Malenadu Mitra
ರಾಜ್ಯ ಶಿವಮೊಗ್ಗ

ಹಿಂದುಳಿದ ಜಾತಿಗಳ ಮೀಸಲಾತಿ, ಮತ್ತಿತರ ಬೇಡಿಕೆಗಳಿಗಾಗಿ ಹಕ್ಕೊತ್ತಾಯ, ಶಿವಮೊಗ್ಗದಲ್ಲಿ ಜ. 22 ರಂದು ಬೃಹತ್ ಸಮಾವೇಶ: ಡಾ.ರಾಮಪ್ಪ

ಸಾಗರ, ಜ.10- ಈಡಿಗ, ಬಿಲ್ಲವ, ನಾಮಧಾರಿ ಹಾಗೂ ನಾರಾಯಣಗುರು ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜನವರಿ 22 ರಂದು ಶಿವಮೊಗ್ಗದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಸಲಾಗುವುದು ಎಂದು ನಾರಾಯಣಗುರು ಸಮಾಜ ಹಿತರಕ್ಷಣಾ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಸಿಗಂದೂರು ಧರ್ಮದರ್ಶಿ ಡಾ.ರಾಮಪ್ಪ ಹೇಳಿದರು.
ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಹಿಂದುಳಿದ ಜಾತಿಗಳ ೨-ಎ ಮೀಸಲಾತಿ ರಕ್ಷಣೆ ಮತ್ತು ಸಮಾಜದ ಅಭಿವೃದ್ಧಿಗಾಗಿ ನಿಗಮ ಮಂಡಳಿ ರಚನೆ ಹಾಗೂ ಶರಾವತಿ ಮತ್ತು ಇತರೆ ಮುಳುಗಡೆ ಸಂತ್ರಸ್ತರ ಪುನರ್ ವಸತಿಗೆ ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ಪಂಚಮಸಾಲಿ ಲಿಂಗಾಯಿತ ಸೇರಿದಂತೆ ಬೇರೆ ಬೇರೆ ಸಮುದಾಯದವರು ಮೀಸಲಾತಿಗೆ ಒತ್ತಾಯಿಸುತ್ತಿದ್ದಾರೆ. ಆದರೆ ಸರ್ಕಾರದ ಮೀಸಲಾತಿ ಧೋರಣೆಯಿಂದ ನಮ್ಮ ಸಮಾಜಕ್ಕೆ ಇರುವ ಮೀಸಲಾತಿ ಕೈ ತಪ್ಪುವ ಆತಂಕ ಎದುರಾಗಿದೆ. ಹಿಂದುಳಿದ ಜಾತಿಗಳ ಸಮುದಾಯದ ೨ ಎ ಮೀಸಲಾತಿಯು ಇಂದು ಸರ್ಕಾರದ ಅವೈಜ್ಞಾನಿಕ ತಿಯಿಂದ ಕೈತಪ್ಪುವ ಸಾಧ್ಯತೆ ಇದೆ. ಇದಕ್ಕಾಗಿ ನಾವು ಜಾಗೃತರಾಗಬೇಕಿದೆ. ನಮ್ಮ ಹಕ್ಕು ರಕ್ಷಣೆಗಾಗಿ ಹೋರಾಟ ಅನಿವಾರ್ಯ ಎಂದರು.

ಪ್ರಮುಖವಾಗಿ ನಮ್ಮ ಐದು ಬೇಡಿಕೆಗಳಿದ್ದು, ಅವುಗಳನ್ನು ಸರ್ಕಾರ ಈಡೇರಿಸಬೇಕು ಎಂಬುದು ನಮ್ಮ ಸಮಾಜದ ಆಗ್ರಹ. ಪ್ರವರ್ಗ ೨-ಎ ಮೀಸಲಾತಿ ರಕ್ಷಿಸಿ, ಕಾಂತರಾಜು ಆಯೋಗದ ವರದಿಯನ್ನು ಜಾರಿಗೊಳಿಸಬೇಕು. ಸಮಾಜದ ಬಂಧುಗಳು ಕುಲಕಸುಬನ್ನು ಕಳೆದುಕೊಂಡಿದ್ದು, ಪರ್ಯಾಯ ವ್ಯವಸ್ಥೆಯಾಗಬೇಕು. ಸಮಾಜದ ಅಭಿವೃದ್ಧಿಗಾಗಿ ನಾರಾಯಣಗುರು ನಿಗಮ ರಚನೆಗೆ ಒತ್ತಾಯಿಸಿದ್ದರಿಂದ ಅದರ ಘೋಷಣೆಯಾಗಿದೆ. ಆದರೆ ಇನ್ನೂ ಸರ್ಕಾರಿ ಆದೇಶ ಹೊರಬಿದ್ದಿಲ್ಲ. ಅಧ್ಯಕ್ಷರ ನೇಮಕವಾಗಿಲ್ಲ. ನಿಗಮ ರಚಿಸಿ ಕನಿಷ್ಠ ರೂ. ೫೦೦ ಕೋಟಿ ಅನುದಾನ ಮೀಸಲಿಡಬೇಕು ಎಂದರು.

ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರಿಡಬೇಕು. ಬಂಗಾರಪ್ಪನವರು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ ಅಭಿವೃದ್ಧಿ ಹರಿಕಾರರು. ಅವರ ಹೆಸರನ್ನಿಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ.
ಜನವರಿ ೨೨ ರಂದು ೧೦ ಗಂಟೆಗೆ ಸಮಾಜದ ಮೆರವಣಿಗೆಯು ಜಿಲ್ಲಾ ಆರ್ಯ ಈಡಿಗರ ಸಂಘದ ಸಭಾಭವನದಿಂದ ಹೊರಟು ಬಸ್ ಲ್ದಾಣದ ಮೂಲಕ ಬಿ.ಎಚ್.ರಸ್ತೆಯ ಮಾರ್ಗವಾಗಿ ಸರ್ಕಾರಿ ಪದವಿಪೂರ್ವ ಕಾಲೇಜು ತಲುಪುವುದು. ೧೧ ಗಂಟೆಗೆ ಮೀನಾಕ್ಷಿ ಭವನದ ಎದುರಿನ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ವೇದಿಕೆ ತಾಲ್ಲೂಕು ಅಧ್ಯಕ್ಷ ಚಂದ್ರ್ರಶೇಖರ ಸೂರಗುಪ್ಪೆ, ಸಮಾಜದ ಪ್ರಮುಖರಾದ ಟಿ.ವಿ.ಪಾಂಡುರಂಗ, ಎಚ್.ಎನ್.ದಿವಾಕರ, ಕಲ್ಸೆ ಚಂದ್ರಪ್ಪ, ಪರಮೇಶ್ವರಪ್ಪ, ಶ್ರೀಧರಮೂರ್ತಿ, ಲಿಂಗರಾಜ್ ಆರೋಡಿ, ಗುರು ಶಿರವಾಳ, ಷಣ್ಮುಖ, ಚೇತನರಾಜ್ ಕಣ್ಣೂರು, ಆನಂದ ಬಿಳಿಸಿರಿ, ಚಂದ್ರಕಾಂತ್, ಶಿವಪ್ಪ, ಎಂ.ಹಾಲಪ್ಪ, ಟಿ.ರಘುಪತಿ, ಹೊದಲ ಶಿವು, ಪ್ರಭಾವತಿ, ಮಂಜುಳಾ ಪ್ರಭಾಕರ, ಜಯಲಕ್ಷ್ಮಿ ನಾರಾಯಣಪ್ಪ ಮತ್ತಿತರರು ಹಾಜರಿದ್ದರು.

ಮಲೆನಾಡು ಭಾಗದಲ್ಲಿ ನೀರಾವರಿ, ವಿದ್ಯುತ್‌ಗಾಗಿ ಶರಾವತಿ, ಸಾವೆಹಕ್ಲು ಇನ್ನಿತರೆ ಮುಳುಗಡೆ ಪ್ರದೇಶದಿಂದ ನಮ್ಮ ಸಮಾಜದವರು ಸಂತ್ರಸ್ತರಾಗಿದ್ದಾರೆ. ಅವರಿಗೆ ಪುನರ್ ವಸತಿ ಕಲ್ಪಿಸಬೇಕು. ಈ ಬಗ್ಗೆ ಸಾಕಷ್ಟು ಹೋರಾಟ ನಡೆಯುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದೆ. ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನವು ಸಾರ್ವಜನಿಕ ದೇವಸ್ಥಾನ ಆಗುವ ಮೊದಲು ರಾಮಪ್ಪನವರ ಮನೆ ದೇವರಾಗಿತ್ತು. ಈಗ ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ ಅರಣ್ಯಭೂಮಿ ಒತ್ತುವರಿ ನೆಪದಲ್ಲಿ ಸರ್ಕಾರ ದೇವಸ್ಥಾನದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇದನ್ನು ನಿಲ್ಲಿಸಬೇಕು.

ಸತ್ಯಜಿತ್ ಸುರತ್ಕಲ್

Ad Widget

Related posts

ಚಿತ್ತಾರ ಕಲೆಗೆ ಸರಕಾರದಿಂದ ನೆರವು:ಭರವಸೆ

Malenadu Mirror Desk

ರೈತರ ಮೇಲಿನ ದಾಳಿ: ಕಿಸಾನ್ ಮೋರ್ಚಾ ಪ್ರತಿಭಟನೆ

Malenadu Mirror Desk

ಮೆಗ್ಗಾನ್ ಆಸ್ಪತ್ರೆಯಲ್ಲಿ ಮುರುಘಾ ಶರಣರಿಗೆ ಚಿಕಿತ್ಸೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.