ಶಿವಮೊಗ್ಗ: ಕರ್ತವ್ಯದ ವೇಳೆ ಹೃದಯಾಘಾತದಿಂದ ಮೃತಪಟ್ಟ ಪೊಲೀಸ್ ಎಹೆಚ್ ಸಿ (ಆರ್ಮ್ಡ್ ಹೆಡ್ ಕಾನ್ಸ್ ಸ್ಟೇಬಲ್)ಪರಶುರಾಮ್(45) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರಲ್ಲಿ ನೆರವೇರಿತು.
ಪರಶುರಾಮ್ ಅವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸಂಪಗೋಡು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು.
2005 ರ ಬ್ಯಾಚ್ ನಲ್ಲಿ ಪೊಲೀಸ್ ಕೆಲಸಕ್ಕೆ ಸೇರಿದ್ದ ಪರಶುರಾಮ್, ತೀರ್ಥಹಳ್ಳಿಯಲ್ಲಿ ಹೈವೇ ಪ್ಯಾಟ್ರೋಲ್ ವಾಹನದ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕರ್ತವ್ಯ ನಿಮಿತ್ತ ಶಿವಮೊಗ್ಗಕ್ಕೆ ಆಗಮಿಸಿದ್ದ ವೇಳೆ ಶುಕ್ರವಾರ ಬೆಳಗಿನ ಜಾವ ಹೃದಯಾಘಾತ ಸಂಭವಿಸಿತ್ತು. ತಕ್ಷಣವೇ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಆದಾಗಲೇ ಪರಶುರಾಮ್ ಮೃತಪಟ್ಟಿದ್ದರು.
ಅಂತಿಮ ದರ್ಶನ ಪಡೆದು, ಸಾಂತ್ವಾನ ಹೇಳಿದ ಅಧಿಕಾರಿ- ಸಿಬ್ಬಂದಿಗಳು:
ಇನ್ನು ಪರಶುರಾಮ್ ಹೃದಯಾಘಾತದಿಂದ ಮೃತಪಟ್ಟ ವಿಷಯ ತಿಳಿಯುತ್ತಲೇ ಎಸ್ಪಿ ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಶವಾಗಾರಕ್ಕೆ ಬಂದು ಅಂತಿಮ ದರ್ಶನ ಪಡೆದರಲ್ಲದೇ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ರು., ಪೊಲೀಸ್ ಕ್ವಾಟರ್ಸ್ ಬಳಿ ಸಹ ಪೊಲೀಸ್ ಅಧಿಕಾರಿ- ಸಿಬ್ಬಂದಿ ಮತ್ತು ಕುಟುಂಬಸ್ಥರು ಅಂತಿಮ ದರ್ಶನ ಪಡೆದರು. ನಂತರ ಸೊರಬದ ಸಂಪಗೋಡು ಗ್ರಾಮಕ್ಕೆ ಪರಶುರಾಮ್ ಪಾರ್ಥಿವ ಶರೀರ ಕೊಂಡೊಯ್ಯಲಾಯಿತು. ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಪರಶುರಾಮ್ ಅಂತ್ಯಕ್ರಿಯೆ ನಡೆಸಲಾಯ್ತು. ಪರಶುರಾಮ್ ಅವರ ಅಕಾಲಿಕ ನಿಧನಕ್ಕೆ ಇಲಾಖೆಯ ಅಧಿಕಾರಿ- ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.