ತೀರ್ಥಹಳ್ಳಿ : ಇಂದು ವಿಶ್ವವೇ ಒಂದು ಹಳ್ಳಿಯಾಗಿದ್ದು, ನಿತ್ಯದ ಬೆಳವಣಿಗೆಯ ಆಧಾರದ ಮೇಲೆ ಬದುಕು ನಿರ್ಧರಿಸಿದೆ. ಜೊತೆಗೆ ಸಮಾಜ ವೇಗವಾಗಿ ಬದಲಾಗುತ್ತಿದ್ದು, ಯುವ ಪೀಳಿಗೆ ಜಾಗತಿಕ ವಿದ್ಯಮಾನಗಳ ಗ್ರಹಿಕೆ ಹೊಂದಿರಬೇಕು ಎಂದು ಮಾಜಿ ಸಂಸದ ಶಿವಕುಮಾರ ಉದಾಸಿ ಹೇಳಿದ್ದಾರೆ.
ತೀರ್ಥಹಳ್ಳಿ ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಬೇಗುವಳ್ಳಿ ರುಕ್ಮಿಣಿ-ಎಚ್.ಕೆ. ರಮಾನಂದ ಸ್ಮರಣಾರ್ಥ ನಡೆದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿವಹಿಸಿ ಮಾತನಾಡಿದ ಅವರು,ಕಾಲಘಟ್ಟಕ್ಕೆ ಅನುಗುಣವಾಗಿ ಶಿಕ್ಷಣ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ವಿದ್ಯಾರ್ಥಿಗಳು ಸ್ಪರ್ಧೆಗೆ ಸಿದ್ಧರಾಗಬೇಕು. ಆಧುನಿಕತೆಯ ವೇಗಕ್ಕೆ ಹೊಂದಿಕೊಳ್ಳುವ ಅಗತ್ಯ ಇದೆ. ಬೇಕು ಬೇಡಗಳನ್ನು ನಿರ್ಧರಿಸುವ ಮುನ್ನ ಉತ್ತಮ ಶಿಕ್ಷಣ ಕಲಿತಿರಬೇಕು. ಗುರಿ ಮುಟ್ಟುವ ಪ್ರಯತ್ನ ಸತತವಾಗಿ ಮಾಡಬೇಕು ಎಂದು ತಿಳಿಸಿದ್ದಾರೆ.
ನಾರಾಯಣಗುರು ಮಹಾ ಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ ಮಾತನಾಡಿ, ಸಾಧನೆ ಎಂಬ ಕಿರೀಟ ಸೋಮಾರಿಗಳಿಗೆ ದಕ್ಕುವುದಿಲ್ಲ. ನಿರಂತರ ಶ್ರಮದಿಂದ ಜ್ಞಾನ ಪಡೆಯುವ ಸಾಧಕರಿಗೆ ಸಾಧನೆ ಒಲಿಯುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಎಲ್ಲರೂ ಶ್ರಮದಿಂದ ಶಿಕ್ಷಣ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಬಿ.ಸ್ವಾಮಿರಾವ್, ಮಾಜಿ ಜಿಲ್ಲಾ ಪರಿಷತ್ ಸದಸ್ಯ ಬಿ.ಎಸ್.ಪುರುಷೋತ್ತಮ್, ಗೃಹ ಸಚಿವರ ಆಪ್ತ ಕಾರ್ಯದರ್ಶಿ ಕೆ.ಚನ್ನಬಸಪ್ಪ, ಕಾರ್ಯಕ್ರಮ ಸಂಘಟಕ ಬೇಗುವಳ್ಳಿ ಸತೀಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
previous post