Malenadu Mitra
ರಾಜ್ಯಶಿಕಾರಿಪುರಶಿವಮೊಗ್ಗ

ಸೊರಬ ಬಿಜೆಪಿ ಒಳಸುಳಿಯಲ್ಲಿ ಮತ್ತೆ ಅಭ್ಯರ್ಥಿಯಾಗುವರೇ ಕುಮಾರ್‌ಬಂಗಾರಪ್ಪ ?,
ಹೊಸಬರ ಹುಡುಕಾಟದಲ್ಲಿದೆಯೇ ಕಮಲ ಪಕ್ಷ

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸೋಲಿಲ್ಲದ ಸರದಾರ ಎಸ್. ಬಂಗಾರಪ್ಪರ ಸೊರಬ ಕ್ಷೇತ್ರ ಒಂದು ಕಾಲದಲ್ಲಿ ಸಮಾಜವಾದಿಗಳ ಕರ್ಮಭೂಮಿಯಾಗಿತ್ತು. ಹೊಸ ಪಕ್ಷಗಳನ್ನು ಹುಟ್ಟು ಹಾಕಿದ್ದರೂ, ಕಾಂಗ್ರೆಸ್‌ಗೆ ಪರ್ಯಾಯ ರಾಜಕೀಯ ಶಕ್ತಿ ಕಟ್ಟುವಲ್ಲಿ ಮತ್ತೆ ಮತ್ತೆ ವಿಫಲರಾದ ಬಂಗಾರಪ್ಪ ಅವರು, ಕೊನೆಗೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ತಮ್ಮ ಸಿದ್ಧಾಂತಕ್ಕೆ ವಿರುದ್ಧವಾಗಿರುವ ಬಿಜೆಪಿಯನ್ನು ಸೇರಿದ್ದರು. ಅಲ್ಲಿ ಒಗ್ಗಿಕೊಳ್ಳಲಾಗದೆ ಬಹುಬೇಗನೆ ಅಲ್ಲಿಂದ ಮರಳಿ ಬಂದಿದ್ದರು. ಸೊರಬ ಕ್ಷೇತ್ರದಲ್ಲಿನ ರಾಜಕಾರಣವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದ ಯಡಿಯೂರಪ್ಪ ಅವರು 2008 ರ ಚುನಾವಣೆಯಲ್ಲಿ ಹರತಾಳು ಹಾಲಪ್ಪ ಅವರನ್ನು ಬಿಜೆಪಿಯಿಂದ ಗೆಲ್ಲಿಸಿದ್ದರು. ತಂದೆ ಬಿಜೆಪಿಗೆ ಹೋಗಿದ್ದನ್ನೇ ಟೀಕಿಸುತ್ತಿದ್ದ ಕುಮಾರ ಬಂಗಾರಪ್ಪ ಅವರು ಅಧಿಕಾರದ ಬೆನ್ನತ್ತಿ 2018ರ ಚುನಾವಣೆಯಲ್ಲಿ ಕಮಲವನ್ನು ಕಣ್ಣಿಗೊತ್ತಿಕೊಂಡು ಶಾಸಕರೂ ಆಗಿದ್ದಾರೆ.
ರಾಜ್ಯ ಈಗ ಮತ್ತೊಂದು ಚುನಾವಣೆ ಹೊಸ್ತಿಲಿಗೆ ಬಂದು ನಿಂತಿದೆ. ಮುಂಬರುವ ಚುನಾವಣೆಯಲ್ಲಿಯೂ ಸೊರಬ ಕ್ಷೇತ್ರ ರಾಜ್ಯದ ಗಮನ ಸೆಳೆಯಲಿದೆ. ಬಂಗಾರಪ್ಪರ ಕ್ಷೇತ್ರ ಎಂಬುದು ಒಂದು ಕಾರಣವಾದರೆ, ಅವರ ಮಕ್ಕಳೇ ಪರಸ್ಪರ ಎದುರಾಳಿಗಳು ಎನ್ನುವುದು ಇನ್ನೊಂದು ಕಾರಣ. ಈ ನಡುವೆ ಬಿಜೆಪಿಯಲ್ಲಿ ಹಾಲಿ ಶಾಸಕ ಕುಮಾರ ಬಂಗಾರಪ್ಪ ಅವರಿಗೆ ಈ ಬಾರಿ ಟಿಕೆಟ್ ಸಿಗಲಿದೆಯೇ ಎಂಬ ಚರ್ಚೆ ಕಮಲ ಪಕ್ಷದ ಪಡಸಾಲೆಯಲ್ಲಿ ಹುಟ್ಟಿಕೊಂಡು ಬಹಳ ದಿನಗಳೇ ಆಗಿವೆ.
ಕುಮಾರ ಬಂಗಾರಪ್ಪರಿಗೆ ಇರುವ ಅಡ್ಡಿ ಯಾವುದು?

ಅಳೆದು ಸುರಿದೂ ಬಿಜೆಪಿಗೆ ಹೋಗಿದ್ದ ಕುಮಾರ ಬಂಗಾರಪ್ಪ ಅವರು, ಇವತ್ತಿನ ತನಕ ಅಲ್ಲಿನ ರೀತಿ ನೀತಿಗಳಿಗೆ ಹೊಂದಿಕೊಂಡಿಲ್ಲ ಎಂಬುದು ಮೂಲ ಬಿಜೆಪಿಗರ ಆರೋಪವಾಗಿದೆ. ಶಾಸಕರಾದಂದಿನಿಂದಲೂ ಸೊರಬ ಬಿಜೆಪಿಯಲ್ಲಿ ತಗಾದೆಗಳು ತಪ್ಪಿಲ್ಲ. ಬಿಜೆಪಿಯ ಮೂಲ ಸಂಸ್ಕೃತಿಯಂತೆ ಅವರು ನಡೆದುಕೊಳ್ಳುತಿಲ್ಲ. ಪಕ್ಷ ಸಂಘಟನೆಯಲ್ಲಿ ಬಣಗಳು ಹುಟ್ಟಿಕೊಳ್ಳಲು ಕಾರಣರಾಗಿದ್ದಾರೆ. ಸ್ಥಳೀಯ ಕಾರ್ಯಕರ್ತರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುತಿಲ್ಲ. ತಮ್ಮದೇ ಒಂದು ಬಣ ರಚಿಸಿಕೊಂಡಿದ್ದಾರೆ ಎಂಬ ಆರೋಪ ಇದೆ. ಹಿಂದೊಮ್ಮೆ ಜಿಲ್ಲಾ ಮುಖಂಡರುಗಳ ಮಧ್ಯಸ್ತಿಕೆಗೂ ಸರಿಯಾಗದ ಕಾರಣ ರಾಜ್ಯ ಅಧ್ಯಕ್ಷರೇ ಬಂದು ತೇಪೆ ಹಚ್ಚಿದ್ದರು. ಆದರೆ ಆ ಬಳಿಕವೂ ಮನೆಯೊಂದು ಮೂರು ಬಾಗಿಲು ಎನ್ನುವ ಪರಿಸ್ಥಿತಿ ಸೊರಬ ಬಿಜೆಪಿಯದ್ದಾಗಿತ್ತು.
ನಮೋ ವೇದಿಕೆಯಿಂದ ಬಂಡಾಯ:
ಸೊರಬ ಬಿಜೆಪಿ ಶಾಸಕರ ಸರ್ವಾಧಿಕಾರಿ ಧೋರಣೆ ನಿಲ್ಲುವುದಿಲ್ಲ ಎಂದು ಆರೋಪಿಸಿರುವ ಬಿಜೆಪಿಯ ಹಿರಿಯ ನಾಯಕ ಪದ್ಮನಾಭ್ ಭಟ್ ಹಾಗೂ ಪಾಣಿರಾಜಪ್ಪರ ನೇತೃತ್ವದಲ್ಲಿ ಮೂಲ ಬಿಜೆಪಿಯ ಜಿಲ್ಲಾ ಹಂತದ ನಾಯಕರುಗಳು ಶಾಸಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದರು. ಮುಂಬರುವ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಅವರನ್ನು ಅಭ್ಯರ್ಥಿ ಮಾಡುವುದಕ್ಕೆ ನಮ್ಮ ವಿರೋಧ ಇದೆ ಎಂದು ಹೇಳಿಕೆಯನ್ನೂ ನೀಡಿದ್ದರು. ಇದಾದ ಬಳಿಕ ಎಂಟು ಮಂದಿ ಹಿರಿಯ ಮುಖಂಡರುಗಳನ್ನು ಪಕ್ಷದಲ್ಲಿ ಅವರು ಹೊಂದಿದ್ದ ಸ್ಥಾನದಿಂದ ಬಿಡುಗಡೆಗೊಳಿಸಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳು ಸೊರಬ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೆ ಮತ್ತೆ ರುಜುವಾತು ಮಾಡಿದ್ದವು.


ಹೊಸ ಮುಖಕ್ಕೆ ಹುಡುಕಾಟ

ಬಿಜೆಪಿಯಲ್ಲಿ ಸೊರಬಕ್ಕೆ ಒಬ್ಬ ಹೊಸ ಅಭ್ಯರ್ಥಿಯ ಹುಡುಕಾಟ ನಡೆದಿದೆ. ಇದಕ್ಕೆ ಸಂಘ ಪರಿವಾರದ ಸಹಮತವೂ ಇದೆ ಎನ್ನಲಾಗಿದೆ. ಆದರೆ ಅಲ್ಲಿ ಈಡಿಗೇತರ ಅಭ್ಯರ್ಥಿ ಹಾಕಿ ಯಾವುದೇ ಸರ್ಕಸ್ ಮಾಡಿದರೂ ಸಕ್ಸಸ್ ಆಗುವುದಿಲ್ಲ ಎಂಬುದು ಯಡಿಯೂರಪ್ಪ ಕುಟುಂಬ ಸೇರಿದಂತೆ ಬಿಜೆಪಿ ನಾಯಕರಿಗೆ ಗೊತ್ತಿದೆ. ಹಿಂದೆ ಹರತಾಳು ಹಾಲಪ್ಪರು ಬಂಗಾರಪ್ಪ ಪುತ್ರರನ್ನು ಎದುರಿಸಿ ಗೆಲುವು ತಂದುಕೊಟ್ಟಿದ್ದರು. ಈಗ ಅವರು ಸಾಗರದಲ್ಲಿ ಗಟ್ಟಿಯಾಗಿದ್ದಾರೆ. ಸೊರಬದಲ್ಲಿ ಬಂಗಾರಪ್ಪ ಕುಟುಂಬದ ವಿರುದ್ಧ ರಾಜಕೀಯ ಮಾಡಿ ಗೆಲ್ಲುವಂತಹ ಈಡಿಗ ಮುಖಂಡರು ಯಾರೂ ಸಧ್ಯಕ್ಕೆ ಕಾಣುತ್ತಿಲ್ಲ. ಈ ನಡುವೆ ನಮೋ ವೇದಿಕೆಯ ಮುಖಂಡರು ಆರ್‌ಎಸ್‌ಎಸ್ ಮೇಲೆ ಒಲವುಳ್ಳ ಡಾ.ಜ್ಞಾನೇಶ್ ಎಂಬ ವೈದ್ಯರನ್ನು ಫೋಕಸ್ ಮಾಡುತ್ತಿದ್ದಾರೆ. ಪಕ್ಷದಿಂದ ಟಿಕೆಟ್ ನೀಡದಿದ್ದರೆ ನಮ್ಮ ವೇದಿಕೆಯಿಂದ ಸ್ಪರ್ಧಿಸಿ ಎಂಬ ಒತ್ತಡ ಹಾಕುತ್ತಿದ್ದಾರೆ.
ವೈದ್ಯರಾದರೂ ಸಮಾಜಮುಖಿ ಕೆಲಸಗಳ ಮೂಲಕ ಜನ ಪ್ರೀತಿ ಗಳಿಸಿರುವ ಜ್ಞಾನೇಶ್ ಅವರು, ಪಕ್ಷದಿಂದ ಟಿಕೆಟ್ ಸಿಕ್ಕರೆ ಮಾತ್ರ ಕಣಕ್ಕಿಳಿಯುವ ಇಚ್ಚೆ ಹೊಂದಿದ್ದಾರೆ. ಬಿಜೆಪಿಯ ಬಣರಾಜಕೀಯಕ್ಕೆ ಬಲಿಯಾಗಿ ಪಕ್ಷೇತರವಾಗಿ ಸ್ಪರ್ಧಿಸುವ ದಡ್ಡತನವನ್ನು ಅವರು ತೋರಲಾರರು ಎಂದು ಅವರ ಆಪ್ತವಲಯ ಹೇಳುತ್ತಿದೆ.


ಕೆಲಸ ಮಾಡಿದ್ದರೂ ಜನರಿಂದ ದೂರ


ಹಾಲಿ ಶಾಸಕ ಕುಮಾರ್‌ಬಂಗಾರಪ್ಪ ಬಿಜೆಪಿ ಸರಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದಾರೆ. ತಕ್ಕಮಟ್ಟಿಗೆ ಕೆಲಸಗಳೂ ಆಗಿವೆ. ಹೆಚ್ಚು ಕೆಲಸ ಮಾಡಿದ ಜನಪ್ರತಿನಿಧಿ ಸಹಜವಾಗಿಯೇ ಜನರಿಗೆ ಹತ್ತಿರವಾಗಬೇಕು. ಆದರೆ ಕುಮಾರ್ ವಿಚಾರದಲ್ಲಿ ಹಾಗಿಲ್ಲ. ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರೊಂದಿಗೆ ಒಂದು ಅಂತರವನ್ನೇ ಕಾಯ್ದುಕೊಂಡಿರುವ ಅವರು, ಕೆಲವೇ ಮುಖಂಡರಿಗೆ ಮನ್ನಣೆ ನೀಡುತ್ತಾರೆ ಎಂಬುದು ಕ್ಷೇತ್ರದಲ್ಲಿನ ಬೆಳವಣಿಗೆಗಳಿಂದ ವೇದ್ಯವಾಗುತ್ತಿದೆ.


ಮುಖಂಡರೊಂದಿಗೂ ಮುನಿಸು:
ಕುಮಾರ್ ಬಂಗಾರಪ್ಪ ಅವರು ಪಕ್ಷದ ಮುಖಂಡರೊಂದಿಗೂ ಉತ್ತಮ ಬಾಂಧವ್ಯ ಹೊಂದಿಲ್ಲ. ಅದರಲ್ಲೂ ಯಡಿಯೂರಪ್ಪ ಕುಟುಂಬ ಮತ್ತು ಈಶ್ವರಪ್ಪ ಅವರೊಂದಿಗೆ ಅಷ್ಟಕ್ಕಷ್ಟೇ ಎನ್ನುವಂತಿದ್ದಾರೆ. ನಾನೂ ಲೀಡರ್ ಎಂಬ ಉಮೇದಿನಲ್ಲಿ ಅವರಿದ್ದಾರೆ. ಸೊರಬದ ನೀರಾವರಿ ಯೋಜನೆಯ ಉದ್ಘಾmನಾ ಸಮಾರಂಭದಲ್ಲಿ ತಮ್ಮನ್ನು ಕಡೆಗಣಿಸಿರುವ ಸಂಸದ ರಾಘವೇಂದ್ರ ಅವರ ವಿರುದ್ಧವೇ ತಿರುಗಿಬಿದ್ದು, ನಾನು ಬಂಗಾರಪ್ಪರ ಮಗ ನನಗೂ ರಾಜಕಾರಣ ಗೊತ್ತು ಎಂದು ತಿರುಗೇಟು ನೀಡಿದ್ದ ಬಗ್ಗೆ ಪಕ್ಷದಲ್ಲಿ ಅಂದೇ ಚರ್ಚೆಯಾಗಿತ್ತು. ಹೀಗೆ “ಯಾರಿಲ್ಲದ ಊರಿಗೆ ಇರುವವನೇ ಮೇಟಿ’ ಎನ್ನುವಂತೆ ಸೊರಬ ಬಿಜೆಪಿಗೆ ಕುಮಾರ್ ಬಂಗಾರಪ್ಪ ಅನಿವಾರ್ಯವಾಗಿದ್ದಾರೆ. ಈ ನಡುವೆ ಬಿಜೆಪಿ ವಲಯದಲ್ಲಿ ಅತ್ಯಂತ ಪವರ್‌ಫುಲ್ ಆಗಿರುವ ರಾಜ್ಯದ ಹೆಸರಾಂತ ಧಾರ್ಮಿಕ ಕ್ಷೇತ್ರದ ಪ್ರಮುಖರೊಂದಿಗೆ ಕುಮಾರ ಬಂಗಾರಪ್ಪ ಆಪ್ತ ಬಾಂಧವ್ಯ ಹೊಂದಿದ್ದಾರೆ. ಈ ಸಂಪರ್ಕವೇ ಅವರಿಗೆ ಬಿಜೆಪಿಯಲ್ಲಿ ಅವರನ್ನು ಕಾಯುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಒಟ್ಟಿನಲ್ಲಿ ಸೊರಬ ಬಿಜೆಪಿಯಲ್ಲಿ ಈ ಬಾರಿಯ ಚುನಾವಣೆ ಬೇರೆ ಕ್ಷೇತ್ರಗಳಿಗಿಂತ ಭಿನ್ನವಾಗಿಯೇ ಇರಲಿದೆ. ಮೂಲ ಬಿಜೆಪಿಗರ ಕೂಗು ಸಂಘ ಪರಿವಾರದ ಮೂಲಕ ಕ್ಷಣಮಾತ್ರದಲ್ಲಿ ನಾಗಪುರಕ್ಕೆ ತಲುಪುತ್ತದೆ ಆದರೆ ಅದು ಯಾವ ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ನಿರ್ಧಾರವಾಗಲಿದೆ

Ad Widget

Related posts

ಸಿಮ್ಸ್‍ನಲ್ಲಿ ಕೋವಿಡ್ ಡ್ರೈ ರನ್ ಹೇಗಿದೆ ಗೊತ್ತಾ

Malenadu Mirror Desk

ಹಿಟ್ಲರ್‌ನ ಪ್ರಭುತ್ವದಲ್ಲಿ ಧರ್ಮದ ಅಂಧತ್ವದಿಂದ ಜನರ ಹತ್ಯೆಗಳಾದವು: ಬರಹಗಾರ ಎಸ್.ದಿವಾಕರ್ ಅಭಿಪ್ರಾಯ

Malenadu Mirror Desk

ಆಶ್ರಯ ಯೋಜನೆ ಆಯ್ಕೆಗೆ ವರಮಾನ ಮಿತಿ ಹೆಚ್ಚಳಕ್ಕೆ ಮುಖ್ಯಮಂತ್ರಿ ನಿರ್ದೇಶನ: ಗೃಹ ಸಚಿವ ಆರಗ ಜ್ಞಾನೇಂದ್ರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.