Malenadu Mitra
ರಾಜ್ಯ ಶಿವಮೊಗ್ಗ

ಶಾಂತಿ, ಸೌಹಾರ್ದತೆ ಮೂಡಿಸುವಲ್ಲಿ ಧರ್‍ಮಪೀಠಗಳ ಜವಾಬ್ದಾರಿ ಹೆಚ್ಚು : ಶಾಂತಿಗಾಗಿ ನಾವು ಸಭೆಯಲ್ಲಿ ವಿವಿಧ ಮಠಾಧೀಶರ, ಮೌಲ್ವಿ, ಫಾದರ್ ಅಭಿಮತ

ಶಿವಮೊಗ್ಗ: ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮೂಡಿಸುವಲ್ಲಿ ಧರ್‍ಮಪೀಠಗಳ ಜವಾಬ್ದಾರಿ ಹೆಚ್ಚು. ಜನರು ತಪ್ಪು ದಾರಿ ಹಿಡಿದಾಗ, ಮನಸ್ಸು ಮಲೀನವಾದಾಗ ಅವರನ್ನು ಸರಿದಾರಿಗೆ ತರುವ ಕೆಲಸವನ್ನು ಮಠಾಧೀಶರು ಮಾಡಬೇಕು ಎಂದು ರೈತ ಮುಖಂಡ ಕೆ. ಟಿ. ಗಂಗಾಧರ್ ಅಭಿಪ್ರಾಯಪಟ್ಟಿದ್ದಾರೆ.
ಶಾಂತಿಗಾಗಿ ನಾವು ಎಂಬ ಶಾಂತಿ ಸಭೆಯಯಲ್ಲಿ ಮಾತನಾಡಿದ ಅವರು, ಮಠಾಧೀಶರು ಹಿಂದಿನಿಂದಲೂ ಇದೇ ಕೆಲಸ ಮಾಡಿಕೊಂಡು ಬಂದಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಆದರೂ ಕೆಲವೊಮ್ಮೆ ಅಹಿತಕರ ಘಟನೆ ಎದುರಾಗುತ್ತಿದೆ. ಅಂತಹವರು ಯಾರ ಹಿಡಿತದಲ್ಲೂ ಇರುವುದಿಲ್ಲ. ಆದರೂ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡಬೇಕೆಂದು ಹೇಳಿದರು.
ಜಡೆ ಸಂಸ್ಥಾನದ ಮಹಾಂತ ಸ್ವಾಮೀಜಿ ಮಾತನಾಡಿ , ನಮ್ಮ ದೇಶದ ಪರಂಪರೆ ಶಾಂತಿ, ಸೌಹಾರ್ದತೆ, ಸಹನೆ ಮತ್ತು ತಾಳ್ಮೆ. ಇದರಿಂದಾಗಿಯೇ ಇಂದಿನವರೆಗೂ ಎಲ್ಲ ಧರ್‍ಮಿಯರು ಕೂಡಿ ಬಾಳುತ್ತಿದ್ದೇವೆ. ಯಾವ ಧರ್ಮವೂ ಮೇಲಲ್ಲ, ಕೀಳಲ್ಲ. ಎಲ್ಲರೂ ಒಂದಾದಾಗ ಬಾಳು ಸುಗಮವಾಗುತ್ತದೆ. ಯಾವುದೇ ಗಲಾಟೆ ಆದಾಗ ಧಾರ್‍ಮಿಕ ಗುರುಗಳು ಒಂದೆಡೆ ಕಲೆತು ಶಾಂತಿಮಂತ್ರವನ್ನು ಬೋಧಿಸಬೇಕು ಎಂದು ಹೇಳಿದರು.

ಕೂಡಲಿ ಶೃಂಗೇರಿಮಠದ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು, ಶಾಂತಿ ಮನಸ್ಸಿನಲ್ಲಿರುವಂತದ್ದು. ಆಚರಣೆ ಮನೆಯಲ್ಲಿರುವಂತದ್ದು. ಆಚರಣೆ ಮನೆಯಿಂದ ಹೊರಬರಬಾರದು. ಆಗ ಅಶಾಂತಿ ಹುಟ್ಟುತ್ತದೆ. ಎಲ್ಲ ಧರ್‍ಮದ ಸಂತರು ಹೇಳಿದ್ದು ಶಾಂತಿ, ಸೌಹಾರ್ದಯುತವಾಗಿ ಬಾಳಿ ಎನ್ನುವುದನ್ನು ಎಂದರು.
ನಮ್ಮ ಮನೆಯನ್ನೇ ಸುಡುತ್ತದೆ:
ಬಸವಕೇಂದ್ರ ಬಸವಮರುಳಸಿದ್ಧರು, ಶಾಂತಿ ಕಾಪಾಡುವಲ್ಲಿ ಧರ್‍ಮಗುರುಗಳ ಪಾತ್ರ ಮಹತ್ವದ್ದು. ಪ್ರತಿ ವ್ಯಕ್ತಿಯೂ ಅವರವರ ಧರ್‍ಮವನ್ನು ಪಾಲಿಸುತ್ತಾ ಕರ್ತವ್ಯನಿಷ್ಟನಾಗಿ ಬಾಳಬೇಕು. ಜೊತೆಗೆ ಅನ್ಯಧರ್‍ಮವನ್ನು ಗೌರವಿಸುವ ಗುಣ ಕಲಿಯಬೇಕು. ಇದರಿಂದ ಶಾಂತಿ- ಸೌಹಾರ್ದತೆ ಬೆಳೆಯುತ್ತದೆ. ಧರ್‍ಮ ಎನ್ನುವುದು ಪೊರಕೆ ಇದ್ದಂತೆ. ಅದರ ಮೂಲಕ ಸಮಾಜದಲ್ಲಿನ ಕಸವನ್ನು ತೆಗೆಯಬೇಕೇ ವಿನಾ ದ್ವೇಷಕ್ಕೆ ಪೊರಕೆಯನ್ನು ಬಳಸಬಾರದು. ಅಸೂಯೆ, ಕಿಚ್ಚು, ದ್ವೇಷ ಬೆಳೆಸಿಕೊಂಡರೆ ಅದು ನಮ್ಮ ಮನೆಯನ್ನಲ್ಲದೆ ಅನ್ಯರ ಮನೆಯನ್ನು ಸುಡದು ಎಂಬ ಕೂಡಲಸಂಗಮನ ವಚನವನ್ನು ಹೇಳುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮಲ್ಲಿಗೇನಹಳ್ಳಿ ಚರ್ಚ್‌ನ ಫಾದರ್ ಸ್ಟಾನಿ ಫ2ರ್ನಾಂಡೀಸ್ ಮಾತನಾಡಿ, ನಮಗೆ ಶಾಂತಿಯ ಅರಿವಿದೆ. ಆದರೂ ಎಲ್ಲೊ ಒಂದೆಡೆ ಅದನ್ನು ಮೀರುತ್ತಿದ್ದೇವೆ. ಶಾಂತಿಯ ಲಯ ತಪ್ಪಿದಾಗ ಆಗಬಾರದ್ದು ಆಗುತ್ತದೆ. ಆಸ್ತಿಪಾಸ್ತಿ ಹಾನಿಯಾಗುತ್ತದೆ. ಅಹಿತಕರ ಘಟನೆ ಸಂಭವಿಸುತ್ತದೆ. ಅದಕ್ಕಾಗಿ ಆಂಗ್ಲ ಕವಿಯೊಬ್ಬ ಶಾಂತಿ ಜಗದೆಲ್ಲೆಡೆ ನೆಲೆಸಲಿ, ಅದು ನನ್ನಿಂದಲೇ ಆರಂಭವಾಗಲಿ ಎಂದಿದ್ದಾನೆ. ಆದ್ದರಿಂದ ಪ್ರತಿಯೊಬ್ಬರು ಶಾಂತಿಯತ್ತ ಹೆಚ್ಚಿನ ಗಮನ ಕೊಡಬೇಕೆಂದರು.
ಗಲಾಟೆಯಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ. ಜೊತೆಗೆ ಮನುಷ್ಯನ ಆರೋಗ್ಯವೂ ಹದಗೆಡುತ್ತದ ಇದನ್ನೆಲ್ಲ ಅರಿತು ನಮ್ಮ ಮಾತು, ಯೋಚನೆ, ಭಾವನೆಗಳಿಗೆ ಕಡಿವಾಣ ಹಾಕಿ ಬಾಳಬೇಕೆಂದರು.
ಸಂದೇಶ ಎಲ್ಲರನ್ನೂ ತಲುಪಲಿ:
ಮೌಲಾನಾ ಶಾಹುಲ್ ಹಮೀದ್ ಮುಕ್ತಿಯಾರ್ ಅವರು ಮಾತನಾಡಿ, ಶಿವಮೊಗ್ಗದಲ್ಲಿ ಗಲಾಟೆ ಸಂಭವಿಸಿದೆ ಎಂದರೆ ನಾವು ನಮ್ಮ ಸಂದೇಶವನ್ನು ಸಮಾಜಕ್ಕೆ ತಲುಪಿಸುವಲ್ಲಿ ವಿಫಲರಾಗಿದ್ದೇವೆ ಎಂದರ್ಥವಾಗುತ್ತದೆ. ಹಿತವಚನ ಮತ್ತು ಭಾಷಣ ಕೇವಲ ಕಾರ್‍ಯಕ್ರಮಕ್ಕೆ ಮಾತ್ರ ಸೀಮಿತವಾಗಬಾರದು. ಸಮಾಜದ ಪ್ರತಿಯೊಬ್ಬನ ಮನ ಮುಟ್ಟಬೇಕು. ಇದು ಹೆಚ್ಚು ಪರಿಣಾಮವನ್ನು ಬೀರುತ್ತದೆ. ಅದಕ್ಕಾಗಿ ಸರ್ವಧರ್‍ಮೀಯರ ಸಭೆ ನಡೆಸಲಾಯಿತು ಎಂದರು.
ಭಾರತ ಸರ್ವಧರ್‍ಮದ ಹೂದೋಟ. ಇಲ್ಲಿ ಸಾವಿರಾರು ಜಾತಿಯ ಹೂಗಳಿವೆ. ಆ ಹೂವುಗಳನ್ನೆಲ್ಲ ಕಿತ್ತು ಒಂದೇ ಮಾಲೆ ಮಾಡಬೇಕು. ಆಗ ಪ್ರೀತಿ, ಶಾಂತಿ ನೆಲೆಗೊಳ್ಳುತ್ತದೆ. ದ್ವೇಷ ಬಿಟ್ಟು ದಯೆ ಬೆಳೆಸಿಕೊಳ್ಳಬೇಕು. ಸೌಹಾರ್ದತೆಯನ್ನು ಮರೆಯಬೇಕು. ದಯವಿಲ್ಲದ ಧರ್‍ಮವೇ ಇಲ್ಲ. ಎಲ್ಲ ಧರ್‍ಮಗಳೂ ಇದನ್ನೇ ಹೇಳಿವೆ. ಧರ್‍ಮ ಅರಿತರೆ ಶಾಂತಿ, ಸುವ್ಯವಸ್ಥೆ ನೆಲೆಸುತ್ತದೆ ಎಂದರು.
ಜಮಾಅತ್ -ಉಲ್ – ಹಿಂದ್‌ನ ಉಪಾಧ್ಯಕ್ಷ ಮೌಲಾನಾ ಇರ್ಷಾದ್ ಅಹಮದ್ ಖಾನ್ ಸಂದೇಶ ನೀಡಿ, ಇಡೀ ದೇಶ ಒಂದಾಗಿ ಬಾಳಬೇಕು. ಪ್ರೀತಿ- ವಿಶ್ವಾಸ ನಮ್ಮ ಉಸಿರಾಗಬೇಕು. ಗಲಾಟೆ ಮಾಡುವವರಿಗೆ ಧರ್‍ಮದ ವಿಚಾರ ಗೊತ್ತಿರುವುದಿಲ್ಲ. ಧರ್‍ಮವನ್ನು ಅರಿತವನು ಗಲಾಟೆ, ದೊಂಬಿಗೆ ಇಳಿಯುವುದಿಲ್ಲ. ಯಾವುದೇ ಧರ್‍ಮದ ಬಾವುಟ ಹಿಡಿಯುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳಬೇಕು. ಧರ್‍ಮ ಅರಿತರೆ ಅಹಿತಕರ ಘಟನೆ ಎಂದೂ ನಡೆಯದು ಎಂದರು.
ಎಟಿಎನ್‌ಸಿಸಿ ಪ್ರ್ರಾಚಾರ್‍ಯ ಪ್ರೊ. ಸುರೇಶ್ ಅವರು ಗಲಾಟೆಯಿಂದ ಶಿಕ್ಷಣದ ಮೇಲೆ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎನ್. ಗೋಪಿನಾಥ ಮತ್ತು ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದ ಜಿಲಾಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ, ವ್ಯಾಪಾರ, ದುಡಿಮೆ ವಹಿವಾಟಿನ ಮೇಲಾದ ಪರಿಣಾಮದ ಬಗ್ಗೆ ಮಾತನಾಡಿದರು.
ನ್ಯಾಯವಾದಿ ಕೆ. ಪಿ. ಶ್ರೀಪಾಲ್ ಕಾರ್‍ಯಕ್ರಮ ನಿರೂಪಿಸಿದರು. ದಸಂಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಸ್ವಾಗತಿಸಿದರು. ಹಾಡುಗಾರ ಯುವರಾಜ್ ಭಾವೈಕ್ಯತೆ ಸಾರುವ ಗೀತೆಗಳನ್ನು ಪ್ರಸ್ತುತಪಡಿಸಿದರು.

ಶಿವಮೊಗ್ಗ ಗಲಾಟೆಗೆ ತಹಬಂದಿಗೆ ಬರಲು ವಿವಿಧ ಧರ್‍ಮದ ಮುಖಂಡರು ಸೇರಿ ಸಮಾಧಾನ ಮಾಡಿದ್ದು ಕಾರಣ. ಈ ಹಿಂದೆಯೂ ಹೀಗೆಯೇ ಮಾಡುವ ಮೂಲಕ ಅಹಿತಕರ ಘಟನೆಯನ್ನು ಶಾಂತಯುತವಾಗಿ ಬಗೆಹರಿಸಲಾಗಿದೆ. ಸಮಾಜದ ಜೊತೆ ಎಲ್ಲರೂ ಸಹಕರಿಸಿದಾಗ ಮಾತ್ರ ಯಶಸ್ಸು ಸಾಧ್ಯ. ಹೀಗೆ ಇಡಿ ಸಮಾಜ ಐಕ್ಯತೆಯಿಂದ ಇರಬೇಕು. ಯರೂ ಇದನ್ನು ಮುರಿಯಲು ಸಾಧ್ಯವಿಲ್ಲ. ಎಲ್ಲ ಧರ್‍ಮದಲ್ಲಿ ಸಮಾಜವಿದ್ರೋಹಿಗಳಿದ್ದಾರೆ. ಅಂತಹವರನ್ನು ಗುರುತಿಸಿ ಬುದ್ಧಿ ಹೇಳಬೇಕು ಮತ್ತು ಸರಿದಾರಿಯಲಿ ಸಾಗಲು ಸೂಚಿಸಬೇಕು. ಶಿವಮೊಗ್ಗ ಬೂದಿ ಮುಚ್ಚಿದ ಕೆಂಡವಾಗಿರದೆ ಸದಾ ಹಸಿರು ಅರಳುವ ನಗರ ಆಗಬೇಕು.

  • ಬಿ. ಎಂ. ಲಕ್ಷ್ಮೀಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠ

ಯಾರೋ ಮಾಡಿದ ತಪ್ಪಿಗೆ ಪ್ರತಿಕ್ರಿಯೆ ಎಸಗಲು ಹೋಗಿ ಅನಾಹುತಗಳಾಗುತ್ತಿವೆ. ಎಲ್ಲರೂ ಸಹ
ಸಹೋದರತ್ವದ ಭಾವನೆಯಲ್ಲಿ ಬಾಳುತ್ತಿದ್ದೇವೆ. ಅದನ್ನು ಕದಡುವ ಕೆಲಸವನ್ನು ಯಾರೂ ಮಾ ಡ ಬಾರದು. ಶಾಂತಿಯ ತೋಟವನ್ನಾಗಿ ಮಾಡಬೇಕು. ಕುವೆಂಪು ಜನಿಸಿದ ಈ ನೆಲದಲ್ಲಿ ಶಾಂತಿಮಂತ್ರ ಸದಾ ಜಪಿಸಬೇಕು. ಕೂಡಿ ಬಾಳುವುದೇ ನಮ್ಮ ಸಂಸ್ಕೃತಿ. ಇದನ್ನು ಗಟ್ಟಿಗೊಳಿಸುವಂತಾಗಬೇಕು.

  • ಡಾ. ಸೆಲ್ವಮಣಿ, ಜಿಲ್ಲಾಧಿಕಾರಿ
Ad Widget

Related posts

ಈಶ್ವರಪ್ಪರಿಗೆ ಕಣ್ಣೀರಿನ ಬಿಳ್ಕೋಡುಗೆ , ಕಾರ್ಯಕರ್ತರನ್ನು ಸಮಾಧಾನ ಪಡಿಸಿದ ಕೆಎಸ್‌ಇ

Malenadu Mirror Desk

ನಾಯಕತ್ವ ಬೆಳವಣಿಗೆಗೆ ಎನ್ಎಸ್ಎಸ್ ಸಹಕಾರಿ : ಭೀಮಣ್ಣ ಕೆ.ನಾಯ್ಕ್

Malenadu Mirror Desk

ಸ್ವಾತಂತ್ರ್ಯ ಸೇನಾನಿ ದೊರೆಸ್ವಾಮಿ ಇನ್ನಿಲ್ಲ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.