ರೌಡಿ ಹಂದಿ ಅಣ್ಣಿ ಕೊಲೆಯ ಆರೋಪಿಗಳ ಬೆನ್ನು ಹತ್ತಿರುವ ಪೊಲೀಸರಿಗೆ ಹಲವು ಮಾಹಿತಿಗಳು ಲಭ್ಯವಾಗಿದ್ದು, ಬೆಂಗಳೂರಿಂದ ಹುಡುಗರನ್ನು ಕರೆಸಿದ್ದರೂ, ಕೊಲೆಗೆ ಲೀಡ್ ನೀಡಿದ್ದು ಸ್ಥಳೀಯ ಹುಡುಗರೇ ಎಂಬ ಮಾಹಿತಿ ಇದೆ ಎನ್ನಲಾಗಿದೆ.
ರೌಡಿಸಂ ಬಿಡಬೇಕೆಂದು ತೀರ್ಮಾನ ಮಾಡಿದ್ದ ಅಣ್ಣಿ ಹಳೇ ದ್ವೇಷಕ್ಕೆ ಬಲಿಯಾಗಿದ್ದಾನೆ ಮತ್ತು ಈ ಕೊಲೆಯ ಹಿಂದೆ ಒಂದು ಸಿಂಡಿಕೇಟ್ ಕೆಲಸ ಮಾಡಿರಬಹುದು ಎಂಬ ಅನುಮಾನ ಪೊಲೀಸರಿಗಿದೆ. ಶತ್ರುವಿನ ಶತ್ರು ಮಿತ್ರ ಎಂಬಂತೆ ಹಂದಿ ಅಣ್ಣಿಯನ್ನು ಮುಗಿಸಲು ಆತನ ವಿರೋಧಿ ಬಣಗಳು ಒಂದಾಗಿರುವ ಸಾಧ್ಯತೆ ಇದೆಯಾದರೂ ಅಧಿಕಾರಿಗಳು ಅದನ್ನು ನಿಖರವಾಗಿ ಹೇಳುತ್ತಿಲ್ಲ.
ಬಂಕ್ ಬಾಲು ಶಿಷ್ಯನ ಕೈ:
೨೦೧೮ ರಲ್ಲಿ ಶಿವಮೊಗ್ಗದ ಹರಿಗೆ ಸಮೀಪ ಕೊಲೆಯಾಗಿದ್ದ ಕುಖ್ಯಾತ ರೌಡಿ ಬಂಕ್ ಬಾಲುವನ್ನು ಕೊಲೆ ಮಾಡಿದ್ದ ತಂಡಕ್ಕೆ ರೂಪು ರೇಷೆ ಹಾಕಿದ್ದವನೇ ಹಂದಿ ಅಣ್ಣಿ ಎಂದು ಗೊತ್ತಾಗಿತ್ತು. ಅಂದು ಬಾಲು ಶವಸಂಸ್ಕಾರದಲ್ಲಿ ನಿಮ್ಮ ಸಾವಿಗೆ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಶಪಥ ಮಾಡಿದ್ದ ಕಾಡು ಕಾರ್ತಿ ಎಂಬಾತನೇ ಅಣ್ಣಿ ಕೊಲೆಯಲ್ಲಿ ಮುಂಚೂಣಿಯಲ್ಲಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ.
ಬಾಲು ಕೊಲೆಯಲ್ಲಿ ಅಂಬು ಅಲಿಯಾಸ್ ಅನಿಲ್ ಎಂಬಾತ ಪ್ರಮುಖನಾಗಿದ್ದು, ಆತ ಜೈಲಿಂದ ಹೊರ ಬಂದ ಮೇಲೆ ಮುಗಿಸಬೇಕು ಎಂದು ಕಾದಿದ್ದ ಕಾರ್ತಿ ತಂಡಕ್ಕೆ ಆತ ಸಿಗಲಿಲ್ಲ. ಆತ ಮಂಗಳೂರು ಸೇರಿಕೊಂಡ ಮೇಲೆ ತಮ್ಮ ಗುರುವನ್ನು ಮುಗಿಸಲು ಮಾಸ್ಟರ್ ಪ್ಲಾನ್ ಹಾಕಿದ್ದ ಅಣ್ಣಿಯನ್ನು ಗುರಿಯಾಗಿಸಿಕೊಳ್ಳಲಾಗಿತ್ತು ಎನ್ನಲಾಗಿದೆ.
ಉಳಿದವರು ಸಾಥ್:
ಹಂದಿ ಅಣ್ಣಿಯನ್ನು ಮುಗಿಸಲು ಲವ-ಕುಶರ ಗ್ಯಾಂಗಿನಲ್ಲಿದ್ದ ರಜನಿ ಗ್ಯಾಂಗ್ ಹಾಗೂ ಮಾರ್ಕೆಟ್ ಲೋಕಿ ಗ್ಯಾಂಗಿನ ಸಹಕಾರವೂ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಆದರೆ ಅದಕ್ಕಿನ್ನು ಸ್ಪಷ್ಟ ಪುರಾವೆಗಳು ಪೋಲಿಸರಿಗೆ ಲಭ್ಯವಾಗಬೇಕಿದೆ.
ಹದಿನೈದು ದಿನಗಳಿಂದ ಸ್ಕೆಚ್:
ಅಣ್ಣಿ ಕೊಲೆಗೆ ಹದಿನೈದು ದಿನಗಳಿಂದ ಸ್ಕೆಚ್ ಹಾಕಲಾಗಿತ್ತು. ಗುರುವಾರ ಕೊಲೆ ಕೇಸೊಂದರಲ್ಲಿ ಸಾಕ್ಷಿಗೆ ನ್ಯಾಯಾಲಯಕ್ಕೆ ಬರಬೇಕಿದ್ದ ಅಣ್ಣಿಯನ್ನು ಆ ಮಾರ್ಗದಲ್ಲಿ ಮುಗಿಸುವ ಸಂಚು ನಡೆದಿತ್ತು. ಆದರೆ ಅಣ್ಣಿ ಕೋರ್ಟ್‌ಗೆ ಹಾಜರಾಗಿಲ್ಲ. ಹೀಗೆ ಹೊಂಚು ಹಾಕುತಿದ್ದ ದುಷ್ಕರ್ಮಿಗಳ ತಂಡ ಬೈಕ್‌ಗೆ ಡಿಕ್ಕಿ ಹೊಡೆಸಿ ನಂತರ ಅಟ್ಟಾಡಿಸಿಕೊಂಡು ಹತ್ಯೆ ಮಾಡಿದೆ.
ಫೈನಾನ್ಸ್ ಮಾಡಿದ್ಯಾರು ?
ಬೆಂಗಳೂರಿನಿಂದ ಹುಡುಗರನ್ನು ಕರೆಸಿ ಹೊಂಚು ಹಾಕಿ ಕೊಲೆ ಮಾಡಿದ್ದ ಆರೋಪಿಗಳಿಗೆ ಫೈನಾನ್ಸ್ ಮಾಡಿದ್ದು, ಯಾರು ಎಂಬುದು ತನಿಖೆಯಿಂದ ಹೊರಬರಬೇಕಿದೆ. ಶಿವಮೊಗ್ಗದಲ್ಲಿ ನಡೆದಿದ್ದ ಲ್ಯಾಂಡ್ ಡೀಲ್‌ನಲ್ಲಿ ಅಣ್ಣಿಯಿಂದ ನಷ್ಟ ಅನುಭವಿಸಿದ್ದ ವ್ಯಕ್ತಿಯೊಬ್ಬರು ಈ ಪ್ರಕರಣದಲ್ಲಿ ಫೈನಾನ್ಸ್ ಮಾಡಿರಬಹುದೇ ಎಂಬ ಅನುಮಾನವೂ ಇದೆ. ಈ ನೆಲೆಯಲ್ಲಿಯೂ ತನಿಖೆ ಸಾಗಿದೆ. ಆದರೆ ಅಣ್ಣಿ ಕೊಲೆಯಲ್ಲಿ ಜೈಲಲ್ಲಿರುವ ಶಿವಮೊಗ್ಗದ ರೌಡಿಗಳು, ರಿಯಲ್ ಎಸ್ಟೇಟ್ ದಂಧೆ ಮಾಡುವ ರೌಡಿಗಳು ಹಾಗೂ ಅವಳಿ ಸೋದರರಾದ ಲವ-ಕುಶ ಸಹೋದರರ ಶಿಷ್ಯರು ಬಂಕ್ ಬಾಲು ಶಿಷ್ಯರಿಗೆ ಸಾಥ್ ನೀಡಿ ಅಣ್ಣಿಯನ್ನು ಮುಗಿಸಿರುವ ಮಾಹಿತಿ ಲಭ್ಯವಾಗಿದ್ದು, ಅಣ್ಣಿ ವಿರೋಧಿಗಳು ಸಿಂಡಿಕೇಟ್ ಆಗಿ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಪೊಲೀಸರು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದು, ಇನ್ನಷ್ಟೆ ಮಾಹಿತಿ ಹೊರ ಬರಬೇಕಿದೆ.