ಶಿವಮೊಗ್ಗ: ವಿಮಾನ ನಿಲ್ದಾಣವನ್ನು ಫೆ. ೧೨೨ರಂದು ಉದ್ಘಾಟಿಸಲು ನಿರ್ಧರಿಸಲಾಗಿದೆ. ಅಂದು ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಬರಲಿದ್ದು, ಅಲ್ಲಿಂದ ಶಿವಮೊಗ್ಗಕ್ಕೆ ಬಂದು ವಿಮಾನ ನಿಲ್ದಾಣ ಉದ್ಘಾಟಿಸುವರು ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ.
ಕರ್ನಾಟಕ ಸಂಘದ ಕಾರ್‍ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಅವರು ಈ ಬಗ್ಗೆ ಮಾಹಿತಿ ನೀಡಿದರು. ವಿಮಾನ ನಿಲ್ದಾಣ ಶಿವಮೊಗ್ಗ ಜನರ ಬಹುದಿನದ ಕನಸಾಗಿದೆ. ಅದು ಈಗ ನನಸಾಗುವ ಸಮಯ ಬಂದಿದೆ. ನಿಲ್ದಾಣದ ಇಂಟಿರಿಯರ್ ರನ್ ವೇ, ಎಟಿಆರ್ ಟವರ್ ಕಾಮಗಾರಿ ಮುಗಿದಿದೆ. ವಿಮಾನ ಹಾರಾಟಕ್ಕೆ ೫೦ ರೀತಿಯ ಪರವಾನಗಿ ಬೇಕು. ಇವೆಲ್ಲವನ್ನೂ ಪಡೆಯಲಾಗುತ್ತಿದೆ. ಎಲ್ಲಕ್ಕಿಂತ ಅವಶ್ಯವಾಗಿ ಪರಿಸರ ಇಲಾಖೆಯ ಅನುಮೋದನೆ ಪಡೆಯಬೇಕಿದೆ. ಸಂಸತ್ ಅಧಿವೇಶನ ವೇಳೆ ಡಿಜಿ ಸಿಎ ಮತ್ತು ಪರಿಸರ ಸಮಿತಿಯ ಅಧ್ಯಕ್ಷರನ್ನು ಒಟ್ಟಿಗೆ ಕರೆದು ಮಾತನಾಡಿದ್ದು, ಶೀಘ್ರ ಪರಿಸರ ಇಲಾಖೆಯ ಒಪ್ಪಿಗೆ ಪಡೆಯಲಾಗುವುದು ಎಂದರು.
ಎಲ್ಲಾ ಏರ್ ವೇಸ್ ಕಂಪನಿಯ ಮುಖ್ಯಸ್ಥರನ್ನು ಭೇಟಿ ಮಾಡಿದ್ದು, ಅವರಿಗೆ ಶಿವಮೊಗ್ಗಕ್ಕೆ ವಿಮಾನ ಸೌಲಭ್ಯ ಕಲ್ಪಿಸಲು ಕೋರಲಾಗಿದೆ. ನಾಲ್ಕು ಕಂಪನಿಗಳು ವಿಮಾನ ಸೌಲಭ್ಯಕ್ಕೆ ಮುಂದೆ ಬಂದಿವೆ. ಈ ತಿಂಗಳ ಕೊನೆಯೊಳಗೆ ಎಲ್ಲಾ ಇಲಾಖೆಯ ಒಪ್ಪಿಗೆ ಸಿಗಲಿದೆ ಎಂದರು.
ವಿಮಾನ ರಾತ್ರಿ ಇಳಿಯಲು ಸಹ ಒಪ್ಪಿಗೆ ಸಿಗಬೇಕಿದೆ. ಇದು ತಡವಾದರೂ ನಡೆಯುತ್ತದೆ. ಆದರೆ ಪ್ರಮುಖವಾಗಿ ಯಾವೆಲ್ಲ ಒಪ್ಪಿಗೆ ಬೇಕೋ ಅದನ್ನು ಪಡೆಯುವ ಕೆಲಸ ನಡೆಯುತ್ತಿದೆ. ಆನಂತರ ಉದ್ಘಾಟನೆ ನಡೆಯಲಿದೆ. ನಿಲ್ದಾಣದ ನಾಮಕರಣಕ್ಕಿಂತ ಉದ್ಘಾಟನೆಗೆ ಮಹತ್ವ ಕೊಡಲಾಗುವುದು ವಿಮಾನ ನಿಲ್ದಾಣ ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ ಎಂದು ತಿಳಿಸಿದರು.