ಶಿವಮೊಗ್ಗ: ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಯ್ಲರ್ ಸ್ಫೋಟಗೊಂಡ ವೇಳೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ.
ಭದ್ರಾವತಿಯ ರಘು ಮೃತ ವ್ಯಕ್ತಿ.
ಭದ್ರಾವತಿ ನಗರ ಹೊರವಲಯದ ಚೆನ್ನಗಿರಿ ರಸ್ತೆಯ ಸೀಗೆಬಾಗಿಯ ರೈಸ್ ಮಿಲ್ ನಲ್ಲಿ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಬಾಯ್ಲರ್ ಸ್ಫೋಟಗೊಂಡು, ಘಟನೆಯಲ್ಲಿ 7 ಜನರು ಗಾಯಗೊಂಡು, ರಘು ಎಂಬ ವ್ಯಕ್ತಿ ಕಣ್ಮರೆಯಾಗಿದ್ದರು.
ಕಣ್ಮರೆಯಾಗಿದ್ದ ರಘುಗಾಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಶೋಧ ಕಾರ್ಯ ಆರಂಭಿಸಲಾಗಿತ್ತು.
ಇದೀಗ ಬಾಯ್ಲರ್ ಸ್ಫೋಟಗೊಂಡ ಸ್ಥಳದಲ್ಲೇ ರಘು ಅವರ ಮೃತದೇಹ ಪತ್ತೆಯಾಗಿದೆ.
ಬಾಯ್ಲರ್ ಸ್ಫೋಟದ ತೀವ್ರತೆಗೆ ಮಿಲ್ ಇದ್ದ ಕಟ್ಟಡ ಕುಸಿದಿತ್ತು. ಅಲ್ಲದೇ, ಹಿಂಭಾಗದ ಎರಡು ಅಂತಸ್ತಿನ ಮನೆ ಸಹ ಸಂಪೂರ್ಣವಾಗಿ ಕುಸಿದಿದೆ. ಮಿಲ್ ಒಳಭಾಗದಲ್ಲಿ ಸಂಪೂರ್ಣ ಛಿದ್ರಗೊಂಡಿದ್ದರಿಂದ ರಘು ನಾಪತ್ತೆಯಾಗಿದ್ದರು. ನಿರಂತರ ಶೋಧದ ಬಳಿಕ ರಘು ಶವ ಪತ್ತೆಯಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.