Malenadu Mitra
ರಾಜ್ಯ ಶಿವಮೊಗ್ಗ

ಸಂಸದರು ಇತಿಹಾಸ ಅರಿತು ಮಾತಾಡಲಿ: ಮಧುಬಂಗಾರಪ್ಪ, ಬಗರ್‌ಹುಕುಂ ಸಾಗುವಳಿದಾರರನ್ನು ಬೀದಿಗೆ ತಳ್ಳಿದ ಬಿಜೆಪಿ ಸರಕಾರ

ಅರಣ್ಯ ಹಕ್ಕು ಕಾಯಿದೆ ವಿಚಾರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಮಾಹಿತಿಯ ಕೊರತೆಯಿಂದ ಮಾತನಾಡುತ್ತಿದ್ದಾರೆ. ಅವರು ಇತಿಹಾಸ ಅರಿತು ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರ ವಿರುದ್ಧ ಮಾತನಾಡಬೇಕು ಎಂದು ಮಾಜಿ ಶಾಸಕ ಮಧುಬಂಗಾರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೦೬ ರಲ್ಲಿ ಕಾಂಗ್ರೆಸ್ ಸರಕಾರ ಜಾರಿಗೆ ತಂದ ಅರಣ್ಯ ಹಕ್ಕು ಕಾಯಿದೆಯಲ್ಲಿ ಲೋಪಗಳಿವೆ ಮತ್ತು ಅಂದು ಸಂಸದರಾಗಿದ್ದವರು ಮಾತನಾಡಿಲ್ಲ ಎಂದು ಆರೋಪ ಮಾಡಿರುವ ಈಗಿನ ಸಂಸದರಿಗೆ ಇತಿಹಾಸವೇ ಗೊತ್ತಿಲ್ಲ. 2002 ರಲ್ಲಿ ಅಂದಿನ ಸಂಸದರಾಗಿದ್ದ ಎಸ್.ಬಂಗಾಪ್ಪ ಅವರು45 ನಿಮಿಷ ಸಂಸತ್ತಿನಲ್ಲಿ ಮಾತನಾಡಿ ಅನಧಿಕೃತ ಸಾಗುವಳಿದಾರರ ಬಗ್ಗೆ ಮಾತನಾಡಿದ್ದಾರೆ. ಅರಣ್ಯ ಹಕ್ಕು ಕಾಯಿದೆ ಜಾರಿಗೆ ತಂದಿದ್ದೇ ಕಾಂಗ್ರೆಸ್ ಸರಕಾರ ಇದರಿಂದ ಪರಿಶಿಷ್ಟ ಪಂಗಡ ಹಾಗೂ ಗುಡ್ಡಗಾಡು ಪ್ರದೇಶದ ಜನರಿಗೆ ಉಳುವ ಭೂಮಿಗೆ ಹಕ್ಕುಪತ್ರ ಸಿಕ್ಕಿದೆ ಎಂದು ಹೇಳಿದರು.
ಕಾಯಿದೆಯಲ್ಲಿ75 ವರ್ಷ ದಾಖಲೆ ಬೇಕೆಂಬ ಷರತ್ತು ಇರುವುದು ಮಲೆನಾಡಿನ ಭಾಗದ ಜನರಿಗೆ ತೊಂದರೆಯಾಗಿರುವುದು ನಿಜ. ಆದರೆ ಅದನ್ನು ಸರಿಮಾಡುತ್ತೇವೆ ಎಂದು ಚುನಾಯಿತರಾದ ಬಿಜೆಪಿ ಸರಕಾರ ಯಾಕೆ ಮಾಡಿಲ್ಲ ಮತ್ತು ನಮ್ಮ ಸಂಸದರು ಈ ಬಗ್ಗೆ ಯಾಕೆ ಸಂಸತ್ತಿನಲ್ಲಿ ಮಾತನಾಡಿಲ್ಲ ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು. ಭೂ ಸುಧಾರಣಾ ಕಾಯಿದೆ ಮೂಲಕ ಬಡವರಿಗೆ ಭೂಮಿ ಕೊಟ್ಟಿರುವುದು ಕಾಂಗ್ರೆಸ್ ಪಕ್ಷ, ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪಾರಂ ೫೦, ೫೩ ಜಾರಿಗೆ ತಂದು ಲಕ್ಷಾಂತರ ಭೂ ಹೀನ ರೈತರಿಗೆ ಭೂಮಿ ಕೊಡಲಾಗಿದೆ ಆದರೆ ಇತಿಹಾಸ ಮರೆಮಾಚುವ ಬಿಜೆಪಿ ನಾಯಕರು ಈಗ ಪ್ರತಿಪಕ್ಷಗಳ ಬಗ್ಗೆ ಆರೋಪ ಮಾಡುವುದು ಸರಿಯಲ್ಲ ಎಂದು ಮಧುಬಂಗಾರಪ್ಪ ತಿರುಗೇಟು ನೀಡಿದರು.

ಡಬಲ್ ಎಂಜಿನ್ ಸರಕಾರ ಎಂದು ಹೇಳಿಕೊಂಡು ತಿರುಗಿದ್ದೇ ವಿನಾ ರಾಜ್ಯಸರಕಾರ ಕೂಡಾ ಕಾಯಿದೆ ತಿದ್ದುಪಡಿ ಮಾಡಬೇಕೆಂಬ ಒತ್ತಾಯವನ್ನು ಕೇಂದ್ರ ಸರಕಾರದ ಮೇಲೆ ಹಾಕಲಿಲ್ಲ. ಹೊಟ್ಟೆ ಪಾಡಿಗೆ ಸಾಗುವಳಿ ಮಾಡುತ್ತಿರುವ ಭೂ ಒತ್ತುವರಿದಾರರನ್ನು ಭೂ ಕಬಳಿಕೆದಾರರು ಎಂದು ಕೇಸು ಹಾಕಿಸಿ ಬೆಂಗಳೂರಿಗೆ ಮತ್ತು ಹೈಕೋರ್ಟ್‌ಗೆ ಅಲೆದಾಡಿಸಲಾಗುತ್ತಿದೆ. ಈ ಕಾನೂನು ತಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಈಗ ಸದನದಲ್ಲಿ ರೈತರಿಗೆ ಅನ್ಯಾಯ ಎಂದು ಹೇಳುತ್ತಿದ್ದಾರೆ. ಈ ಕಾನೂನು ತಿದ್ದುಪಡಿ ಮಾಡದಿದ್ದರೆ ಸರಕಾರಕ್ಕೆ ಒಳ್ಳೆ ಹೆಸರು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಅವರೇ ಮಾಡಿದ ಕಾನೂನಿನ ವಿರುದ್ಧ ಈಗ ಮಾತನಾಡಿರುವುದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.

ರಾಜ್ಯ ಸರಕಾರ ಅರಣ್ಯ ಹಾಗೂ ಕಂದಾಯ ಭೂಮಿ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು. ಅರಣ್ಯ ಹಕ್ಕು ಕಾಯಿದೆಯಲ್ಲಿರುವ ಷರತ್ತುಗಳನ್ನು ಸಡಿಲಿಸಬೇಕು ಈ ಬಗ್ಗೆ ನಮ್ಮ ಪಕ್ಷ ನಿರಂತರ ಹೋರಾಟ ಮಾಡುತ್ತದೆ ಎಂದ ಮಧುಬಂಗಾರಪ್ಪ ಅವರು, ಇಡೀ ರಾಜ್ಯಕ್ಕೆ ವಿದ್ಯುತ್ ನೀಡಿರುವ ಶಿವಮೊಗ್ಗ ಜಿಲ್ಲೆಯ ರೈತರು ಇಂದು ವಿದ್ಯುತ್ ಕೊರತೆಯಿಂದ ತಮ್ಮ ತೋಟ-ತುಡಿಕೆ ಕಳೆದುಕೊಳ್ಳುತ್ತಿದ್ದಾರೆ. ಇಂಧನ ಸಚಿವರು ಉಚಿತ ವಿದ್ಯುತ್ ಕೊಡುತ್ತೇವೆ ಎಂದು
ಎಂದು ಹೇಳುತ್ತಿದ್ದಾರೆ. ಬಂಗಾರಪ್ಪ ಅವರು ರೈತರಿಗಾಗಿ ಜಾರಿಗೆ ತಂದ ಈ ಯೋಜನೆಯನ್ನು ಸರಿಯಾಗಿ ನಿರ್ವಹಿಸಲಿ ಎಂದು ಆಗ್ರಹಿಸಿದರು.

ಆನವಟ್ಟಿಯಲ್ಲಿ ಪ್ರತಿಭಟನೆ

ವಿದ್ಯುತ್ ಅಸರ್ಮಪಕ ಪೂರೈಕೆ ಹಾಗೂ ಬಗರ್‌ಹುಕುಂ ರೈತರ ಸಮಸ್ಯೆ ಮುಂದಿಟ್ಟುಕೊಂಡು ಮಾ.೧೪ ರಂದು ಆನವಟ್ಟಿಯಲ್ಲಿ
ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ತಾಲೂಕುಗಳಲ್ಲಿಯೂ ಈ ರೀತಿಯ ಪ್ರತಿಭಟನೆಯನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿಯೂ ಒಂದು ದೊಡ್ಡ ಮಟ್ಟದ ಪ್ರತಿಭಟನೆ ಮಾಡಿ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರನ್ನು
ಕರೆಸಲಾಗುವುದು ಎಂದು ಮಧು ಹೇಳಿದರು.
ಕೆರೆಗೆ ನೀರಿಲ್ಲ
ಶಿವಮೊಗ್ಗ ಜಿಲ್ಲೆಯ ಸೊರಬ ಹಾಗೂ ಶಿಕಾರಿಪುರ ತಾಲೂಕುಗಳಲ್ಲಿ ನೀರಾವರಿ ಮಾಡಿದ್ದೇವೆ ಎಂದು ಯಡಿಯುರಪ್ಪ ಮತ್ತುವರ ಮಕ್ಕಳು ಪ್ರಚಾರ ಪಡೆಯುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸೊರಬ ಹಾಗೂ ಸಾಗರದ ಶಾಸಕರುಗಳು ಮಾತನಾಡುತ್ತಾರೆ. ಆದರೆ ಅಧಿಕಾರದಲ್ಲಿ
ಇಳಿಯುವ ಆತುರದಲ್ಲಿ ಎಲ್ಲ ಯೋಜನೆಗಳನ್ನು ಉದ್ಘಾಟಿಸಲಾಗಿದೆ. ಆದರೆ ಸೊರಬ
ಹಾಗೂ ಶಿಕಾರಿಪುರ ತಾಲೂಕುಗಳ ಕೆರೆಗಳಿಗೆ ನೀರು ಮಾತ್ರಬಂದಿಲ್ಲ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಪರ‍್ಯಾಯ ವ್ಯವಸ್ಥೆ ಮಾಡಲಿ
ರಷ್ಯಾ -ಉಕ್ರೇನ್ ಯುದ್ಧದ ಕಾರಣದಿಂದ ಉಕ್ರೇನ್‌ನಿಂದ ವಾಪಸ್ ಆಗಿರುವ ಮೆಡಿಕಲ್ ವಿದ್ಯಾರ್ಥಿಗಳ ಶಿಕ್ಷಣಕ್ಕೆ ರಾಜ್ಯಸರಕಾರ ಕ್ರಮ ಕೈಗೊಳ್ಳಬೇಕು.
ರಾಜ್ಯದಲ್ಲಿ ಅನೇಕ ವಿದ್ಯಾರ್ಥಿಗಳಿದ್ದಾರೆ. ಅಲ್ಲಿನ ವಿವಿ ಕಟ್ಟಡ ಬಾಂಬ್‌ದಾಳಿಗೆ ತುತ್ತಾಗಿದ್ದರಿಂದ ಈಗ ವಿದ್ಯಾರ್ಥಿಗಳ ಮೆಡಿಕಲ್
ಶಿಕ್ಷಣ ಅರ್ಧಕ್ಕೆ ನಿಲ್ಲಬಾರದು ಸರಕಾರ ಈ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು
ಮಧುಬಂಗಾರಪ್ಪ ಆಗ್ರಹಿಸಿದರು. ವಿಧಾನಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್,
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಪ್ರಮುಖರಾದ ಜಿ.ಡಿ.ಮಂಜುನಾಥ್, ಡಾ.ಶ್ರೀನಿವಾಸ್ ಕರಿಯಣ್ಣ,
ಕಲಗೋಡು ರತ್ನಾಕರ್, ಯು.ಶಿವಾನಂದ್, ಆರ್.ಸಿ.ಪಾಟೀಲ್, ಹುಲ್ತಿಕೊಪ್ಪ ಶ್ರೀಧರ್, ಪ್ರವೀಣ್, ವೈ ಹೆಚ್.ನಾಗರಾಜ್ ಮತ್ತಿತರರು ಹಾಜರಿದ್ದರು.

ಶಿವಮೊಗ್ಗ ಜಿಲ್ಲೆಯಲ್ಲಿ ಬಗರ್‌ಹುಕುಂ ಸಾಗುವಳಿದಾರರನ್ನು ಕಳ್ಳರು ಎಂಬಂತೆ ಬಿಂಬಿಸಿದವರೇ ಸಾಗರ ಮತ್ತು
ಸೊರಬ ಕ್ಷೇತ್ರದ ಹಾಲಿ ಶಾಸಕರುಗಳು. ವಿಧಾನಸೌಧದಲ್ಲಿ ಅವರು ಹಿಂದಿನ ಸರಕಾರ ನೀಡಿದ್ದ ಹಕ್ಕುಪತ್ರಗಳನ್ನು
ವಜಾಗೊಳಿಸಲು ಆಗ್ರಹಿಸಿದ್ದರು. ಈ ಇಬ್ಬರ ಕಾರಣದಿಂದ ಶಿವಮೊಗ್ಗದಲ್ಲಿ ಬಡವರಿಗೆ ಹಕ್ಕುಪತ್ರಗಳು ಸಿಗುತಿಲ್ಲ.
ಕಾನೂನು ತಿದ್ದುಪಡಿ ಬಗ್ಗೆ ಇವರು ಆಗ್ರಹ ಮಾಡುತಿಲ್ಲ

-ಮಧು ಬಂಗಾರಪ್ಪ, ಮಾಜಿ ಶಾಸಕ

Ad Widget

Related posts

ಕಾರ್ಟೂನ್

Malenadu Mirror Desk

ಎಂ.ಶ್ರೀಕಾಂತ್ ಕಾಂಗ್ರೆಸ್ ಸೇರ್ಪಡೆ

Malenadu Mirror Desk

ಗ್ರಾಮಗಳ ಸಮಗ್ರ ಅಭಿವೃದ್ಧಿ ಗ್ರಾಮ ಪಂಚಾಯತ್ ಜವಾಬ್ದಾರಿ: ಸಚಿವ ಕೆ.ಎಸ್.ಈಶ್ವರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.