ಶಿವಮೊಗ್ಗ : ನಕ್ಸಲ್ ನಿಗ್ರಹ ಪಡೆ( ಎಎನ್ಎಫ್) ನಡೆಸಿದ ಕಾರ್ಯಾಚರಣೆಯಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಹತ್ಯೆಯಾಗಿದ್ದಾನೆ.
ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಪೀತಂಬೈಲ್ ಬಳಿಯ ಅರಣ್ಯ ಪ್ರದೇಶದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಎನ್ ಕೌಂಟರ್ ನಲ್ಲಿ ಮೃತಪಟ್ಟಿದ್ದಾನೆ.
ಕಳೆದ ಕೆಲ ದಿನಗಳಿಂದ ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯ ಶೃಂಗೇರಿ, ಹೆಬ್ರಿ ಭಾಗದಲ್ಲಿ ನಕ್ಸಲರ ಸಂಚಾರ ಕೇಳಿ ಬಂದ ಹಿನ್ನೆಲೆಯಲ್ಲಿ ಎಎನ್ಎಫ್ ತಂಡ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತ್ತು.
ನಿನ್ನೆ ರಾತ್ರಿ ವೇಳೆಗೆ ಉಡುಪಿ- ಶಿವಮೊಗ್ಗ ಗಡಿಭಾಗದ ಪೀತಂಬೈಲ್ ಬಳಿ ಐದು ಜನರಿದ್ದ ನಕ್ಸಲರ ತಂಡ ದಿನಸಿ ಸಂಗ್ರಹಕ್ಕೆ ಬಂದಿತ್ತು ಎನ್ನಲಾಗಿದೆ. ನಕ್ಸಲರ ತಂಡ ಬಂದಿರುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಎಎನ್ಎಫ್ ತಂಡ ತಕ್ಷಣವೇ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ನಡೆದ ಶೂಟೌಟ್ ನಲ್ಲಿ ವಿಕ್ರಂ ಗೌಡ ಮೃತಪಟ್ಟಿದ್ದಾನೆ. ಉಳಿದವರು ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.
ಉಡುಪಿ ಜಿಲ್ಲೆಯ ಹೆಬ್ರಿಯ ಕಬ್ಬಿನಾಲೆ ಮೂಲದ ವಿಕ್ರಂ ಗೌಡ ನಕ್ಸಲ್ ನಾಯಕನಾಗಿ ಗುರುತಿಸಿಕೊಂಡಿದ್ದನು. ಈತನ ವಿರುದ್ಧ ಶಿವಮೊಗ್ಗ ಜಿಲ್ಲೆಯ ಆಗುಂಬೆ ಠಾಣೆಯಲ್ಲಿ 2 (51/2009, 03/2012) ಹಾಗೂ ತೀರ್ಥಹಳ್ಳಿ ಠಾಣೆಯಲ್ಲಿ 1(174/2007) ಪ್ರಕರಣ ಸೇರಿದಂತೆ ಒಟ್ಟು ಮೂರು ಪ್ರಕರಣ ದಾಖಲಾಗಿವೆ.
ಎಎನ್ಎಫ್ ಕಾರ್ಯಾಚರಣೆ ಶಿವಮೊಗ್ಗ-ಉಡುಪಿ ಗಡಿಭಾಗದ ಕಬ್ಬಿನಾಲೆ- ಪೀತಂಬೈಲು ಬಳಿ ನಡೆದ ಹಿನ್ನೆಲೆಯಲ್ಲಿ ಆಗುಂಬೆ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.