ಶಿವಮೊಗ್ಗ: ಶಿವಮೊಗ್ಗ ನಗರ ಸ್ಮಾರ್ಟ್ ಆಗಬೇಕೆಂದು ಮಾಡಿದ್ದ ಕಾಮಗಾರಿಗೆ ಬಡವ್ಯಕ್ತಿಯೊಬ್ಬ ಬಲಿಯಾಗಿದ್ದಾರೆ. ಸ್ಮಾರ್ಟ್ ಸಿಟಿ ಕಾಮಗಾರಿ ಕಳಪೆ ಎಂಬ ಕೂಗು ಮೊದಲಿಂದಲೂ ಕೇಳಿಬರುತ್ತಿದೆ. ಆದರೆ ಅದಕ್ಕೆ ಒಬ್ಬರ ವ್ಯಕ್ತಿ ಬಲಿಯಾಗಿರುವುದು ದುರಂತವಾಗಿದೆ. ನಗರದ ವಿನೋಬನಗರ ವೀರಣ್ಣ ಲೇಔಟ್‌ನಲ್ಲಿ ಸೋಮವಾರ ಈ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.
ಆಯನೂರು ಗೇಟ್ ಬಳಿಯ ನಿವಾಸಿ ಮುತ್ತಪ್ಪ ಮೂತ್ರವಿಸರ್ಜನೆಗೆಂದು ರೈಲ್ವೆ ಹಳಿ ಪಕ್ಕದ ಚರಂಡಿಯ ಸ್ಲ್ಯಾಬ್ ಮೇಲೆ ನಿಂತಿದ್ದಾಗ ಸ್ಲ್ಯಾಬ್ ಕುಸಿದು ಅವರು ಸ್ಥಳದಲ್ಲಿಯೇ ಮೃಪಟ್ಟಿದ್ದಾರೆ. ಗುಜರಿ ವ್ಯಾಪಾರ ಮಾಡುತ್ತಿದ್ದ ಮುತ್ತಪ್ಪ ವಾಹನವನ್ನು ಪಕ್ಕಕ್ಕೆ ನಿಲ್ಲಿಸಿ ರಾಜಾಕಾಲುವೆಗೆ ಹಾಕಿದ್ದ ಸ್ಲ್ಯಾಬ್ ಮೇಲೆ ನಿಂತು ಮೂತ್ರ ವಿಸರ್ಜನೆಗೆ ಮುಂದಾಗಿದ್ದಾರೆ. ಈ ಸಂದರ್ಭ ಸ್ಲ್ಯಾಬ್ ಕುಸಿದಿದೆ. ಆಳವಾದ ಕಂದಕಕ್ಕೆ ಬಿದ್ದ ಮುತ್ತಪ್ಪನ ಮೇಲೆ ಕಲ್ಲು ಮತ್ತು ಸ್ಲ್ಯಾಬ್ ಬಿದ್ದಿದ್ದರಿಂದ ಅವರು ಸ್ಥಳದಲ್ಲಿಯೇ ಅಸುನೀಗಿದ್ದಾರೆ.
ಮೃತ ಮುತ್ತಪ್ಪ ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳು ಇದ್ದಾರೆ. ಸ್ಥಳಕ್ಕೆ ನಗರದ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.