ಶಿವಮೊಗ್ಗ: ಅನಿಮಿಯತ ವಿದ್ಯುತ್ ಕಡಿತ ಹಾಗೂ ವಿದ್ಯುತ್ ದರ ಏರಿಕೆಯನ್ನು ಜೆಡಿಎಸ್ ಕೋರ್ ಕಮಿಟಿ ಸಂಚಾಲಕ ಕೆ.ಬಿ. ಪ್ರಸನ್ನಕುಮಾರ್ ಖಂಡಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಉಚಿತ ವಿದ್ಯುತ್ ಇರಲಿ, ಹಣ ಕೊಟ್ಟರೂ ವಿದ್ಯುತ್ ಇಲ್ಲದ ಪರಿಸ್ಥಿತಿ ಇದೆ ಎಂದ ಅವರು, ಶಿವಮೊಗ್ಗ ಶಾಂತ ದಿಕ್ಕಿನತ್ತ ನಡೆಯುತ್ತಿದೆ. ಇಂತಹ ಸಮಯದಲ್ಲಿ ಯಾವ ರಾಜಕಾರಣಿಗಳೂ ಕೂಡ ವ್ಯತಿರಿಕ್ತ ಹೇಳಿಕೆ ನೀಡಬಾರದು. ಎಲ್ಲಾ ಧರ್ಮದ ಗೂಂಡಾಗಳ ವರ್ತನೆ ಯನ್ನು ಖಂಡಿಸುತ್ತಾ ಶಾಂತಿ ಕಾಪಾಡಬೇಕಾದ ಹೊಣೆ ಎಲ್ಲಾ ಪಕ್ಷಗಳದ್ದಾಗಿದೆ. ನಮ್ಮ ನಾಯಕರು ಕಡಿಮೆ ಮಾತನಾಡಲಿ ಎಂದರು.
ಜೆಡಿಎಸ್‌ನ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಹೆಚ್.ಡಿ. ಕುಮಾರಸ್ವಾಮಿಯವರು ಆಯ್ಕೆಯಾಗಿದ್ದಾರೆ. ಇದು ಸಂತೋಷದ ವಿಷಯ. ಇದನ್ನು ಜಿಲ್ಲಾ ಜೆಡಿಎಸ್ ಸ್ವಾಗತಿಸುತ್ತದೆ. ಅವರನ್ನು ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೆ ಅಭಿನಂದನೆಗಳು ಎಂದರು.
ಶಿವಮೊಗ್ಗ ದಸರಾ ನಾಡಿನಲ್ಲಿಯೇ ಹೆಸರಾಗಿದ್ದು, ಸರ್ಕಾರ ಕೂಡಲೇ ಒಂದು ಕೋಟಿ ರೂ. ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ತಾವು ಶಾಸಕನಾಗಿದ್ದಾಗ ಕೂಡ ಶಿವಮೊಗ್ಗ ದಸರಾಕ್ಕೆ ೧ ಕೋಟಿ ಅನುದಾನ ತಂದಿದ್ದೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಕೇವಲ ೨೦ಲಕ್ಷ ರೂ. ನೀಡಿದೆ. ಇದು ಯಾವುದಕ್ಕೂ ಸಾಲದು. ಆದ್ದರಿಂದ ತಕ್ಷಣವೇ ಉಳಿದ ೮೦ ಲಕ್ಷ ರೂ.ನೀಡಿ ಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದರು.
ಪ್ರಮುಖರಾದ ತ್ಯಾಗರಾಜ್, ದೀಪಕ್ ಸಿಂಗ್, ಅಬ್ದುಲ್ ವಾಜೀದ್, ಹೆಚ್.ಎಂ. ಸಂಗಯ್ಯ, ರಾಮಕೃಷ್ಣ, ರಘು, ನಾಗೇಶ್, ಮಂಜಪ್ಪ ಗೌಡರು, ಸಿದ್ದಪ್ಪ, ಗೋವಿಂದಪ್ಪ, ವೆಂಕಟೇಶ್ ಇದ್ದರು.