ಶಿವಮೊಗ್ಗ: ರಾಜ್ಯ ಸರ್ಕಾರದ ರೈತವಿರೋಧಿ ಧೋರಣೆ ಖಂಡಿಸಿ ಜಿಲ್ಲಾ ಬಿಜೆಪಿ ರೈತಮೋರ್ಚಾ ವತಿಯಿಂದ ಜಿಲ್ಲಾ ಬಿಜೆಪಿ ಕಾರ್ಯಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮಾತನಾಡಿ, ರೈತದ್ವೇಷಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ನೀಡುತ್ತಿದ್ದ ೬ ಸಾವಿರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಹಿಂದೆ ನಾಲ್ಕು ಸಾವಿರರೂ. ನೀಡುತ್ತಿತ್ತು. ಅದನ್ನು ನೀಡದೆ ರೈತರಿಗೆ ಅನ್ಯಾಯ ಮಾಡಿದ್ದಾರೆ. ತಕ್ಷಣ ಹಣ ವಾಪಾಸ್ ನೀಡಬೇಕು. ಮೂರು ತಿಂಗಳಲ್ಲಿ 42 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ರೈತರ ಕುಟುಂಬ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ. ಪರಿಹಾರ ನೀಡಿಲ್ಲ. ರೈತರ ಮಕ್ಕಳಿಗೆ ಬಿಜೆಪಿ ಸರ್ಕಾರ ಜಾರಿಗೆ ತಂದ ರೈತ ವಿದ್ಯಾನಿಧಿ ಯೋಜನೆ ಕೂಡ ರದ್ದುಗೊಳಿಸಿದ್ದಾರೆ. ಗೋವು ನಮ್ಮ ತಾಯಿ ಸಮಾನ. ಗೋ ಸಂತತಿ ಉಳಿಸಲು ಜಿಲ್ಲೆಗೊಂದು ಗೋಶಾಲೆಯನ್ನು ಬಿಜೆಪಿ ನೀಡಿತ್ತು. ಅದನ್ನು ರದ್ದುಮಾಡಿದ್ದಾರೆ. ಕೂಡಲೇ ಪುನರಾರಂಭ ಮಾಡಬೇಕು ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ರೈತರಿಗಾಗಿ ಮೀಸಲಿಟ್ಟ 10ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಾಗಿ ವರ್ಗಾವಣೆ ಮಾಡಿದ್ದಾರೆ ಕೃಷ್ಣಾ ಯೋಜನೆಗೆ ಪ್ರತಿವರ್ಷ ೧೦ಸಾವಿರ ರೂ. ನೀಡುತ್ತೇವೆ ಎಂದು ಹೇಳಿದ ಮುಖ್ಯಮಂತ್ರಿಗಳು ಒಟ್ಟಾರೆ ನೀರಾವರಿ ಯೋಜನೆಗೆ ಅಷ್ಟು ಹಣ ನೀಡಿಲ್ಲ ಎಂದರು.
ಎಪಿಎಂಸಿ ಕಾಯಿದೆ ತೆಗೆದು ರೈತನಿಗೆ ತಾನು ಬೆಳೆದ ಬೆಳೆಗೆ ತಾನೇ ಮಾರುವ ಹಕ್ಕನ್ನು ಕಸಿದುಕೊಂಡಿದ್ದಾರೆ. ರೈತರ ಯಂತ್ರೋಪಕರಣ ಸಹಾಯಧನವನ್ನು ನಿಲ್ಲಿಸಿದ್ದಾರೆ. ಸಾವಿರಾರು ಎಕರೆ ಅಡಿಕೆ ತೋಟಕ್ಕೆ ಎಲೆಚುಕ್ಕಿ ರೋಗ ಬಂದರು ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದರೂ ತೀರ್ಥಹಳ್ಳಿಯ ಅಡಿಕೆ ಸಂಶೋಧನಾ ಕೇಂದ್ರಕ್ಕೆ ಬಿಜೆಪಿ ಸರ್ಕಾರ ನೀಡಿದ ೧೦ಕೋಟಿ ರೂ.ಗಳನ್ನು ತಡೆಹಿಡಿದಿದ್ದಾರೆ. ಉಚಿತ ಬಸ್ ಗ್ಯಾರಂಟಿ ನೀಡಿದ ಸರ್ಕಾರ ನಿಗಮಕ್ಕೆ750 ಕೋಟಿಯಲ್ಲಿ ಕೇವಲ 120 ಕೋಟಿ ರೂ. ನೀಡಿದೆ. ವಿವಿಧ ಎಸ್ಕಾಂಗಳಿಂದ ಕೆಪಿಸಿಸಿಗೆ ಸಾವಿರಾರು ಕೋಟಿ ಬಾಕಿ ಇದೆ ಎಂದರು.
ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ನಂದಿನಿ ಹಾಲಿನ ದರ ಏಕಾಏಕಿ ಹೆಚ್ಚಳ ಮಾಡಿದ್ದು, ಆ ದರವನ್ನು ಉತ್ಪಾದಕರಿಗೆ ತಕ್ಷಣ ನೀಡುತ್ತೇವೆ ಎಂದು ಹೇಳಿತ್ತು. ಆದರೆ ಅವರಿಗೂ ನೀಡಿಲ್ಲ. ಗ್ರಾಹಕರಿಗೂ ಮೋಸ ಮಾಡಿದೆ. ಸ್ವಾತಂತ್ರ್ಯ ಹೋರಾಟಗಾರರ ಪಠ್ಯವನ್ನು ಕಿತ್ತುಬಿಸಾಕುತ್ತೇವೆ ಎಂದು ಹೇಳಿದ ಮಂತ್ರಿ ಕೂಡ ಈ ಬಗ್ಗೆ ಸುಮ್ಮನಿದ್ದಾರೆ ಎಂದರು.
ಬಿಜೆಪಿಯ ರೈತಮೋರ್ಚಾದ ಜಿಲ್ಲಾಧ್ಯಕ್ಷ ಸಾಲೆಕೊಪ್ಪ ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಕೃಷ್ಣೋಜಿರಾವ್, ವಿನ್ಸೆಂಟ್ ರೋಡ್ರಿಗಸ್, ಜಿಲ್ಲಾ ಪ್ರಭಾರಿ ಬಿ.ಇ. ವಿರೂಪಾಕ್ಷಪ್ಪ, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಶಾಸಕ ಡಿ.ಎಸ್ ಅರುಣ್, ಪ್ರಮುಖರಾದ ಶಿವರಾಜ್, ಎಸ್. ಎಸ್. ಜ್ಯೋತಿಪ್ರಕಾಶ್, ವೀರಭದ್ರಪ್ಪ ಪೂಜಾರಿ, ದಿನೇಶ್ ಬುಳ್ಳಾಪುರ, ತಮ್ಮಡಿಹಳ್ಳಿ ನಾಗರಾಜ್ ಮತ್ತಿತರರಿದ್ದರು.