ಸ್ವಾತಂತ್ರ್ಯ ಪೂರ್ವದಲ್ಲಿ ವಿದ್ಯಾ ಕ್ಷೇತ್ರಕ್ಕೆ ಖಾಸಗಿ ಭಾಗವಹಿಸುವಿಕೆಯ ಉದ್ದೇಶದಿಂದ ಸ್ಥಾಪನೆಗೊಂಡ ಶಿವಮೊಗ್ಗದ ಪ್ರತಿಷ್ಟಿತ ರಾಷ್ಟ್ರೀಯ ಶಿಕ್ಷಣ ಸಮಿತಿಗೆ 75 ವರ್ಷ ಪೂರ್ಣಗೊಂಡಿದ್ದು, 2022-23 ರನ್ನು ಅಮೃತ ವರ್ಷವಾಗಿ ಆಚರಿಸಲಾಗುವುದು. ಮೊದಲ ಕಾರ್ಯಕ್ರಮವಾಗಿ ಭಾರತೀಯ ಅಂಚೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಎನ್.ಇ.ಎಸ್ ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಎನ್‌ಇಎಸ್ ಅಮೃತ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷರಾದ ಡಾ.ಪಿ.ನಾರಾಯಣ ತಿಳಿಸಿದರ
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಶಿವಮೊಗ್ಗ ಜಿಲ್ಲೆಯ ಹೋರಾಟಗಾರರು ಮಹಾತ್ಮ ಗಾಂಧೀಜಿಯವರ ಕರೆಗೆ ಮನ್ನಣೆ ನೀಡಿ ‘ನಹೀ ಜ್ಞಾನೇನ ಸದೃಶ್ಯಂ’ ಎಂಬ ಘೋಷ ವಾಕ್ಯದಡಿ 1946 ರಲ್ಲಿ ಸ್ಥಾಪನೆಗೊಂಡ ರಾಷ್ಟ್ರೀಯ ಶಿಕ್ಷಣ ಸಮಿತಿಯು ಮೊದಲ ಹಂತವಾಗಿ ರಾಷ್ಟ್ರೀಯ ಪ್ರೌಢ ಶಾಲೆಯನ್ನು ಪ್ರಾರಂಭಿಸಲಾಯಿತು. ಪ್ರಸ್ತುತ ಕಲೆ, ವಾಣಿಜ್ಯ, ವಿಜ್ಞಾನ, ಎಂಜಿನಿಯರಿಂಗ್, ಫಾರ್ಮಸಿ, ಕಾನೂನು, ಸಿಬಿಎಸ್‌ಸಿ, ಐಸಿಎಸ್‌ಸಿ, ಎಂ.ಬಿ.ಎ, ಎಂ.ಸಿ.ಎ ಸೇರಿದಂತೆ ಪ್ರಾಥಮಿಕ, ಪ್ರೌಢ, ಪಿ.ಯು.ಸಿ, ಪದವಿ, ಸ್ನಾತ್ತಕೊತ್ತರ ಪದವಿ ಶಿಕ್ಷಣದ 36 ವಿದ್ಯಾಲಯಗಳನ್ನು ಮುನ್ನಡೆಸಲಾಗುತ್ತಿದ್ದು ಮಲೆನಾಡಿನ ಶೈಕ್ಷಣಿಕ ಹೆಮ್ಮರವಾಗಿ ಬೆಳೆದು ನಿಂತಿದೆ. ಸರಿಸುಮಾರು 1500 ಕ್ಕೂ ಹೆಚ್ಚು ಸಿಬ್ಬಂದಿಗಳು, 14000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು.
ಮಾ.10ರಂದು ಸಂಜೆ 4 ಕ್ಕೆ ಎನ್.ಇ.ಎಸ್ ಕಾರ್ಯಾಲಯದ ಆವರಣದಲ್ಲಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು ದಕ್ಷಿಣ ವಲಯ ಪೋಸ್ಟ್ ಮಾಸ್ಟರ್ ಜನರಲ್ ಡಿ.ಎಸ್.ವಿ.ಆರ್. ಮೂರ್ತಿ ಅಂಚೆ ಲಕೋಟೆ ಬಿಡುಗಡೆ ಮಾಡಲಿದ್ದಾರೆ. ಮೇಯರ್ ಸುನಿತಾ ಅಣ್ಣಪ್ಪ, ಶಿವಮೊಗ್ಗ ವಿಭಾಗ ಅಂಚೆ ಅಧಿಕ್ಷಕ ಜಿ.ಹರೀಶ್, ಉನ್ನತ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಅಶೋಕ.ಡಿ.ರೇವಣಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ಎಂ.ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್.ವಿಶ್ವನಾಥ ಅಧ್ಯಕ್ಷತೆ ವಹಿಸಲಿದ್ದು ಉಪಾಧ್ಯಕ್ಷರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿಗಳಾದ ಡಿ.ಆರ್.ಅಮರೇಂದ್ರ ಕಿರೀಟಿ, ಖಜಾಂಚಿ ಸಿ.ಆರ್.ನಾಗರಾಜ ಅವರು ಉಪಸ್ಥಿತರಿರುವರು. ಇದೇ ವೇಳೆ ಮಾಸ ಪತ್ರಿಕೆ ‘ರಾ.ಶಿ ಸಂಗತಿ’ ಬಿಡುಗಡೆಗೊಳ್ಳಲಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿದೆ.
ವರ್ಷವಿಡಿ ವಿಶೇಷ ಕಾರ್ಯಕ್ರಮ
ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಆಚರಣೆಯನ್ನು ಮುಂದೂಡಲಾಗಿತ್ತು. ಈ ಹಿನ್ನಲೆಯಲ್ಲಿ 2022-23ರ ವರ್ಷವನ್ನು ಎನ್.ಇ.ಎಸ್ ಅಮೃತ ವರ್ಷವೆಂದು ಘೋಷಿಸಲಾಗಿದ್ದು ಪ್ರತಿ ತಿಂಗಳು ಉಪನ್ಯಾಸ ಸರಣಿ ಸೇರಿದಂತೆ ವಿವಿಧ ವೈಜ್ಞಾನಿಕ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಅಮೃತ ಮಹೋತ್ಸವದ ಸವಿನೆನಪಿಗಾಗಿ ಒಂದು ಶಾಶ್ವತ ಯೋಜನೆಯನ್ನು ಸಹ ಅನುಷ್ಟಾನಗೊಳಿಸಲಾಗುವುದು.
ಇಸ್ರೊ ಮಾಜಿ ಅಧ್ಯಕ್ಷ ಡಾ.ಶಿವನ್ ಜತೆ ಸಂವಾದ
ವಿದ್ಯಾರ್ಥಿಗಳೊಂದಿಗೆ ಇಸ್ರೋ ಮಾಜಿ ಅಧ್ಯಕ್ಷ ಡಾ.ಶಿವನ್ ಸಂವಾದ: ಮಾ.೧೨ ರಂದು ಮಧ್ಯಾಹ್ನ 3 ಗಂಟೆಗೆ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಮೃತ ಮಹೋತ್ಸವದ ಉಪನ್ಯಾಸ ಸರಣಿಯ ಪ್ರಥಮ ಉಪನ್ಯಾಸ ಆಯೋಜಿಸಲಾಗಿದ್ದು ಇಸ್ರೋ ಮಾಜಿ ಅಧ್ಯಕ್ಷರಾದ ಡಾ.ಕೆ.ಶಿವನ್ ಅವರು ‘ದೈನಂದಿನ ಜೀವನದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಪ್ರಭಾವ’ ಕುರಿತಾಗಿ ಮಾತನಾಡಲಿದ್ದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್.ವಿಶ್ವನಾಥ, ಉಪಾಧ್ಯಕ್ಷರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಖಜಾಂಚಿ ಸಿ.ಆರ್.ನಾಗರಾಜ, ಕುಲಸಚಿವರಾದ ಪ್ರೊ.ಟಿ.ಎಸ್.ಹೂವಯ್ಯಗೌಡ, ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ಉಪಸ್ಥಿತರಿದ್ದರು.