ಶಿವಮೊಗ್ಗ : ಹೊರವಲಯದ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮಕ್ಕೆ ನೂತನ ಅತಿಥಿಗಳ ಆಗಮನವಾಗಿದೆ.
ಮೃಗಾಲಯಗಳ ನಡುವೆ ಪ್ರಾಣಿಗಳ ವಿನಿಮಯ ಕಾರ್ಯಕ್ರಮದಡಿ 5 ಬಗೆಯ ಹೊಸ ಪ್ರಾಣಿ, ಪಕ್ಷಿಗಳು ಕೇರಳದ ತಿರುವನಂತಪುರದಿಂದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಬಂದಿವೆ.
ಪ್ರಸ್ತುತ ಸಿಂಹಧಾಮಕ್ಕೆ 2 ಘಾರಿಯಲ್ ಮೊಸಳೆಗಳು (ಒಂದು ಗಂಡು, ಒಂದು ಹೆಣ್ಣು), 4 ಲೆಸ್ಸೆರ್ ರಿಹ ಪಕ್ಷಿಗಳು ( ಎರಡು ಗಂಡು, ಎರಡು ಹೆಣ್ಣು), 1 ಕತ್ತೆ ಕಿರುಬ(ಗಂಡು), 2 ಮುಳ್ಳು ಹಂದಿಗಳು (ಒಂದು ಗಂಡು, ಒಂದು ಹೆಣ್ಣು) ಮತ್ತು ಸನ್ ಕಾನ್ಯೂರ್ ಪಕ್ಷಿಗಳನ್ನು (ಮೂರು ಗಂಡು, ಮೂರು ಹೆಣ್ಣು) ಶಿವಮೊಗ್ಗಕ್ಕೆ ತರಲಾಗಿದೆ.
ಇನ್ನು ಘಾರಿಯಲ್ ಮೊಸಳೆ ಅಳಿವಿನಂಚಿನಲ್ಲಿರುವ ಪ್ರಭೇಧವಾಗಿದ್ದು, ಇವುಗಳ ಸಂರಕ್ಷಣೆ ಕುರಿತು ಪ್ರಕೃತಿ ಶಿಕ್ಷಣ ನೀಡಲು ತ್ಯಾವರೆಕೊಪ್ಪಕ್ಕೆ ತರಲಾಗಿದೆ. ಅದೇ ರೀತಿ ದಕ್ಷಿಣ ಅಮೇರಿಕಕ್ಕೆ ಸಂಬಂಧಿಸಿದ ಲೆಸ್ಸರ್ ರಿಹಾ ಮತ್ತು ಸನ್ ಕಾನ್ಯೂರ್ ಪ್ರಭೇದಗಳು ಮೊದಲ ಬಾರಿಗೆ ಮೃಗಾಲಯಕ್ಕೆ ಬಂದಿವೆ.
ಪ್ರಾಣಿಗಳ ವಿನಿಮಯ ಕಾರ್ಯಕ್ರಮದಡಿ ಹೆಚ್ಚುವರಿ ಪ್ರಾಣಿಗಳ ವಿನಿಮಯ ಮಾಡಿಕೊಳ್ಳಲು ಅನುಮೋದನೆ ದೊರೆತಿತ್ತು. ಅದರಂತೆ ಹುಲಿ & ಸಿಂಹಧಾಮಕ್ಕೆ ನೂತನ ಅತಿಥಿಗಳ ಆಗಮನವಾಗಿದ್ದು, ತ್ಯಾವರೆಕೊಪ್ಪದಲ್ಲಿನ ಪ್ರಾಣಿ ಪ್ರಭೇದಗಳ ಸಂಖ್ಯೆ 34 ಕ್ಕೆ ಏರಿಕೆಯಾಗಿದೆ.
ತಿರುವಂನತಪುರಕ್ಕೆ ತೆರಳಿದ ಶಿವಮೊಗ್ಗದ ಪ್ರಾಣಿಗಳು :
ಇನ್ನು ತ್ಯಾವರೆಕೊಪ್ಪದ ಮೃಗಾಲಯದಲ್ಲಿ ಹೆಚ್ಚುವರಿಯಾದ ಪ್ರಾಣಿಗಳನ್ನು ತಿರುವನಂತಪುರದ ಮೃಗಾಲಯಕ್ಕೆ ರವಾನಿಸಲಾಗಿದೆ. 2 ಮೊಸಳೆಗಳು, 2 ನರಿಗಳು, 2 ತಾಳೆ ಬೆಕ್ಕು ಮತ್ತು 3 ಹೆಣ್ಣು ಕತ್ತೆ ಕಿರುಬಗಳನ್ನು ಶಿವಮೊಗ್ಗದಿಂದ ರವಾನೆ ಮಾಡಲಾಗಿದೆ. ಮುಖ್ಯವಾಗಿ ಕತ್ತೆ ಕಿರುಬಗಳನ್ನು ಅವುಗಳ ಬ್ಲಡ್ ಲೈನ್ ಬದಲವಣೆಗಾಗಿ ವಿನಿಮಯ ಮಾಡಿಕೊಳ್ಳಲಾಗಿದೆ.