ಶಿವಮೊಗ್ಗ: ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಯ್ಲರ್ ಸ್ಫೋಟಗೊಂಡು, 7 ಜನ ಗಾಯಗೊಂಡಿದ್ದಾರೆ.
ಭದ್ರಾವತಿ ನಗರ ಹೊರವಲಯದ ಚೆನ್ನಗಿರಿ ರಸ್ತೆಯ ಸೀಗೆಬಾಗಿಯ ರೈಸ್ ಮಿಲ್ ನಲ್ಲಿ ಸಂಜೆ 7 ಗಂಟೆ ಸುಮಾರಿಗೆ ಬಾಯ್ಲರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ 7 ಜನರು ಗಾಯಗೊಂಡು, ರಘು ಎಂಬ ವ್ಯಕ್ತಿ ಕಣ್ಮರೆಯಾಗಿದ್ದಾರೆ.
ಗಾಯಾಳುಗಳನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಯ್ಲರ್ ಸ್ಫೋಟದ ತೀವ್ರತೆಗೆ ಮಿಲ್ ಇದ್ದ ಕಟ್ಟಡ ಭಾಗಶಃ ಕುಸಿದಿದೆ. ಅಲ್ಲದೇ, ಹಿಂಭಾಗದ ಎರಡು ಅಂತಸ್ತಿನ ಮನೆ ಸಹ ಸಂಪೂರ್ಣವಾಗಿ ಕುಸಿದಿದೆ.
‘ಭದ್ರಾವತಿ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಯ್ಲರ್ ಸ್ಫೋಟ ಸಂಭವಿಸಿದೆ. 7 ಮಂದಿ ಗಾಯಗೊಂಡಿದ್ದು, ಎಲ್ಲರು ಅಪಾಯದಿಂದ ಪಾರಾಗಿದ್ದಾರೆ. ಎಲ್ಲರಿಗು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಘು ಎಂಬಾತ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
-ಜಿ.ಕೆ.ಮಿಥುನ್ ಕುಮಾರ್ : ಶಿವಮೊಗ್ಗ ಎಸ್ಪಿ
ಸ್ಫೋಟದ ಬಳಿಕ ಸೀಗೆಬಾಗಿ ಸುತ್ತಮುತ್ತ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು,ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಲೈನ್ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ಸ್ಫೋಟದ ಸ್ಥಳದಲ್ಲಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಆಂಬುಲೆನ್ಸ್, ಮೆಸ್ಕಾಂ, ನಗರಸಭೆ, ಕಂದಾಯ ಇಲಾಖೆ ಅಧಿಕಾರಿಗಳು ಬೀಡು ಬಿಟ್ಟಿದ್ದು, ಕಾರ್ಯಾಚರಣೆ ಮುಂದುವರೆಸಿದ್ದಾರೆ.