Malenadu Mitra
ರಾಜ್ಯ ಶಿವಮೊಗ್ಗ

ಎಂಜನಿಯರಿಂಗ್ ಕಾಲೇಜಲ್ಲಿ ಆಂಧ್ರ ಸಚಿವರ ಕನ್ನಡ ಕಲರವ
ಹಳೆಯ ವಿದ್ಯಾರ್ಥಿಗಳು ಜಾಗತಿಕ ಸಮ್ಮಿಲನ

ಇಂದು ಬಂದು ನಾಳೆ ಹೋಗುವ ಅಧಿಕಾರಕ್ಕಿಂತ ನಾವು ರೂಡಿಸಿಕೊಂಡ ವ್ಯಕ್ತಿತ್ವವೇ ಬದುಕಿನಲ್ಲಿ ಎಂದೆಂದಿಗೂ ಶಾಶ್ವತ ಎಂದು ಆಂಧ್ರಪ್ರದೇಶ ಕೃಷಿ ಸಹಕಾರಿ ಇಲಾಖೆ ಸಚಿವರಾದ ಕಾಕನಿ ಗೋವರ್ಧನ ರೆಡ್ಡಿ ಹೇಳಿದರು.
ಶಿವಮೊಗ್ಗ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಏರ್ಪಡಿಸಿದ್ದ ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ – ನೆನಪಿನ ಅಂಗಳ ೨೦೨೨ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬ ವ್ಯಕ್ತಿಯ ಉನ್ನತೀಕರಣದಲ್ಲಿ ಶಿಕ್ಷಕರ ಹಾಗೂ ವಿದ್ಯಾ ಸಂಸ್ಥೆಯ ಪಾತ್ರ ಪ್ರಮುಖವಾಗಿದೆ. ಅಂತಹ ಅದ್ಭುತ ಸ್ಪಂದನೆ ನನಗೆ ಕಲಿಸಿದ ಶಿಕ್ಷಕರಿಂದ, ವಿದ್ಯಾಸಂಸ್ಥೆಗಳಿಂದ ದೊರೆತ್ತಿದ್ದರಿಂದಲೇ ಯಶಸ್ಸಿನ ಗುರಿ ತಲುಪಲು ನನಗೆ ಸಾಧ್ಯವಾಯಿತು ಎಂದರು.
ಇತರರ ಕೈ ಕೆಳಗೆ ಕೆಲಸ ಮಾಡಲು ಇಚ್ಚೆಯಾಗದೇ ಸಿವಿಲ್ ಕನ್ಸಲ್ಟೆಂಟ್ ಆಗಿ ಸ್ವಂತ ಉದ್ಯಮ ಪ್ರಾರಂಭಿಸಿದೆ. ಅನೇಕ ಸವಾಲುಗಳ ನಂತರ ಉತ್ತಮ ಉದ್ಯಮಿಯಾಗಿ ಹೊರಹೊಮ್ಮಿದೆ. ನಂತರ ರಾಜಶೇಖರ ರೆಡ್ಡಿ ಅವರ ನಾಯಕತ್ವದಲ್ಲಿ ಜಿಲ್ಲಾ ಪರಿಷತ್ತಿನ ಅಧ್ಯಕ್ಷರಾಗಿ ರಾಜಕೀಯ ಜೀವನ ಪ್ರಾರಂಭಿಸಿದೆ. ಪ್ರಸ್ತುತ ಜಗನ್ ಮೋಹನ್ ರೆಡ್ಡಿ ಅವರ ಸಂಪುಟದ ಅತಿ ಸೂಕ್ಷ್ಮ ಇಲಾಖೆಯಾದ ಕೃಷಿ ಮತ್ತು ಸಹಕಾರ ಇಲಾಖೆಯ ಸಚಿವನಾಗಿ ಸೇವೆ ಸಲ್ಲಿಸಲು ಸಾಧ್ಯವಾಯಿತು. ಕೃಷಿಯಾಧಾರಿತ ಅರ್ಹ ಫಲಾನುಭವಿಗಳಿಗೆ ನೇರವಾಗಿ ಹಣ ಸಂದಾಯವಾಗುವ ವ್ಯವಸ್ಥೆಯನ್ನು ಆಂಧ್ರಪ್ರದೇಶ ಸರ್ಕಾರ ಅನುಷ್ಟಾನಗೊಳಿಸಿದೆ ಎಂದರು.


ಹೃದಯ ಸ್ಪರ್ಶಿ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆ ಎಂದರೇ ನನಗೆ ಭಾವನಾತ್ಮಕ ನಂಟು. ವಿದ್ಯಾಭ್ಯಾಸದ ಸಂದರ್ಭದಲ್ಲಿ ಇಲ್ಲಿ ಕಳೆದ ಅನೇಕ ಕ್ಷಣಗಳು ಅವಿಸ್ಮರಣೀಯ. ಶಿವಮೊಗ್ಗ ಪ್ರವೇಶಿಸಿದಾಗ ಒಮ್ಮೇಲೆ ಹೃದಯ ತುಂಬಿ ಬಂದಿತ್ತು. ಹೆಚ್.ಪಿ.ಸಿ., ವೀರಭದ್ರೇಶ್ವರ ಟಾಕೀಸ್, ಗುರು ರಾಘವೇಂದ್ರ ದೇವಾಲಯ, ವೆಂಕಟೇಶ್ವರ ನಿಲಯದ ಹಳೆಯ ರೂಂ, ಮೀನಾಕ್ಷಿ ಭವನದ ಬೆಣ್ಣೆ ದೋಸೆ, ಕನ್ನಡ ಕಂಠೀರವ ಡಾ.ರಾಜ್ ಕುಮಾರ್ ಅವರ ಸಿನಿಮಾಗಳು ಎಂದೆಂದಿಗೂ ಮರೆಯಲಾಗದು ಎಂದರು.

ಕನ್ನಡದಲ್ಲಿಯೇ ಮಾತು

ಮೂವತ್ತು ವರ್ಷಗಳ ನಂತರ ಮತ್ತೊಮ್ಮೆ ಕನ್ನಡದಲ್ಲಿ ಮಾತನಾಡುವಾಗ ಒಂದು ರೀತಿಯ ರೋಮಾಂಚನವಾಗುತ್ತಿದೆ. ಕನ್ನಡದ ಹಳೆಯ ಹಾಡುಗಳು ಮನಸ್ಸಿನಲ್ಲಿ ಸದಾ ಗುನುಗುತ್ತಿರುತ್ತದೆ ಎಂದು ಹೇಳಿದರು.
ಇದೇ ವೇಳೆ ಕಾಲೇಜಿನ ಆವರಣದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಒಂದು ಸಾವಿರ ಜನ ಆಸನ ಸಾಮರ್ಥ್ಯವಿರುವ ಹಳೆಯ ವಿದ್ಯಾರ್ಥಿಗಳ ಸಭಾಂಗಣಕ್ಕೆ ವೈಯುಕ್ತಿಕವಾಗಿ ಐದು ಲಕ್ಷ ರೂಪಾಯಿಗಳ ಸಹಾಯಧನ ಘೋಷಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಏಳು ಜನ ಹಳೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್, ಉಪಾಧ್ಯಕ್ಷ ಸಿ.ಆರ್. ನಾಗರಾಜ, ಕಾರ್ಯದರ್ಶಿ ಎಸ್.ಎನ್. ನಾಗರಾಜ್, ಸಹ ಕಾರ್ಯದರ್ಶಿ ಡಾ.ಪಿ..ನಾರಾಯಣ್, ಖಜಾಂಚಿ ಡಿ.ಜಿ. ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಹೆಚ್.ಸಿ.ಶಿವಕುಮಾರ್, ಸುಧೀರ್, ಕುಲಸಚಿವ ಪ್ರೊ.ಹೂವಯ್ಯಗೌಡ, ಪ್ರಾಂಶುಪಾಲ ಡಾ.ಕೆ.ನಾಗೇಂದ್ರಪ್ರಸಾದ್, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಸುರೇಂದ್ರ, ಉಪಾಧ್ಯಕ್ಷ ರಾಜೇಂದ್ರ ಪ್ರಸಾದ್, ಕಾರ್ಯದರ್ಶಿ ಡಾ.ಕೆ.ಎಂ.ಬಸಪ್ಪಾಜಿ ಉಪಸ್ಥಿತರಿದ್ದರು.

Ad Widget

Related posts

ಜೆಡಿಎಸ್ ಸೇರಿದ ಮಾಜಿ ಶಾಸಕ ಪ್ರಸನ್ನಕುಮಾರ್

Malenadu Mirror Desk

ಗೋಕರ್ಣ ದೇವಸ್ಥಾನ ಉಸ್ತುವಾರಿ ಶ್ರೀಕೃಷ್ಣ ಸಮಿತಿಗೆ : ಸ್ವಾಗತ

Malenadu Mirror Desk

ಶಿವಮೊಗ್ಗದಲ್ಲಿ ತಗ್ಗಿದ ಕೊರೊನ, 5 ಸಾವು, 197 ಸೋಂಕು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.