Malenadu Mitra
ರಾಜ್ಯ ಶಿವಮೊಗ್ಗ

ಉತ್ತಮ ಆರೋಗ್ಯ ಮತ್ತು ಅಭ್ಯಾಸದಿಂದ ಜೀವನ ಸುಂದರವಾಗಿಸಿಕೊಳ್ಳಿ , ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆಯಲ್ಲಿ ಚಿತ್ರಸಾಹಿತಿ ಕವಿರಾಜ್ ಸಲಹೆ

ಶಿವಮೊಗ್ಗ ಜೂನ್ ೨೭: ಜೀವನ ತುಂಬಾ ಸುಂದರವಾಗಿದೆ. ಅದನ್ನು ಅನುಭವಿಸಲು ಉತ್ತಮ ಆರೋಗ್ಯ ಮತ್ತು ಅಭ್ಯಾಸಗಳು ಬೇಕು. ಈ ನಿಟ್ಟಿನಲ್ಲಿ ನಡೆದು ಸುಂದರ ಬದುಕನ್ನು ನಮ್ಮದಾಗಿಸಿಕೊಳ್ಳೋಣ ಎಂದು ಕನ್ನಡ ಚಲನಚಿತ್ರ ಸಾಹಿತಿ ಕವಿರಾಜ್ ಯಡೂರು ಯುವ ಸಮುದಾಯಕ್ಕೆ ಕರೆ ನೀಡಿದರು.
ಶಿವಮೊಗ್ಗ ಜಿಲ್ಲಾ ಪೊಲೀಸ್, ಕೌಶಲ್ಯಾಭಿವೃದ್ದಿ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಕುವೆಂಪು ವಿಶ್ವವಿದ್ಯಾಲಯ, ನೆಹರು ಯುವ ಕೇಂದ್ರ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ಸಮಾಜ ಒಗ್ಗೂಡಿ ಎದುರಿಸಬಹುದಾದಂತಹ ಆಪತ್ತು ಮಾದಕ ವ್ಯಸನ. ಪ್ರಸ್ತುತ ಶೇ.೩೦ ರಷ್ಟು ಯುವಜನತೆ ಮಾದಕ ವ್ಯಸನಕ್ಕೆ ತುತ್ತಾಗಿರುವ ಅಂಕಿಅಂಶ ಆಘಾತಕಾರಿಯಾಗಿದ್ದು, ಇದನ್ನು ತಡೆಯುವುದು ಅತ್ಯವಶ್ಯ. ಚಿಕಿತ್ಸೆಗಿಂತ ರೋಗ ಬಾರದಂತೆ ತಡೆಯುವುದು ಮುಖ್ಯ ಎಂಬಂತೆ ಯುವಜನತೆ ವಿವಿಧ ಮಾದಕ ದ್ರವ್ಯಗಳಿಗೆ ವ್ಯಸನಿಗಳಾಗದಂತೆ ಸಮುದಾಯದಲ್ಲಿ ಜಾಗೃತಿ ಹೆಚ್ಚಬೇಕು ಎಂದರು.

ಮಕ್ಕಳು ಅಥವಾ ಯುವ ಜನತೆ ಮಾಡುವ ಕೆಲಸಗಳು ಅವರ ತಂದೆ ತಾಯಿ, ಕುಟುಂಬಕ್ಕೆ ಒಳ್ಳೆಯ ಅಥವಾ ಕೆಟ್ಟ ಹೆಸರನ್ನು ತಂದು ಕೊಡುತ್ತದೆ. ಮೊದಲಿಗೆ ಮಾದಕ ಚಟಗಳು ಸ್ವರ್ಗದಂತೆ ಕಂಡರೂ ಹಂತ ಹಂತವಾಗಿ ವ್ಯಸನಿಯನ್ನು ಇದು ನರಕಕ್ಕೆ ತಳ್ಳುತ್ತದೆ. ಆದ್ದರಿಂದ ಯುವಜನತೆ ಯಾವುದೇ ದುಶ್ಚಟಗಳಿಗೆ ದಾಸರಾಗದೇ, ಜವಾಬ್ದಾರಿಯುತವಾಗಿ ನಡೆದುಕೊಂಡು ಪೋಷಕರಿಗೆ ಒಳ್ಳೆಯ ಹೆಸರನ್ನು ತರಬೇಕು. ಸಂಗೀತ, ಓದು, ಜ್ಞಾನ, ಗೆಳತನದಂತಹ ಉತ್ತಮ ಚಟಗಳನ್ನು ಬೆಳೆಸಿಕೊಳ್ಳಬೇಕು.

ಮನೋವೈದ್ಯರಾದ ಡಾ.ಅರವಿಂದ್ ಎಸ್.ಟಿ ಮಾತನಾಡಿ, ಮಾದಕ ವ್ಯಸನ ಎಂದರೇನು, ಯಾವೆಲ್ಲ ರೀತಿಯ ಮಾದಕ ವಸ್ತುಗಳನ್ನು ವ್ಯಸನಕ್ಕೆ ಬಳಸಲಾಗುತ್ತಿದೆ, ಮಾದಕ ವಸ್ತುಗಳ ಬಳಕೆ ನಿಧಾನವಾಗಿ ಆರಂಭವಾಗಿ ನಂತರ ವ್ಯಸನವಾಗಿ ಹೇಗೆ ಪರಿವರ್ತನೆಯಾಗುತ್ತದೆ ಎಂದು ವಿವರಿಸಿದ ಅವರು ಮಾದಕ ವ್ಯಸನವನ್ನು ಒಂದೇ ಬಾರಿಗೆ ಬಿಡಿಸಲು ಬರುವುದಿಲ್ಲ. ಅದು ರೋಗಿಗೆ ಮಾರಕ ಕೂಡ. ಆದ್ದರಿಂದ ಸರಿಯಾದ ಮನೋವೈದ್ಯಕೀಯ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆಯಿಂದ ವ್ಯಸನಮುಕ್ತಗೊಳಿಸಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀಪ್ರಸಾದ್ ಬಿ.ಎಂ ಮಾತನಾಡಿ, ಮಾದಕ ವ್ಯಸನದ ದುಷ್ಪರಿಣಾಮದಿಂದ ವಸ್ಯನಿ ಮಾತ್ರವಲ್ಲದೆ ಅವರ ತಂದೆ ತಾಯಿ, ಕುಟುಂಬ ಸೇರಿದಂತೆ ಇಡೀ ಸಮುದಾಯವೇ ನೋವು ಅನುಭವಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು, ಯುವಜನತೆ ಇದರಿಂದ ದೂರವಿರಬೇಕು. ಗೆಳೆಯರು ಮಾದಕ ವಸ್ತುಗಳ ಬಳಕೆ ಮಾಡುವಂತೆ ಹೇಳಿದರೆ, ಒತ್ತಾಯಿಸಿದರೆ ದೃಢವಾಗಿ ಅಲ್ಲಗಳೆಯಬೇಕು. ಗೆಳೆಯರು ಕೂಡ ತಮ್ಮಲ್ಲಿ ಯಾರಾದರೊಬ್ಬರು ಮಾದಕ ವ್ಯಸನಕ್ಕೆ ತುತ್ತಾಗುವುದು ಕಂಡು ಬಂದಲ್ಲಿ ದೊಡ್ಡವರಿಗೆ ತಿಳಿಸಬೇಕು ಎಂದು ಹೇಳಿದರು.

ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ರೇಖಾ ಗಿರೀಶ್ ಮಾತನಾಡಿ, ಹೆಣ್ಣುಮಕ್ಕಳು ಸುರಕ್ಷಿತವಾಗಿ ಇರುವ ಬಗ್ಗೆ, ಸುರಕ್ಷಿತ ಮೊಬೈಲ್ ಬಳಕೆ ಹಾಗೂ ಮಕ್ಕಳ ಸಹಾಯವಾಣಿ ಸಂಖ್ಯೆ ಕುರಿತು ಮಾಹಿತಿ ನೀಡಿದರು.
ಕುವೆಂಪು ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕ ಡಾ.ನಾಗರಾಜ್ ಪರಿಸರ, ಕೌಶಲ್ಯಾಭಿವೃದ್ದಿ ಅಧಿಕಾರಿ ಹೆಚ್.ಎಂ.ಸುರೇಶ್, ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆಟಿಕೆ, ಅಮೃತ್ ನೋನಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀನಿವಾಸ್, ಸಾಗರ ಉಪವಿಭಾಗದ ಡಿವೈಎಸ್‌ಪಿ ರೋಹನ್ ಜಗದೀಶ್ ಸ್ವಾಗತಿಸಿದರು, ಸಮನ್ವಯ ಕಾಶಿ ನಿರೂಪಿಸಿದರು.

ಗೆಳೆಯರಲ್ಲಿ ಯಾರಾದರೂ ಒಬ್ಬರು ಸಿಗರೇಟ್, ಕುಡಿತ ಅಥವಾ ಗಾಂಜಾ ಇತರೆ ಡ್ರಗ್ಸ್‌ಗೆ ಒಳಗಾಗುತ್ತಿದ್ದಾರೆಂಬ ಸುಳಿವು ಸಿಕ್ಕಲ್ಲಿ ಅವರ ತಂದೆ, ತಾಯಿ ಅಥವಾ ಅವರ ಪ್ರಾಥಮಿಕ ಸಂಪರ್ಕಿತರಿಗೆ ತಿಳಿಸುವ ಮೂಲಕ ಗೆಳಯನ ಜೀವನ ಉಳಿಸಲು ಸಹಾಯ ಮಾಡಬೇಕು. ಜೀವನದಲ್ಲಿ ದೊಡ್ಡದಾಗಿ ಸಾಧಿಸಿದರೆ ಮಾತ್ರ ಸಾಧನೆಯಲ್ಲ. ಉತ್ತಮ ಜೀವನ ನಿರ್ವಹಣೆ ಕೂಡ ಒಂದು ದೊಡ್ಡ ಸಾಧನೆಯಾಗಿದ್ದು ಮಕ್ಕಳು ಯಾವುದೇ ದುಶ್ಚಟಕ್ಕೆ ಬಲಿಯಾಗದೇ ಬದುಕನ್ನು ಸುಂದರವಾಗಿಸಿಕೊಳ್ಳಬೇಕೆಂದರು
-ಕವಿರಾಜ್, ಚಿತ್ರ ಸಾಹಿತಿ

Ad Widget

Related posts

ಸಮರ ಕಾಲದಲ್ಲಿ ಮಂಕು ಬಡಿದ ಸಾಗರ ಕಾಂಗ್ರೆಸ್ , ಕಾಗೋಡು ತಿಮ್ಮಪ್ಪರ ನಿರ್ಧಾರವೇ ಕ್ಷೇತ್ರಕ್ಕೆ ದಿಕ್ಸೂಚಿ..

Malenadu Mirror Desk

ಭದ್ರಾವತಿಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತನ ಮೇಲೆ ಹಲ್ಲೆ

Malenadu Mirror Desk

ಸಿಗಂದೂರು ಅದ್ಧೂರಿ ಜಾತ್ರೆಗೆ ತೆರೆ
ಗಾನಸುಧೆಯಲ್ಲಿ ಮಿಂದೆದ್ದ ಹಿನ್ನೀರು ಭಾಗದ ಭಕ್ತರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.