಜು ಒಡೆದ ದುಷ್ಕರ್ಮಿಗಳು ಕೋಮು ಭಾವನೆ ಕೆರಳಿಸುವ ಹುನ್ನಾರ ಎಂದ ಸಚಿವರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.