ಆದರ್ಶ ರಾಜಕಾರಣಿ ಕಡಿದಾಳು ಮಂಜಪ್ಪ, ಮಾದರಿ ರಾಜಕಾರಣಿ, ಹೋರಾಟಗಾರ ಶಾಂತವೇರಿ ಗೋಪಾಲಗೌಡರ ತೀರ್ಥಹಳ್ಳಿ ಕ್ಷೇತ್ರದಲ್ಲಿ ಮುಂಬರುವ ವಿಧಾನ ಸಭೆ ಚುನಾವಣೆ ಒಂದು ರೀತಿಯ ಸೈದ್ಧಾಂತಿಕ ಸಂಘರ್ಷಕ್ಕೆ ಕಾರಣವಾಗುವ ಎಲ್ಲಾ ಲಕ್ಷಣಗಳಿವೆ. ಈ ಚುನಾವಣೆಯೂ ಮೂವರು ನಾಯಕರ ನಡುವೆಯೇ ಗಿರಕಿಹೊಡೆಯಲಿದೆ. ಕಾಂಗ್ರೆಸ್‌ನಲ್ಲಿ ಟಿಕೆಟ್ ಯಾರಿಗೇ ಸಿಗಲಿ ಕಣದ ಪ್ರತಿಷ್ಠೆಯಂತೂ ಹೆಚ್ಚಲಿದೆ.
ಒಂದು ಕಾಲದಲ್ಲಿ ಬುದ್ದಿವಂತರ ಮತಕ್ಷೇತ್ರವೆಂದು ಹೇಳುತಿದ್ದ ತೀರ್ಥಹಳ್ಳಿ ವಿಧಾನ ಸಭೆ ಕ್ಷೇತ್ರದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಕುತೂಹಲ ಕೆರಳಿಸಲಿದ್ದು, ಪುರಾತನ ಪಕ್ಷ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಇಬ್ಬರು ನಾಯಕರ ನಡುವೆ ತೀವ್ರ ಪೈಪೋಟಿ ಮುಂದುವರಿದಿದೆ.
ಸಜ್ಜನ ರಾಜಕಾರಣಿ ಎಂದೇ ಹೆಸರಾಗಿರುವ ಕಿಮ್ಮನೆ ರತ್ನಾಕರ್ ಮತ್ತು ಸಹಕಾರ ರತ್ನ ಆರ್.ಎಂ.ಮಂಜುನಾಥ್ ಗೌಡ ಅವರಿಬ್ಬರೂ ಕಾಂಗ್ರೆಸ್‌ನ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ೨೦೧೩ ರಲ್ಲಿ ಕೆಜೆಪಿ,೨೦೧೮ ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವಿನ ಹತ್ತಿರಕ್ಕೆ ಹೋಗಿ ಬಂದಿದ್ದ ಮಂಜುನಾಥ್ ಗೌಡರು ಈಗ ಕಾಂಗ್ರೆಸ್‌ನಲ್ಲಿ ಹೇಗಾದರೂ ಸರಿ ಪಕ್ಷದ ಉಮೇದುವಾರಿಕೆ ಪಡೆಯಬೇಕೆಂಬ ಇರಾದೆಯಲ್ಲಿದ್ದಾರೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೈದ್ಧಾಂತಿಕ ಹೋರಾಟಗಾರರು. ಸಾರ್ವಜನಿಕ ಕ್ಷೇತ್ರಕ್ಕೆ ಬಂದಾಗಿಂದ ಬಿಜೆಪಿಯನ್ನು ವಿರೋಧ ಮಾಡಿಕೊಂಡು ಬಂದವರು. ಮೂರು ಬಾರಿ ಶಾಸಕರಾಗಿ ಒಮ್ಮೆ ಸಚಿವರಾದವರು. ರಾಜ್ಯ ರಾಜಕಾರಣದಲ್ಲಿ ಕ್ಲೀನ್ ಇಮೇಜ್ ಹೊಂದಿರುವ ಅವರು ತಮಗೇ ಪಕ್ಷ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ. ಅರ್ಹತೆ ಇದ್ದರೆ ನನಗೆ ಕೊಡಿ ಎಂಬ ಧೋರಣೆ ಉಳ್ಳ ಅವರು, ಟಿಕೆಟ್‌ಗಾಗಿ ನಾಯಕರ ಮನೆ ಬಾಗಿಲು ಕಾಯುವವರಲ್ಲ ಎಂಬ ಮಾತು ಪಕ್ಷದ ವಲಯದಲ್ಲಿಯೇ ಇದೆ.
ಬಹಿರಂಗ ಕದನಕ್ಕೆ ತೆರೆ?
೨೦೧೩ ರ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ಸಂದರ್ಭ ಕೆಜೆಪಿ ಪ್ರತಿನಿಧಿಸಿದ್ದ ಮಂಜುನಾಥ್ ಗೌಡ ಅವರು, ಕೇವಲ ೧೨೦೦ ಮತಗಳ ಅಂತರದಿಂದ ಕಿಮ್ಮನೆ ಎದುರು ಸೋತಿದ್ದರು. ೨೦೧೮ ರಲ್ಲಿಯೂ ಎದುರಾಳಿಯಾಗಿದ್ದ ಮಂಜುನಾಥ ಗೌಡರನ್ನು ಕಿಮ್ಮನೆ ರತ್ನಾಕರ್ ಅವರು ಸಾಂಪ್ರದಾಯಕ ಎದುರಾಳಿ ಆರಗ ಜ್ಞಾನೇಂದ್ರ ಅವರಷ್ಟೇ ವಿರೋಧ ಮಾಡುತ್ತಿದ್ದಾರೆ. ಈಗ ಈ ಇಬ್ಬರೂ ನಾಯಕರು ಒಂದೇ ಪಕ್ಷದಲ್ಲಿದ್ದಾರೆ. ತೀರ್ಥಹಳ್ಳಿ ಕಾಂಗ್ರೆಸ್‌ನಲ್ಲಿ ಈ ಇಬ್ಬರದೇ ಎರಡು ಬಣಗಳಾಗಿದ್ದು, ಪ್ರತ್ಯೇಕ ಕಾರ್ಯಕ್ರಮ, ಹೋರಾಟಗಳನ್ನು ಮಾಡಿದ್ದರು. ಪಕ್ಷದ ನಾಯಕತ್ವಕ್ಕೆ ಮುಜುಗರವಾಗುವಂತೆ ಪರಸ್ಪರ ಹೇಳಿಕೆ ನೀಡುತ್ತಿದ್ದರು.
ಹಲವು ಕಡೆ ಸುತ್ತಿ ಬಂದಿರಬಹುದು ಆದರೆ ಕಾಂಗ್ರೆಸ್‌ನಲ್ಲಿ ಕಿಮ್ಮನೆ ಅವರಿಗಿಂತ ನಾನೇ ಸೀನಿಯರ್ ಎಂದು ಹೇಳುವ ಮಂಜುನಾಥ ಗೌಡರು, ಕಿಮ್ಮನೆಯವರನ್ನು ಬಹಿರಂಗವಾಗಿಯೇ ಟೀಕಿಸಿದ್ದರು. ಚುನಾವಣೆ ಹೊತ್ತಲ್ಲಿ ಹಾದಿರಂಪ ಬೇಡ ಎಂದು ಇಬ್ಬರಿಗೂ ಹೇಳಿರುವ ಕಾಂಗ್ರೆಸ್ ನಾಯಕರು ಇಬ್ಬರ ನಡುವಿನ ಬಹಿರಂಗ ವಾಗ್ವಾದಕ್ಕೆ ತೆರೆ ಎಳೆದಿದ್ದಾರೆ.
ಯಾರು ಪ್ರಭಾವ ಬೀರುವರು?
ಇಬ್ಬರು ಆಕಾಂಕ್ಷಿಗಳ ನಡುವೆ ಯಾರು ಟಿಕೆಟ್ ತಂದರೂ ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ ಎಂದು ಉಭಯ ಮುಖಂಡರುಗಳ ಬೆಂಬಲಿಗರು ಹೇಳುತ್ತಿದ್ದಾರೆ. ಕಾಂಗ್ರೆಸ್ ರಾಜ್ಯ ನಾಯಕರ ವಲಯದಲ್ಲಿ ಇಬ್ಬರೂ ಉತ್ತಮ ಸಂಬಂಧ ಹೊಂದಿದ್ದಾರೆ. ಬಿಜೆಪಿಗೆ ಹೋಲಿಸಿಕೊಂಡರೆ ಆರ್ಥಿಕವಾಗಿ ಬಡತನದಲ್ಲಿರುವ ಕಾಂಗ್ರೆಸ್ ಪಾರ್ಟಿ ಈ ಬಾರಿ ಬರೀ ವರ್ಚಸ್ಸು ನೋಡಿ ಟಿಕೆಟ್ ಕೊಡುತ್ತದೆ ಎಂದು ಹೇಳಲಾಗದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಳಿ ಕಿಮ್ಮನೆ ಮತ್ತು ಮಂಜುನಾಥ್ ಗೌಡ ಇಬ್ಬರೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಿಮ್ಮನೆ ಅವರ ಮೇಲೆ ಹೆಚ್ಚು ಒಲವಿದೆ. ಆದರೆ ಪಕ್ಷ ಟಿಕೆಟ್ ಕೊಡುವುದು ಗೆಲುವಿನ ಅರ್ಹತೆ ಮೇಲೆಯೇ ಆಗಿದೆ.
ಮಂಜುನಾಥ್‌ಗೌಡರು ಆರ್ಥಿಕವಾಗಿಯೂ ಪಕ್ಷಕ್ಕೆ ನೆರವಾಗಬಲ್ಲರು ಮತ್ತು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ,ಜೆ.ಹೆಚ್.ಪಟೇಲ್ ಮತ್ತು ಯಡಿಯೂರಪ್ಪ ಸೇರಿದಂತೆ ಮೂವರು ಮಾಜಿ ಮುಖ್ಯಮಂತ್ರಿಗಳ ಬಳಿ ಹಲವು ತಂತ್ರಗಾರಿಕೆಗಳನ್ನು ಕಲಿತವರು. ಈ ಕಾರಣದಿಂದ ಅವರು ಪಕ್ಷದ ನಿರ್ಣಾಯಕರ ಮೇಲೆ ಯಾವ ಪ್ರಭಾವ ಬೀರಬಲ್ಲರು ಎಂಬುದರ ಮೇಲೆ ಅವರಿಗೆ ಟಿಕೆಟ್ ಸಿಗುವುದೊ ಇಲ್ಲವೊ ಎಂಬುದನ್ನು ಹೇಳಬಹುದಾಗಿದೆ.
ಕಿಮ್ಮನೆ ರತ್ನಾಕರ್ ಅವರು, ಶಾಸಕರಾಗಿ ಹಲವು ಕೆಲಸ ಮಾಡಿದವರು, ಅಧಿಕಾರ ಇಲ್ಲದಾಗಲೂ ಜನರ ನಡುವೆ ಇದ್ದು, ಹೋರಾಟ, ಪಾದಯಾತ್ರೆ ಮಾಡಿದವರು. ಬಿಜೆಪಿಯವರ ದಾಳಿಯಿಂದ ಕಾರ್ಯಕರ್ತರಿಗೆ ರಕ್ಷಣೆ ಕೊಡುವಲ್ಲಿ ಅವರ ಪಾತ್ರ ಹಿರಿದಿದೆ. ಅವರ ನಿಷ್ಟೆ ಮತ್ತು ಸಿದ್ಧಾಂತದ ಆಧಾರದ ಮೇಲೆ ಪಕ್ಷ ಟಿಕೆಟ್ ನೀಡಬೇಕೇ ವಿನಾ ಇನ್ನಾವುದೇ ಸಮ್ಮೋಹನಾಸ್ತ್ರಗಳು ಅವರಲ್ಲಿ ಇಲ್ಲ ಎಂಬುದು ಅವರ ಬೆಂಬಲಿಗರ ಅಂಬೋಣವಾಗಿದೆ.
ಬದಲಾದ ಆರಗ ಜ್ಞಾನೇಂದ್ರ
ಹಲಸಿನತೊಳೆ ತಿಂದು,ಗುಮ್ಮಿ ನೀರು ಕುಡಿದು ಬೆಳೆದವನು ನಾನು, ಶಾಂತವೇರಿ ಗೋಪಾಲಗೌಡರೇ ನಮಗೆ ಆದರ್ಶ ಎಂದು ಹೇಳುವ ಆರಗ ಜ್ಞಾನೇಂದ್ರ ಅವರು ಸಚಿವರಾಗುತ್ತಲೇ ಬದಲಾದರು ಎಂಬ ಮಾತು ಬುದ್ದಿವಂತರ ಮತ ಕ್ಷೇತ್ರದಲ್ಲಿದೆಯಂತೆ. ಸಚಿವರಾದ ಮೇಲೆ ಹಲವು ಸನ್ನಿವೇಶಗಳಲ್ಲಿ ಟೀಕೆಗೊಳಗಾಗಿದ್ದ ಅವರು, ಸಚಿವರಾದ ಮೇಲೆ ಕ್ಷೇತ್ರಕ್ಕೆ ಉತ್ತಮ ಕೆಲಸ ಮಾಡಿದ್ದಾರೆ. ಕೆಲ ಯೋಜನೆಗಳನ್ನೂ ತಂದಿದ್ದಾರೆ. ಆದರೆ ಇದೇ ಹೊತ್ತಿಗೆ ಸಾಮಾನ್ಯ ಜನರಿಂದ ದೂರವಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತೀರ್ಥಹಳ್ಳಿ ಕ್ಷೇತ್ರಕ್ಕೆ ಹೈಕಮಾಂಡ್ ಒಂದು ವೇಳೆ ಈ ಬಾರಿ ಆರಗ ಜ್ಞಾನೇಂದ್ರ ಅವರು ಬೇಡ, ಬೇರೆಯವರಿಗೆ ಟಿಕೆಟ್ ಕೊಡೋಣ ಎಂದರೆ, ದುರ್ಬೀನು ಹಾಕಿಕೊಂಡು ಹುಡುಕಿದರೂ ಕ್ಷೇತ್ರದಲ್ಲಿ ಒಬ್ಬ ಮುಖಂಡರೂ ಸಿಗುವುದಿಲ್ಲ. ಬೇಕಷ್ಟು ಕಾರ್ಯಕರ್ತರು ಸಿಗಬಹುದು ಆದರೆ ಅವರನ್ನು ಮುಖಂಡರಾಗಲು ಜ್ಞಾನೇಂದ್ರಣ್ಣ ಬಿಟ್ಟಿಲ್ಲ ಎಂಬ ಮಾತು ಬಿಜೆಪಿ ಕಚೇರಿಯಲ್ಲಿಯೇ ಕೇಳಿಬರುತ್ತಿದೆ. ಅಧಿಕಾರ ಸಿಕ್ಕ ಮೇಲೆ ಮೊದಲಿನಂತಿಲ್ಲ ಅವರು ಎನ್ನುವ ಆರಗ ಅವರ ಬೆಂಬಲಿಗರು, ಚುನಾವಣೆಯಲ್ಲಿ ಯಾರಿಗೂ ಕಡಿಮೆ ಇಲ್ಲದಷ್ಟು ಬಂಡವಾಳ ಹೂಡಲು ನಮ್ಮ ನಾಯಕರು ಶಕ್ತರಿದ್ದಾರೆ ಎಂದು ಹೇಳುವುದನ್ನೂ ಮರೆಯುವುದಿಲ್ಲ.
ಜೆಡಿಎಸ್‌ನಿಂದ ಯುವಮುಂದಾಳು
ಒಂದು ಕಾಲದಲ್ಲಿ ಜೆಡಿಎಸ್‌ನ ನೆಲೆಯಾಗಿದ್ದ ತೀರ್ಥಹಳ್ಳಿಯಲ್ಲಿ ಆ ಪಕ್ಷದಿಂದ ಯುವ ಮುಂದಾಳು ಯಡೂರು ರಾಜಾರಾಂ ಅವರು ಅಭ್ಯರ್ಥಿ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಕಿಮ್ಮನೆ ರತ್ನಾಕರ್, ಮಂಜುನಾಥ ಗೌಡರ ಬಳಗದಲ್ಲಿಯೇ ಇದ್ದು, ಈಗ ಪ್ರತ್ಯೇಕ ಐಡೆಂಟಿಟಿಗೆ ಮುಂದಾಗಿರುವ ರಾಜಾರಾಂ ಅವರು ಪಕ್ಷ ಸಂಘಟನೆ ಮಾಡಿ ಗಮನ ಸೆಳೆಯುತ್ತಿದ್ದಾರೆ.