ಶಿವಮೊಗ್ಗ: ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಶೀಘ್ರ ಗುಣಮುಖರಾಗಲಿ ಎಂದು ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಇಂದು ಮಹಾ ಮೃತ್ಯುಂಜಯ ಹೋಮ ನಡೆಸಲಾಯಿತು.
ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯದ ಆಡಳಿತ ಮಂಡಳಿ ಮತ್ತು ಶಿವರಾಜ್ ಕುಮಾರ್ ಅಭಿಮಾನಿ ಬಳಗದಿಂದ ಮಹಾ ಮೃತ್ಯುಂಜಯ ಹೋಮ ನಡೆಸಿ, ಬಳಿಕ ಚೌಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಯ್ತು.
ನಟ, ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ ಆರೋಗ್ಯ ಸಮಸ್ಯೆಯಿಂದಾಗಿ ಚಿಕಿತ್ಸೆಗಾಗಿ ಅಮೇರಿಕಾಕ್ಕೆ ತೆರಳಿದ್ದು, ಇಂದು ಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಶಿವರಾಜ್ ಕುಮಾರ್ ಅವರು ರಾಜ್ಯಕ್ಕೆ ಮರಳಲಿ ಎಂದು ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯದಲ್ಲೇ ವಿಶೇಷ ಹೋಮ ನಡೆಸುವ ಮೂಲಕ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಒಬಿಸಿ ವಿಭಾಗದ ಜಿ.ಡಿ.ಮಂಜುನಾಥ್, ಹಿರಿಯ ವಕೀಲರಾದ ಎನ್.ಪಿ.ಧರ್ಮರಾಜ್, ಸಿಗಂದೂರು ದೇವಾಲಯದ ರವಿ.ಆರ್ ಹಾಗೂ ಪ್ರಮುಖರಾದ ರಾಘು ನವುಲೆಮನೆ, ರವಿ ಮಳವಳ್ಳಿ, ರಾಜಪ್ಪ, ಸಂದೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
next post