Malenadu Mitra
ರಾಜ್ಯ ಶಿವಮೊಗ್ಗ

ಒಂದೇ ಶಿಕಾರಿಗೆ ಹಲವು ಗುರಿಕಾರರು
ಶಾಸಕ ಈಶ್ವರಪ್ಪರಿಗೆ ಟಿಕೆಟ್ ತಪ್ಪಿಸಲು ತೆರೆಮರೆಯಲ್ಲಿ ತರಾವರಿ ತಂತ್ರ

ನಾಗರಾಜ್ ನೇರಿಗೆ, ಶಿವಮೊಗ್ಗ

ಶಿವಮೊಗ್ಗ : ಪ್ರತಿಷ್ಠಿತ ಶಿವಮೊಗ್ಗ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಆಡಳಿತ ಮತ್ತು ಪ್ರತಿ ಪಕ್ಷ ಎರಡರಲ್ಲೂ ಗೊಂದಲ ಮುಂದುವರಿದಿದೆ. ರಾಜ್ಯ ಬಿಜೆಪಿ ಹಿಂದುಳಿದ ವರ್ಗದ ನಾಯಕ ಹಾಗೂ ಆ ಪಕ್ಷದಲ್ಲಿ ಫೈರ್ ಬ್ರಾಂಡ್ ಎಂದೇ ಖ್ಯಾತಿವೆತ್ತ ಈಶ್ವರಪ್ಪರನ್ನು ಕೇಂದ್ರಿಕರಿಸಿಯೇ ಟಿಕೆಟ್ ಲಾಬಿ ನಡೆಯುತ್ತಿರುವುದು ವಿಶೇಷವಾಗಿದೆ. ಅಂದರೆ ಒಂದೇ ಮಿಕದ ಶಿಕಾರಿಗೆ ಹಲವು ಗುರಿಕಾರರು ಬಿಲ್ಲು ಎದೆಗೇರಿಸಿ ನಿಂತಿದ್ದಾರೆ.

ಬಾಯಿಯೇ ಬಂಡವಾಳ

ಶಿವಮೊಗ್ಗ ಕ್ಷೇತ್ರದಲ್ಲಿ ಐದು ಬಾರಿ ಜಯಿಸಿದ್ದು ಮಾತ್ರವಲ್ಲದೆ, ಸಚಿವ ,ಉಪಮುಖ್ಯಮಂತ್ರಿ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಸೇರಿದಂತೆ ಹಲವು ಅಧಿಕಾರಗಳನ್ನು ಈಶ್ವರಪ್ಪ ಅನುಭವಿಸಿದ್ದಾರೆ. ಸೋತಾಗಲೂ ಅವರನ್ನು ಮೇಲ್ಮನೆ ಸದಸ್ಯರಾಗಿ ಮಾಡಲಾಗಿತ್ತು. ಪಕ್ಷದಲ್ಲಿಯೂ ವಿವಿಧ ಹುದ್ದೆ ಸೇರಿದಂತೆ ಬಿಜೆಪಿ ರಾಜ್ಯಾಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆ ಒಂದನ್ನು ಬಿಟ್ಟು ಎಲ್ಲಾ ಅಧಿಕಾರವನ್ನು ಈಶ್ವರಪ್ಪ ಅನುಭವಿಸಿದ್ದಾರೆ. ಹಿಂದುಳಿದ ವರ್ಗದ ಕುರುಬ ಸಮುದಾಯವರಾದ ಈಶ್ವರಪ್ಪ ನಿಷ್ಟಾವಂತ ಆರೆಸ್ಸೆಸ್ ಕಾರ್ಯಕರ್ತ. ಇದಕ್ಕೆ ಪೂರಕವೆಂಬಂತೆ ಧರ್ಮ ಸೂಕ್ಷ್ಮ ವಿಚಾರಗಳನ್ನೇ ಕೆದಕುವ ಅವರು ಹಿಂದೂ ಮತಗಳ ಕ್ರೋಢೀಕರಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ತಮ್ಮ ಗಟ್ಟಿ ಧ್ವನಿಯಲ್ಲಿ  ಮತೀಯ ಅಲ್ಪಸಂಖ್ಯಾತರ ಬಗ್ಗೆ ಟೀಕೆ ಮಾಡುತ್ತಲೇ ಇದ್ದ ಈಶ್ವರಪ್ಪ ಅವರು, ಹಲವು ಸಂದರ್ಭ ಕೈ ಕಡಿಯಬೇಕು, ನಾಲಿಗೆ ಸೀಳಬೇಕು. ಕಾಲು ಮುರಿಯಬೇಕು, ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು ಇತ್ಯಾದಿ ಸೂಕ್ತಿಗಳಿಂದ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಬಿಜೆಪಿಯಲ್ಲಿ ಈಗ ಇವರಿಗಿಂತಲೂ ಹೆಚ್ಚು ಬೆಂಕಿಯುಗುಳುವ ಮತ್ತು ಇಲ್ಲದ ಇತಿಹಾಸ ಮತ್ತು ಪಾತ್ರಗಳನ್ನು ಸೃಷ್ಟಿಸುವ ಮೋಡಿಗಾರರು ಇರುವುದರಿಂದ ಈಗ ಇವರು ಕೊಂಚ ಮಂಕಾಗಿದ್ದಾರೆ.

ಬೊಮ್ಮಾಯಿ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಈಶ್ವರಪ್ಪ ಅವರು, ಶೇ.೪೦ ಕಮೀಷನ್ ಆರೋಪದ ಕಾರಣದಿಂದ ಹುದ್ದೆ ಕಳೆದುಕೊಂಡರು. ಸಂತೋಷ್ ಎಂಬ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ ಬಹುಬೇಗ ಇತ್ಯರ್ಥವಾಗಿದ್ದರಿಂದ ಈಶ್ವರಪ್ಪ ಮತ್ತೆ ಸಂಪುಟ ಸೇರಲು ತುದಿಗಾಲಲ್ಲಿ ನಿಂತಿದ್ದರೂ ಅದು ಸಾಧ್ಯವಾಗಲಿಲ್ಲ. ಮುಂದಿನ ತಿಂಗಳು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕೊನೆಯ ಬಾರಿ ಸ್ಪರ್ಧಿಸಿ ಒಂದು ಹಾನರ್ ಎಕ್ಷಿಟ್ ಪಡೆಯುವ ಇರಾದೆಯಲ್ಲಿರುವ ಈಶ್ವರಪ್ಪ ಅವರಿಗೆ ಈಗ ಅಷ್ಟ ದಿಕ್ಕುಗಳಿಂದಲೂ ಕಾಡುವ ಗುರಿಕಾರರದ್ದೇ ಸಮಸ್ಯೆಯಾಗಿದೆ.


ಯಾರು ಶತ್ರುಗಳು:

ಈಶ್ವರಪ್ಪ ಮತ್ತು ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಯ ಬೆಳವಣಿಗೆಗೆ ಜೋಡೆತ್ತುಗಳಂತೆ ದುಡಿದವರು. ಪ್ರಬಲ ಜಾತಿಯ ಕಾರಣಕ್ಕೆ ಯಡಿಯೂರಪ್ಪರ ಪಾತ್ರ ದೊಡ್ಡದಿದ್ದರೆ, ಈಶ್ವರಪ್ಪ ಕೊಡುಗೆ ಕಡಿಮೆ ಇರಬಹುದು. ಆದರೆ ಪಕ್ಷ ನಿಷ್ಠೆಯ ವಿಚಾರದಲ್ಲಿ ಯಾರೂ ಅವರನ್ನು ದೂರುವ ಮಾತಿಲ್ಲ. ಸಂಘಪರಿವಾರದಲ್ಲಿಯೂ ಕಟ್ಟರ್ ಎನಿಸಿಕೊಂಡಿದ್ದಾರೆ. ಈ ಎಲ್ಲಾ ಅವಕಾಶಗಳಿದ್ದರೂ ಈಶ್ವರಪ್ಪ ಅವರಿಗೆ ಈ ಬಾರಿ ಟಿಕೆಟ್ ಕೊಡುವ ವಿಚಾರದಲ್ಲಿ ಬಾರೀ ಚೌಕಾಸಿ ಮಾಡಲಾಗುತ್ತಿದೆ.
ಈಶ್ವರಪ್ಪ ಅವರು ೭೫ ಹರೆಯಕ್ಕೆ ಅತೀ ಸಮೀಪದಲ್ಲಿದ್ದಾರೆ. ನಿರ್ಗಮಿತ ಸರಕಾರದಲ್ಲಿ ಇವರ ಮೇಲೆ ಶೇ ೪೦ ಕಮೀಷನ್ ಆರೋಪವಿದೆ. ಇಷ್ಟು ಮಾತ್ರವಲ್ಲದೆ, ಯಡಿಯೂರಪ್ಪ ಅವರು ಅಧಿಕಾರದಲ್ಲಿರುವಾಗ ಮತ್ತು ಪಕ್ಷ ಬಿಟ್ಟಾಗ ಅವರನ್ನು ಹೆಚ್ಚು ಟೀಕೆ ಮಾಡಿರುವುದು ಇದೇ ಈಶ್ವರಪ್ಪ. ಯಡಿಯೂರಪ್ಪರ ಪುತ್ರರ ರಾಜಕೀಯ ಪ್ರವೇಶ ಸಂದರ್ಭದಲ್ಲಿಯೂ ಈಶ್ವರಪ್ಪ ಅವರು ಸಕಾರಾತ್ಮಕ ಧೋರಣೆ ಹೊಂದಿರಲಿಲ್ಲ. ಈಗ ಇದೇ ಈಶ್ವರಪ್ಪರು ತಮಗೆ ಆಗದಿದ್ದಲ್ಲಿ ಮಗ ಕೆ.ಇ.ಕಾಂತೇಶ್‌ಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ. ಈ ಒಂದು ಕಾರಣಕ್ಕೆ ಬಿಜೆಪಿಯಲ್ಲಿರುವ ಹಲವರು ಈಶ್ವರಪ್ಪರನ್ನು ವಿರೋಧಿಸುತ್ತಿದ್ದಾರೆ.

ಪ್ರಮುಖರಾದ ಎಂ.ಬಿ.ಭಾನುಪ್ರಕಾಶ್ ಅವರು, ತಮ್ಮ ಪುತ್ರ ಹರಿಕೃಷ್ಣರನ್ನು ಮುನ್ನೆಲೆಗೆ ತರುವಲ್ಲಿ ಆಸಕ್ತಿ ಹೊಂದಿದ್ದಾರೆ. ಅವಕಾಶ ಕೊಟ್ಟರೆ ಸ್ಪರ್ಧಿಸುವ ಆಸೆ ಪರಿಷತ್ ಸದಸ್ಯ ಎಸ್. ರುದ್ರೇಗೌಡ,  ಗಿರೀಶ್ ಪಟೇಲ್, ಜ್ಯೋತಿಪ್ರಕಾಶ್, ಎಂ.ಶಂಕರ್, ಚೆನ್ನಬಸಪ್ಪ, ಸಿದ್ದರಾಮಣ್ಣ ಸೇರಿದಂತೆ ಹಲವರಿಗಿದೆ.


ಆಯನೂರು ಮಂಜುನಾಥ್ ಅಬ್ಬರ

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಈಶ್ವರಪ್ಪ ವಿರುದ್ಧ ಬಹಿರಂಗ ಯುದ್ಧವನ್ನೇ ಆರಂಭಿಸಿದ್ದು, ಅಪ್ಪ ಅಥವಾ ಮಗ ಯಾರೇ ಕಣಕ್ಕಿಳಿದರೂ ನಾನೇ ಎದುರಾಳಿ ಎಂದು ಹೂಂಕರಿಸುತ್ತಿದ್ದಾರೆ.  ಹೊಳೆಗಿಳಿದ ಮೇಲೆ ಚಳಿಯ ಹಂಗೇಕೆ ಎಂಬಂತೆ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದೇನೆ ಪಕ್ಷ ಯಾವುದಾದರೇನು ಎಂಬ ಧೋರಣೆ ಅವರದ್ದಾಗಿದೆ. ಕಾಂಗ್ರೆಸ್ ಪಕ್ಷದಲ್ಲಿಯೂ ಆಯನೂರು ಪರವಾಗಿ ಒಂದು ಲಾಬಿ ಆರಂಭವಾಗಿದೆ. ಇದಕ್ಕೆ ಬಿಜೆಪಿಯಲ್ಲಿರುವ ವೀರಶೈವ ಲಿಂಗಾಯತ ನಾಯಕರ ಪರೋಕ್ಷ ಬೆಂಬಲವೂ ಇದ್ದಂತೆ ಕಾಣುತ್ತಿದೆ.


ಸಂದಿಗ್ಧತೆ ಏನು ?

ಹಳ್ಳಕ್ಕೆ ಬಿದ್ದ ಮೇಲೆ ಆಳಿಗೊಂದು ಕಲ್ಲು ಎನ್ನುವಂತೆ ಈಶ್ವರಪ್ಪರನ್ನು ಆಯನೂರು ಮಂಜುನಾಥ್ ಟಾರ್ಗೆಟ್ ಮಾಡುತ್ತಿದ್ದಂತೆ ಉಳಿದೆಲ್ಲ ಹಿತ ಶತ್ರುಗಳೂ ತಮ್ಮದೇ ನೆಲೆಯಲ್ಲಿ ಲಾಬಿ ಆರಂಭಿಸಿದ್ದಾರೆ. ಒಂದು ಕಡೆ ಕಮೀಷನ್ ಆರೋಪ, ಪುತ್ರವ್ಯಾಮೋಹಕ್ಕೆ ಎದುರಾದ ವಿರೋಧ, ಬೆಂಬಲ ನೀಡದ ಯಡಿಯೂರಪ್ಪ, ಹಿಂದೆ ಒಂದೇ ಗರಡಿಯಲ್ಲಿದ್ದರೂ, ಈಗ ಎಲ್ಲಾ ಪಾಪವನ್ನೂ ಈಶ್ವರಪ್ಪರ ಮೇಲೆ ಹೊರಿಸುತ್ತಿರುವ ಆಯನೂರು ಮಂಜುನಾಥ್ ಹೀಗೆ ಹಲವು  ಕೂರಂಬುಗಳು ಈಶ್ವರಪ್ಪರತ್ತ ಬರಲಾರಂಭಿಸಿವೆ. ಈ ಎಲ್ಲಾ ಕಾರಣದಿಂದ ಬಿಜೆಪಿ ಈ ಬಾರಿ ಈಶ್ವರಪ್ಪರಿಗೆ ನಿರಾಯಾಸವಾಗಿ ಟಿಕೆಟ್ ನೀಡಲು ಮೀನಮೇಷ ಎಣಿಸುತ್ತಿದೆ. ಆದರೆ ಪಕ್ಷ ನಿಷ್ಟೆ ಮತ್ತು ಸಂಘನಿಷ್ಟೇ ಎರಡನ್ನೇ ನಂಬಿಕೊಂಡಿರುವ ಈಶ್ವರಪ್ಪ ಮಾತ್ರ ಈ ಸಲ ಕಪ್ ನಂದೇ ಎಂಬ ಉಮೇದಿನಲ್ಲಿದ್ದಾರೆ.

Ad Widget

Related posts

ಶಿಕ್ಷಣ ಸಚಿವರಿಗೆ ಕಾಂಗ್ರೆಸ್ ಕಾರ್ಪೋರೇಟರ್‌ಗಳ ಮನವಿ ಏನು ಗೊತ್ತಾ ?

Malenadu Mirror Desk

ಬೆಂಕಿ ಆರಿಸುವವರಿದ್ದಾಗಲೇ ಸಮಾಜದ ಉನ್ನತಿ ಸಾಧ್ಯ: ಸ್ವಾಮಿ ವಚನಾನಂದ

Malenadu Mirror Desk

ಇಂದಿನಿಂದ ತುಂಗಾ ಮೇಲ್ದಂಡೆ ಮುಖ್ಯಕಾಲುವೆಗೆ ನೀರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.