ಸೊರಬ,ನ.೧ : ಕನ್ನಡ ಕೇವಲ ಭಾಷೆ ಅಲ್ಲ. ಅದು ಬದುಕಿನ ಧರ್ಮವಾಗಿ, ಜನಾಂಗ ಹಾಗೂ ಅಂತಸ್ತು, ಪ್ರಾದೇಶಿಕ ಭಿನ್ನತೆಗೂ ಮೀರಿದ ಶ್ರೀಮಂತ ಭಾಷೆಗೆ ಸಾಕ್ಷಿಯಾಗಿದೆ ಎಂದು ಶಾಸಕ ಕುಮಾರ ಬಂಗಾರಪ್ಪ ಹೇಳಿದರು.
ಪಟ್ಟಣದ ರಾಜ್ ರಂಗ ಮಂದಿರದಲ್ಲಿ ತಾಲ್ಲೂಕು ಆಡಳಿತ, ಪುರಸಭೆ, ಸೊರಬ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಓದು ಮತ್ತು ಸಂಭಾಷಣೆ ಮೂಲಕ ಜ್ಞಾನ ಪಡೆದುಕೊಳ್ಳಲು ಮಾತೃ ಭಾಷೆ ಕಾರಣವಾಗಿದ್ದು, ನಮ್ಮ ಬದುಕು, ಜ್ಞಾನ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಕನ್ನಡವನ್ನು ಉಳಿಸಿ ಬೆಳೆಸುವುದರ ಜೊತೆಗೆ ಅನ್ಯ ಭಾಷೆಯನ್ನು ಪ್ರೀತಿಸಿ ಗೌರವಿಸುವುದು ನಮ್ಮ ಕರ್ತವ್ಯ ಆಗಬೇಕಿದೆ ಎಂದ ಅವರು, ಕನ್ನಡತನ ಮನೆ ಯಿಂದಲೇ ಪ್ರಾರಂಭವಾಗಬೇಕು. ನಮ್ಮ ಮಕ್ಕಳು ಟಿ.ವಿ. ಅಥವಾ ಮೊಬೈಲ್‌ಗಳಿಗೆ ದಾಸರಾಗುವುದನ್ನು ತಪ್ಪಿಸಿ, ಕನ್ನಡವನ್ನು ಸುಲಲಿತವಾಗಿ ಮಾತನಾಡಲು ಬಿಡಬೇಕು. ಅಲ್ಲದೇ ಕನ್ನಡ ಪುಸ್ತಕ ಕೊಳ್ಳುವ ಮತ್ತು ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಕವಿಗಳ ಹಾಗೂ ಸಾಹಿತಿಗಳ ಪುಸ್ತಕಗಳನ್ನು ಓದುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ತಾಲ್ಲೂಕು ದಂಡಾಧಿಕಾರಿ ಮೋಹನ ಭಸ್ಮೆ ಕನ್ನಡ ಧ್ವಜಾರೋಹಣ ನೆರವೇರಿಸಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ. ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಲಿಂಗಯ್ಯ, ಪುರಸಭಾ ಮುಖ್ಯಾಧಿಕಾರಿ ಗಿರೀಶ್, ಪುರಸಭಾಧ್ಯಕ್ಷ ಈರೇಶ್ ಮೇಸ್ತ್ರಿ, ಉಪಾಧ್ಯಕ್ಷ ಮಧುರಾಯ ಜಿ. ಶೇಟ್, ಸದಸ್ಯರಾದ ಎಂ.ಡಿ. ಉಮೇಶ, ಪ್ರಭು ಮೇಸ್ತ್ರಿ, ನಟರಾಜ ಉಪ್ಪಿನ, ಪ್ರೇಮಾ ಟೋಕಪ್ಪ, ಆಫ್ರಿನ್ ಬಾನು, ಜಯಲಕ್ಷ್ಮೀ, ಕ.ರಾ.ವೇ. ಅಧ್ಯಕ್ಷ ಸಿ.ಕೆ. ಬಲೀಂದ್ರಪ್ಪ ಮೊದಲಾದವರು ಹಾಜರಿದ್ದರು.
ಸೊರಬ ತಾಲ್ಲೂಕು ಕಲೆ, ಸಾಹಿತ್ಯ, ಬರಹ, ಶಿಕ್ಷಣ ಕುಶಲಕರ್ಮಿಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ದಾಖಲಾದ ಪ್ರಗತಿ ಕಂಡಿದ್ದು, ಸಾಮಾಜಿಕ, ಸಾಂಸ್ಕೃತಿಕ ಪ್ರಜ್ಞೆ ಜೊತೆಗೆ ಧಾರ್ಮಿಕವಾಗಿಯೂ ಸುಸಂಸ್ಕೃತ ಮನಸ್ಸುಗಳನ್ನು ಹೊಂದಿರುವ ನೆಲ ಎಂದಿಗೂ ಜನಮಾನಸದಲ್ಲಿ ಉಳಿದಿದೆ
– ಕುಮಾರ ಬಂಗಾರಪ್ಪ
ReplyForward |