ಶಿವಮೊಗ್ಗ: ಕಾಮನ್ ಸಿವಿಲ್ ಕೋಡ್ ಯಾವುದೇ ಧರ್ಮದ ವಿರುದ್ಧವಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಶಿವಮೊಗ್ಗ ಗ್ರಾಮಾಂತರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ವಿವಿಧ ಮೋರ್ಚಾಗಳ ಸಂಯುಕ್ತ ಸಮಾವೇಶದ ಉದ್ಘಾಟಿಸಿ ಅವರು ಮಾತನಾಡಿದರು.
ಕಾಮನ್ ಸಿವಿಲ್ ಕೋಡ್ ಯಾವುದೇ ಧರ್ಮದ ವಿರುದ್ಧವಲ್ಲ. ಒಂದೇ ದೇಶ, ಒಂದೇ ಕಾನೂನು ಬೇಕು ಎಂಬುದು ಶ್ಯಾಮ್ ಪ್ರಸಾದ್ ಮುಖರ್ಜಿಯವರ ಕನಸಾಗಿತ್ತು. ಇಂದು ಅವರ ಜನ್ಮದಿನಾಚರಣೆ. ಮೋದಿ ಸರ್ಕಾರ ೩೭೦ ವಿಧಿಯನ್ನು ರದ್ದುಗೊಳಿಸಿ ಅವರ ಆಶಯವನ್ನು ಅನುಷ್ಠಾನಗೊಳಿಸಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯವನ್ನು ಮಿಸ್‌ಲೀಡ್ ಮಾಡುತ್ತಾ ಪೊಳ್ಳು ಭರವಸೆ ನೀಡಿ ಇಷ್ಟು ವರ್ಷ ತುಷ್ಟೀಕರಣ ಮಾಡುತ್ತಾ ಬಂದಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಅದನ್ನು ಆ ಸಮುದಾಯ ಅರ್ಥ ಮಾಡಿಕೊಳ್ಳಬೇಕು. ಅವರನ್ನು ಕೂಡ ನಿಮ್ಮ ಜೊತೆಗೆ ಸೇರಿಸಿಕೊಳ್ಳಿ. ಮೋದಿ ಸರ್ಕಾರ 9 ವರ್ಷದ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ಮನೆಮನೆಗೆ ತಲುಪಿಸಿ ಸುಳ್ಳನ್ನು ನೂರು ಬಾರಿ ಹೇಳಿ ಅದನ್ನೇ ಸತ್ಯವೆಂದು ನಂಬಿಸುವ ಕಾಂಗ್ರೆಸ್ ಹುನ್ನಾರವನ್ನು ಜನರಿಗೆ ತಿಳಿಸಬೇಕು. ಕಾಂಗ್ರೆಸ್ ಪೊಳ್ಳು ಭರವಸೆ ಮತ್ತು ಅಪಪ್ರಚಾರದಿಂದ ಪಕ್ಷಕ್ಕೆ ತಾತ್ಕಾಲಿಕ ಹಿನ್ನಡೆಯಾಗಿರಬಹುದು. ಮೋದಿ ಸರ್ಕಾರದ ಸಾಧನೆ ನಮ್ಮ ಮುಂದಿದೆ. ದೇಶ ಕಟ್ಟುವ ಕೆಲಸ ಮಾಡೋಣ ಎಂದರು.
ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ವಿಕಾಸ್ ಪುತ್ತೂರು ಮಾತನಾಡಿ, ಸ್ವಾತಂತ್ರ್ಯದ ನಂತರ ನಮ್ಮ ದೇಶದ ಸಂಸ್ಕೃತಿ, ಪರಂಪರೆ ಮತ್ತು ಏಕತೆಗಾಗಿ ಮೊದಲು ಬಲಿದಾನ ಮಾಡಿದವರು ಡಾ. ಶ್ಯಾಮ್‌ಪ್ರಸಾದ್ ಮುಖರ್ಜಿ. ಏಕ್ ದೇಶ್ ಮೆ ದೋ ವಿಧಾನ್, ನಹಿ ಚಲೇಗಾ ಎಂದು ಆಂದೋಲನ ಮಾಡಿದ ಡಾ. ಶ್ಯಾಮ್‌ಪ್ರಸಾದ್ ಅವರ ಉದ್ದೇಶವನ್ನು ಮೋದಿಜೀ ಸರ್ಕಾರ ಈಡೇರಿಸಿದೆ ಎಂದರು.
ಈ ದೇಶದಲ್ಲಿ ಎರಡು ಧ್ವಜ, ಎರಡು ಪ್ರಧಾನಿ ಎಂಬ ದುಸ್ಥಿತಿ ಇತ್ತು. ಕಾಶ್ಮೀರವನ್ನು ಮುಕ್ತಗೊಳಿಸಿ ದೇಶಕ್ಕೆ ಏಕತೆಯ ಕೊಡುಗೆ ನೀಡಿದ್ದಾರೆ. ನಮ್ಮ ಸಂಸ್ಕೃತಿ ಮತ್ತು ಮುಂದಿನ ಪೀಳಿಗೆಗೆ ಸೇತುವೆ ಕಟ್ಟುವ ಕೆಲಸ ಮಾಡಿ ವಿಶ್ವದ ೧೯೦ಕ್ಕೂ ಹೆಚ್ಚು ದೇಶಗಳು ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಯೋಗ ದಿನಾಚರಣೆ ಮಾಡಿ ಮೋದಿಜೀಗೆ ಬೆಂಬಲ ಸೂಚಿಸಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಹೊಳೆಹೊನ್ನೂರು ಮಂಡಲ ಅಧ್ಯಕ್ಷ ಮಂಜುನಾಥ್, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಅಶೋಕ ಮೂರ್ತಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಸ್. ದತ್ತಾತ್ರಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷಎಂ.ಬಿ. ಹರಿಕೃಷ್ಣ, ಪ್ರಮುಖರಾದ ದಿನೇಶ್ ಬುಳ್ಳಾಪುರ, ವೀರಭದ್ರ ಪೂಜಾರಿ, ನಾಗರಾಜ್ ತಮ್ಮಡಿಹಳ್ಳಿ, ಸೌಮ್ಯ ಭೋಜನಾಯ್ಕ್ ಹಾಗೂ ವಿವಿಧ ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.