ಶಿವಮೊಗ್ಗ :ನರೇಂದ್ರಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಕೂಡ ಜಾತಿಗಣತಿಯನ್ನು ನಡೆಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದಲ್ಲಿ ಜಾತಿಗಣತಿ ನಡೆಸುವ ಮೂಲಕ ದಲಿತರು, ಆದಿವಾಸಿಗಳು, ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಕೈಗೊಂಡಿರುವ ತೀರ್ಮಾನವನ್ನು ಅವರು ಸ್ವಾಗತಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜಾತಿಗಣತಿಯ ಪರ ನಿಲುವು ತಾಳುವುದು ಎಂದರೆ ಜನರನ್ನು ಬಡತನದಿಂದ ಪಾರು ಮಾಡಲು ಇರುವ ಬಹಳ ಪ್ರಗತಿಪರವಾದ ಹೆಜ್ಜೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಬದ್ಧತೆಯಿಂದ ರೂಢಿಸಿಕೊಂಡು ಬಂದಿರುವ ದಲಿತರು, ಹಿಂದುಳಿದ ವರ್ಗಗಳು, ಆದಿವಾಸಿಗಳು, ಮಹಿಳೆಯರಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ನೀಡುವ ಮಹಾನ್ ಹೋರಾಟದ ಕ್ರಿಯೆ ಮತ್ತು ಸಂಕಲ್ಪವನ್ನು ಇದು ಸಾರುತ್ತದೆ ಎಂದಿದ್ದಾರೆ. ಜಾತಿ ಗಣತಿ ಮೂಲಕ ಎಲ್ಲಾ ಜಾತಿಗಳಿಗೂ ಹಕ್ಕು ಸಿಗುತ್ತದೆ. ಜಾತಿಗಣತಿಗೆ ಕಾಂಗ್ರೆಸ್ ಆಡಳಿತಾರೂಢ ರಾಜ್ಯಗಳು ಬದ್ಧವಾಗಿವೆ. ಅದರಂತೆ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೂಡ ಜಾತಿಗಣತಿಯನ್ನು ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಾವು ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಭಾಷಣ ಮಾಡುವ ಮೂಲಕ ತಮ್ಮ ವೈಫಲ್ಯವನ್ನು ಮರೆಮಾಚಿಕೊಳ್ಳುವ ಪ್ರಯತ್ನವನ್ನು ನಿಲ್ಲಿಸಿ ಜಾತಿಗಣತಿ ನಡೆಸುವ ಮೂಲಕ ಈ ದೇಶದ ಹಿಂದುಳಿದ, ದಲಿತ, ಆದಿವಾಸಿಗಳ ಅಭಿವೃದ್ದಿಯ ನೈಜ ಬದ್ದತೆ ತೋರಿಸಲಿ ಎಂದಿದ್ದಾರೆ.
ಕರ್ನಾಟಕದಲ್ಲಿ ೨೦೧೩ ರಲ್ಲಿ ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾಂತರಾಜ್ ನೇತೃತ್ವದ ಆಯೋಗದಿಂದ ದಲಿತ – ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ,ಶೈಕ್ಷಣಿಕ ಸಮೀಕ್ಷೆ ನಡೆಸಿದ್ದು, ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿರುವುದು ವರದಿ ಅನುಷ್ಟಾನಕ್ಕೆ ಬಲ ಬಂದಂತಾಗಿದೆ.
ಜಾತಿಗಣತಿ ಪರವಾದ ಐತಿಹಾಸಿಕ ನಿರ್ಣಯ ಕೈಗೊಂಡಿರುವ ಎಐಸಿಸಿ ನಾಯಕಿ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ಗಾಂಧಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಧನ್ಯವಾದ ಸಲ್ಲಿಸಿದ್ದಾರೆ.