ಬಿಜೆಪಿ ಹೈಕಮಾಂಡ್ ರಾಜ್ಯ ರಾಜಕಾರಣ ಹಾಗೂ ಮುಂಬರುವ ವಿಧಾನ ಸಭೆ ಚುನಾವಣೆಯನ್ನು ಯಡಿಯೂರಪ್ಪ ಕೇಂದ್ರಿತವಾಗಿಸಲು ಪ್ರಯತ್ನಿಸುತ್ತಿದೆ. ಈ ಬೆಳವಣಿಗೆಯ ನಡುವೆಯೇ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಕುಟುಂಬದ ವಿರುದ್ಧ ಅಸಮಾಧಾನದ ಹೊಗೆಯೊಂದು ದಟ್ಟವಾಗುತ್ತಿದೆ. ಬಿಜೆಪಿಯ ರಾಜ್ಯನಾಯಕರ ಈ ಅನಪೇಕ್ಷಿತ ನಡವಳಿಕೆ ಬಿಜೆಪಿಯ ರಾಷ್ಟ್ರೀಯ ಮುಖಂಡರನ್ನು ಕಂಗೆಡಿಸಿದೆ.
ರಾಜ್ಯ ಬಿಜೆಪಿಯ ಶಕ್ತಿಯಾಗಿದ್ದ ಯಡಿಯೂರಪ್ಪ ಅವರಿಗೇ ಭೇಟಿಗೆ ಸಮಯ ನೀಡದೆ ವಾಪಸ್ ಕಳಿಸಿದ್ದ ಅಮಿತ್ ಶಾ ಅವರು ಈಗ ಸೋಮಣ್ಣ ಅವರಂತಹ ನಾಯಕರನ್ನು ಕರೆದು ಮಾತನಾಡಿಸುತ್ತಿದ್ದಾರೆ. ನಾಯಕರ ಭೇಟಿಯ ಬಳಿಕವೂ ಸೋಮಣ್ಣ ಅವರು ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ಮಾತನಾಡುತ್ತಿರುವುದನ್ನು ನೋಡಿದರೆ, ಯಡಿಯೂರಪ್ಪ ಅವರನ್ನು ನೇಪಥ್ಯಕ್ಕೆ ಸರಿಸುವ ಕೆಲಸ ನಡೆಯುತ್ತಿದೆ ಎಂಬ ಅನುಮಾನ ಕಾಡುತ್ತಿದೆ.
ವ್ಯವಸ್ಥಿತ ಕುತಂತ್ರ:
ರಾಜ್ಯ ಬಿಜೆಪಿಯಲ್ಲಿ ಮಹಾನ್ ಶಕ್ತಿಯಾಗಿ ಬೆಳೆದಿದ್ದ ಯಡಿಯೂರಪ್ಪರ ಹಾದಿ ಸುಲಭದ ಪಯಣವಾಗಿರಲಿಲ್ಲ. ಹಿತಶತ್ರುಗಳ ದಂಡೇ ಇದ್ದರೂ, ಜಾತಿಯ ಬಲ ಮತ್ತು ಹೋರಾಟದ ಕಿಚ್ಚಿನಿಂದಾಗಿ ಅವರು ಎಲ್ಲರನ್ನೂ ಮೀರಿದ್ದರು. ಹಿಂದೆಯೂ ಅವರಿಗೆ ಹಲವು ಮಂದಿ ಅಡ್ಡಗಾಲು ಹಾಕಿದ್ದರು. ಆ ಹರ್ಡಲ್ಸ್‌ಗಳನ್ನು ದಾಟಿ ಅಧಿಕಾರ ಹಿಡಿದ ಯಡಿಯೂರಪ್ಪರ ಆಪ್ತ ಬಳಗ ಮಾಡಿದ ಎಡವಟ್ಟುಗಳು ಅವರನ್ನು ಮುಖ್ಯಮಂತ್ರಿಯ ಖುರ್ಚಿಯಿಂದ ಒತ್ತಾಯವಾಗಿ ಇಳಿಸಲು ಮತ್ತು ಜೈಲಿಗೆ ಕಳಿಸುವಂತಾಯಿತು ಎಂಬುದು ರಾಜಕೀಯದ ದುರಂತ.
ಜೈಲಿಗೆ ಹೋಗಿ ಬಂದ ಅಪಕೀರ್ತಿಯ ನಡುವೆಯೂ ತಮ್ಮ ಸಂಘಟನಾ ಚತುರತೆಯಿಂದ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರನ್ನು ಎರಡನೇ ಅವಧಿಯಲ್ಲಿಯೂ ಪೂರ್ಣ ಅಧಿಕಾರ ನಡೆಸಲು ಬಿಡಲಿಲ್ಲ. ಆದರೆ ಈಗ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿಯ ಹೈಕಮಾಂಡ್, ಯಡಿಯೂರಪ್ಪರಿಗೇ ಶರಣಾಗಿದೆ.
ಸಿ.ಟಿ.ರವಿ ಹೇಳಿಕೆ ಹಿಂದಿರುವ ಶಕ್ತಿ ಯಾವುದು?
ತಮ್ಮ ಉತ್ತರಾಧಿಕಾರಿ ವಿಜಯೇಂದ್ರ ಎಂದು ಶಿಕಾರಿಪುರ ಕ್ಷೇತ್ರಕ್ಕೆ ಸೀಮಿತವಾಗಿ ಮಾತನಾಡಿದ್ದ ಯಡಿಯೂರಪ್ಪ ಅವರನ್ನು ಉಲ್ಲೇಖಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೀಡಿರುವ ಹೇಳಿಕೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಒಂದು ಕಾಲದಲ್ಲಿ ಯಡಿಯೂರಪ್ಪ ಅವರ ಮುಂದೆ ನಿಂತು ಮಾತನಾಡಲು ಅಂಜುತಿದ್ದ ರವಿ, ಬಿಜೆಪಿಯ ಟಿಕೆಟ್ ಯಾರ ಮನೆಯ ಕಿಚನ್‌ನಲ್ಲಿ ಅಪ್ಪ ಮಕ್ಕಳು ಕುಳಿತು ನಿರ್ಧರಿಸುವ ಸಂಗತಿಯಲ್ಲ ಎಂದಿದ್ದಾರೆ. ಈ ಹೇಳಿಕೆ ಬಿಜೆಪಿಯಲ್ಲಿನ ಯಡಿಯೂರಪ್ಪ ವಿರೋಧಿಗಳ “ಸಾಂಘಿಕ” ಧ್ವನಿಯಂತೆ ಭಾಸವಾಗುತ್ತಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಅಸಂತೋಷ ಇಂದು, ನಿನ್ನೆಯದಲ್ಲ:
ಬಿಜೆಪಿಯ ಒಂದು ವಲಯ ಯಡಿಯೂರಪ್ಪ ಅವರನ್ನು ಮೊದಲಿಂದಲೂ ವಿರೊಧಿಸುತ್ತಲೇ ಬಂದಿತ್ತು. ಮಾಜಿ ಕೇಂದ್ರ ಸಚಿವ ಅನಂತ್‌ಕುಮರ್ ಅವರ ಕಾಲದಿಂದಲೂ ಇದು ಚಾಲ್ತಿಯಲ್ಲಿತ್ತು. ಅನಂತ್ ಕುಮಾರ್ ಅವರು ದೆಹಲಿ ಮಟ್ಟದಲ್ಲಿ ಯಡಿಯೂರಪ್ಪ ಅವರ ಪ್ರಭಾವವನ್ನು ಯಾವತ್ತೂ ಏರಲು ಬಿಟ್ಟಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿದ್ದ ಸಂಗತಿಯಾಗಿತ್ತು. ಈಗ ಅನಂತ್‌ಕುಮಾರ್ ಜಾಗದಲ್ಲಿ ಬಿ.ಎಲ್.ಸಂತೋಷ್ ಇದ್ದಾರೆ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ ಬಿಎಸ್‌ವೈಗೆ ಮೂಗುದಾರ ಹಾಕುವ ಕೆಲಸವನ್ನು ಅವರು ಮಾಡುತ್ತಲೇ ಇದ್ದರು. ಯಡಿಯೂರಪ್ಪ ಅವರಿಗಿರುವ ಸಮೂಹ ನಾಯಕತ್ವ ಮತ್ತು ಜಾತಿಯ ಬಲದ ಕಾರಣಕ್ಕೆ ಅದು ಪರಿಣಾಮಕಾರಿಯಾಗಿರಲಿಲ್ಲ.
ಅನಂತ್‌ಕುಮಾರ್ ಬಳಗ ಹಿಂದೆಯೂ ಲಿಂಗಾಯತ ಮುಖಂಡ ಬಿ.ಬಿ.ಶಿವಪ್ಪ ಅವರನ್ನು ಯಡಿಯೂರಪ್ಪ ವಿರುದ್ಧ ಎತ್ತಿಕಟ್ಟಿತ್ತು. ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ ಸೇರಿದಂತೆ ಹಲವು ಅನಂತಕುಮಾರ್ ಪ್ರೇಷಿತರು ತಂತ್ರಗಾರಿಕೆ, ಟೀಕೆ ಟಿಪ್ಪಣಿ ಮಾಡಿದವರೇ ಎಂಬುದು ರಾಜಕಾರಣ ಬಲ್ಲವರಿಗೆ ಗೊತ್ತು. ಈಗ ಅನಂತಕುಮಾರ್ ಜಾಗದಲ್ಲಿರುವ ಸಂತೋಷ್‌ಜೀಗೆ ಸಿ.ಟಿ.ರವಿ ಅತ್ಯಾಪ್ತರು. ಅವರ ಬೆಂಬಲವಿಲ್ಲದೆ ಚುನಾವಣೆ ಹೊತ್ತಲ್ಲಿ ಯಡಿಯೂರಪ್ಪ ವಿರುದ್ಧ ಯಾವ ಹೇಳಿಕೆಗಳೂ ಬರುವುದಿಲ್ಲ ಎಂಬುದು ಸ್ಪಷ್ಟ.
ಯಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಮಾಡುತ್ತಿರುವ ಆರೋಪಗಳ ಹಿಂದೆಯೂ ಇದೇ ಗ್ಯಾಂಗ್‌ನ ಪಿತೂರಿಯಿರುವುದನ್ನು ಅಲ್ಲಗಳೆಯಲಾಗದು. ಹಾದಿ ಬೀದಿಯಲ್ಲಿ ಯಡಿಯೂರಪ್ಪ ಮತ್ತವರ ಮಕ್ಕಳ ವಿರುದ್ಧ ಯತ್ನಾಳ್ ಮಾತನಾಡಿದರೂ, ಅವರ ವಿರುದ್ಧ ಯಾವುದೇ ಗಂಭೀರವಾದ ಶಿಸ್ತುಕ್ರಮ ಜರುಗಲಿಲ್ಲ ಎಂಬುದೇ ಈ ಎಲ್ಲಾ ಷಡ್ಯಂತ್ರಕ್ಕೆ ಪುರಾವೆಗಳನ್ನು ನೀಡುತ್ತದೆ.