ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಶುಕ್ರವಾರ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿತು. ಆನಂದಪುರಂ ಸಮೀಪದ ಇರುವಕ್ಕಿಯಲ್ಲಿನ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಪದವಿ ಪ್ರದಾನ ಮಾಡಿದರು. ಕೃಷಿ ಸಚಿವ ಚೆಲುವರಾಯಸ್ವಾಮಿ, ಕುಲಪತಿ ಡಾ.ಆರ್.ಸಿ.ಜಗದೀಶ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.
ಈ ಸಂದರ್ಭ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ ಅವರು, ಮಂಡ್ಯದಿಂದ ಬಂದು ಶಿಕಾರಿಪುರವನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡು ರಾಜಕೀಯವಾಗಿ ಎತ್ತರಕ್ಕೆ ಬೆಳೆದವರು ಯಡಿಯೂರಪ್ಪ. ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡುತ್ತಿರುವುದು ಸಂತೋಷವಾಗಿದೆ. ಮಂಡ್ಯ ಜಿಲ್ಲೆಯವನಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಕೃಷಿಕ್ಷೇತ್ರವನ್ನು ಕಮರ್ಷಿಯಲ್ ಆಗಿ ಬೆಳೆಸಿದಾಗ ಅದು ಲಾಭದಾಯಕ ಉದ್ಯಮವಾಗುತ್ತದೆ. ಇಂದು ಕೃಷಿ ಕ್ಷೇತ್ರ ಅನೇಕ ಏರುಪೇರುಗಳನ್ನು ಕಾಣುತ್ತಿದೆ.ಇದು ಮತ್ತಷ್ಟು ಅಭಿವೃದ್ಧಿಯಾಗಬೇಕಿದೆ. ಸರಕಾರ ಶಿವಪ್ಪನಾಯಕ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳಿದರು.