Malenadu Mitra
ರಾಜ್ಯಶಿವಮೊಗ್ಗ

15 ದಿನದಲ್ಲಿ ಕೃಷಿ ಕಾರ್ಯಕ್ರಮಗಳ ಮಾರ್ಗಸೂಚಿ ಬಿಡುಗಡೆ : ಎನ್.ಚೆಲುವರಾಯಸ್ವಾಮಿ


ಶಿವಮೊಗ್ಗ: ಮುಂದಿನ 15 ದಿನಗಳೊಳಗಾಗಿ ಕೃಷಿ ಇಲಾಖೆಯಿಂದ ಅನುಷ್ಠಾನಗೊಳ್ಳುವ ವಿವಿಧ ಯೋಜನೆಗಳ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ರಾಜ್ಯ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಅವರು ಹೇಳಿದರು.
ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅನುಷ್ಠಾನದಲ್ಲಿರುವ ಕೃಷಿ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಆಡಳಿತಾರೂಢ ಸರ್ಕಾರವು ರೈತರಿಗೆ ಪೂರಕವಾಗಿದ್ದು, ಈವರೆಗೆ ರಾಜ್ಯದ ಕೃಷಿಕರಿಗೆ ಶೇ.೦ ಬಡ್ಡಿದರದಲ್ಲಿ ನೀಡಲಾಗುತ್ತಿದ್ದ ಕೃಷಿ ಸಾಲವನ್ನು ೩ ಲಕ್ಷಗಳ ಮಿತಿಯಿಂದ ೫ಲಕ್ಷಕ್ಕೆ ಏರಿಸುವ ಬಗ್ಗೆ ಚಿಂತನೆ ನಡೆಸಿದ್ದು, ಶೀಘ್ರದಲ್ಲಿ ಯೋಜನೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಅರ್ಹರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಲು ಸೂಕ್ತ ಸಲಹೆ-ಸಹಕಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಸಾರ್ವಜನಿಕರಿಂದ ಯಾವುದೇ ದೂರುಗಳು ಬಾರದಂತೆ ಅಧಿಕಾರಿಗಳು ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.
ಮುಂಗಾರು ಮಳೆಯಲ್ಲಿ ಕೊರತೆ ಕಂಡುಬಂದಿದೆ. ಪ್ರಸ್ತುತ ಹಿಂಗಾರು ಹಂಗಾಮಿನಲ್ಲಿ ಮಳೆ ಆಶಾದಾಯಕವಾಗಿದೆ. ಕೃಷಿ ಅಧಿಕಾರಿಗಳು ಕಾಲಕಾಲಕ್ಕೆ ಕೃಷಿ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಬೇಕು. ಅಲ್ಲದೇ ಗ್ರಾಮೀಣ ಕ್ಷೇತ್ರ ಭೇಟಿಗೆ ತೆರಳಿದಾಗ ಅಲ್ಲಿನ ಕೃಷಿಕರ ಸಮಸ್ಯೆಗಳಿಗೆ ಕಿವಿಯಾಗಬೇಕು. ಅದಕ್ಕೆ ಪೂರಕವಾಗಿ ಸೂಕ್ತ ಹಾಗೂ ಸಕಾಲಿಕ ಮಾರ್ಗದರ್ಶನ ನೀಡಿ, ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಬೇಕೆಂದರು.
ದೂರುಗಳು ಬರಬಾರದು:
ಗ್ರಾಮೀಣ ರೈತರಿಗೆ ಕೃಷಿ ಉಪಕರಣಗಳ ಲಭ್ಯತೆಯಲ್ಲಿ ಯಾವುದೇ ಕೊರತೆಯಾಗದಂತೆ ಗಮನಿಸಬೇಕು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿ ಬರುತ್ತಿವೆ. ದೂರುಗಳು ಬಾರದಂತೆ ಹಾಗೂ ಸರಿಯಾಗಿ ಕೃಷಿ ಉಪಕರಣಗಳ ನಿರ್ವಹಣೆ ಮಾಡುವವರನ್ನು ನಿಯೋಜಿಸಲು ಕ್ರಮ ವಹಿಸುವಂತೆ ಸಚಿವರು ಸಲಹೆ ನೀಡಿದರು.
ಕಳೆದ ಸಾಲಿನಲ್ಲಿ ಅಡಿಕೆ ಬೆಳೆಗೆ ಕಂಡುಬಂದಿದ್ದ ಎಲೆಚುಕ್ಕೆ ರೋಗದ ನಿಯಂತ್ರಿಸುವ ಸಲುವಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ಸಂಬಂಧಿತ ಇಲಾಖೆಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಸುದೀರ್ಘವಾಗಿ ಸಮಾಲೋಚನೆ ನಡೆಸಿದ್ದು, ಅದರ ನಿಯಂತ್ರಣ ಕ್ರಮ ಕೈಗೊಳ್ಳಲು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಪ್ರಸ್ತುತ ಮುಂಗಾರು ಸಂದರ್ಭದಲ್ಲಿ ೫ ಕೋಟಿ ಸಸಿಗಳನ್ನು ನೆಟ್ಟು ಪರಿಸರ ಸಮತೋಲನ ಕಾಯ್ದುಕೊಳ್ಳಲು ಉದ್ದೇಶಿಸಲಾಗಿದೆ. ಇಲಾಖೆಯ ಅಧಿಕಾರಿಗಳು ರೈತರ ಹೊಲಗಳ ಬದುಗಳಲ್ಲಿ, ಲಭ್ಯವಿರುವ ಜಮೀನುಗಳಲ್ಲಿ ಹಾಗೂ ಶಾಲಾ, ಕಾಲೇಜು, ಗ್ರಾಮ ಪಂಚಾಯಿತಿ ಮತ್ತಿತರ ಸ್ಥಳಗಳಲ್ಲಿ ಸಸಿ ನೆಟ್ಟು ಪೋಷಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಅಧಿಕಾರಿಗಳೇ ಹೊಣೆ:
ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಕಳಪೆ ರಸಗೊಬ್ಬರ, ಬೀಜ ಹಾಗೂ ಔಷಧಗಳು ಮಾರಾಟವಾಗದಂತೆ ಎಚ್ಚರವಹಿಸಬೇಕು. ಅಂತಹ ಪ್ರಕರಣಗಳು ಪತ್ತೆಯಾದಲ್ಲಿ ಸಂಬಂಧಿತ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದ ಅವರು, ಕೃಷಿ ಇಲಾಖೆಯ ಅಧಿಕಾರಿಗಳು ತಮ್ಮ ದೈನಂದಿನ ಕೆಲಸ-ಕಾರ್ಯಗಳ ಜೊತೆಗೆ ಇತರೆ ಕೃಷಿ ಸಂಬಂಧಿತ ಇಲಾಖಾ ಕಾರ್ಯಕ್ರಮಗಳ ಪ್ರಾಥಮಿಕ ಅರಿವು ಹೊಂದಿದ್ದು, ತಮ್ಮ ಕಾರ್ಯಕ್ಷೇತ್ರದಲ್ಲಿನ ಕೃಷಿಕರಿಗೆ ಸಕಾಲದಲ್ಲಿ ಮಾಹಿತಿ ನೀಡಲು ಸಿದ್ಧರಾಗಿರುವಂತೆ ಅವರು ಸಲಹೆ ನೀಡಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಆಯುಕ್ತ ವೈ.ಎಸ್.ಪಾಟೀಲ್, ಜಲಾನಯನ ಯೋಜನೆಯ ನಿರ್ದೇಶಕ ಬಿ.ವೈ.ಶ್ರೀನಿವಾಸ್, ಕೃಷಿ ಇಲಾಖೆಯ ನಿರ್ದೇಶಕ ಜಿ.ಟಿ.ಪುತ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಸೇರಿದಂತೆ ೬ ಜಿಲ್ಲೆಗಳ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಕೃಷಿ ಅಧಿಕಾರಿಗಳು ಹಾಜರಿದ್ದರು.

Ad Widget

Related posts

ಶಿವಮೊಗ್ಗದಲ್ಲಿ ಮೊದಲ ಲಸಿಕೆ ಯಾರು ತಗೊಂಡ್ರು ಗೊತ್ತಾ ?

Malenadu Mirror Desk

ಕೋಡಿಹಳ್ಳಿ ಚಂದ್ರಶೇಖರ್ ವಜಾ, ನೂತನ ಅಧ್ಯಕ್ಷರಾಗಿ ಬಸವರಾಜಪ್ಪ

Malenadu Mirror Desk

ಕಾನೂನು ತಿದ್ದುಪಡಿ ಆಗುವವರೆಗೆ ಅರಣ್ಯ ಸಮಿತಿ ಸಭೆ ಮುಂದೂಡಿ : ಮನವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.